Thursday, March 14, 2013

ಬಿಸಿ ಬಿಸಿ ಬೇಸಿಗೆಗೆ ತಂಪು ತಂಪು ವಿವಿಧ ತಂಬುಳಿಗಳು...


ಬೇಸಿಗೆಯ ಧಗೆಯ ಅನುಭವ ಎಲ್ಲೆಡೆ ಈಗಾಗಲೇ ಶುರುವಾಗಿದೆ.. ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಮೋಡಗಟ್ಟಿದ ವಾತಾವರಣ ಒಳ-ಹೊರಗೆ ತಾಪ ಹೆಚ್ಚಿಸುತ್ತಿದೆ. ದೇಹದ ಉಷ್ಣತೆಯ ಹೆಚ್ಚಳದಿಂದಾಗಿ ಹತ್ತು ಹಲವು ಸಮಸ್ಯೆಗಳು ತಲೆದೋರುವುದು ಸಹಜ. ಹೀಗಿರುವಾಗ ತೆಳ್ಳಗೆ, ತಂಪಾಗಿರುವ ಪದಾರ್ಥವನ್ನು ಸೇವಿಸುವ ಮನಸ್ಸಾಗುವುದು. ನಮ್ಮಲ್ಲಿ ಅಂದರೆ ಹವ್ಯಕರಲ್ಲಿ ವಿವಿಧ ರೀತಿಯ ತಂಬುಳಿಗಳನ್ನು ಮಾಡುತ್ತಾರೆ. ಇವುಗಳನ್ನು ಹಾಗೇ ತಂಫು ಪಾನೀಯದಂತೆಯೋ ಇಲ್ಲಾ ಸೂಪ್‌ನಂತೆಯೋ ಕುಡಿಯಬಹುದು ಇಲ್ಲವೇ ಅನ್ನಕ್ಕೆ ಕಲಸಿ ತಿನ್ನಬಹುದು.

Copy Right : Tejaswini Hegde
ತಂಬುಳಿಗಳ ಉಪಯೋಗಗಳು : - 

೧. ದೇಹದ ಉಷ್ಣತೆಯು ಹೆಚ್ಚಾಗದಂತೇ ತಡೆಯುತ್ತವೆ... ಬಾಯಿ ಹುಣ್ಣು, ಕಣ್ಣುರಿ, ತಲೆ ಸಿಡಿತ, ಹೊಟ್ಟೆಯುರಿ, ಮಲಬದ್ಧತೆ, ಪಿತ್ಥ, ಗಾಸ್ಟ್ರಿಕ್ ಇಂತಹ ರೋಗಗಳಿಂದ ನಮ್ಮನ್ನು ದೂರವಿಡುತ್ತವೆ.

೨. ಕಣ್ಣಿಗೆ, ಉದರಕ್ಕೆ ತಂಪಲ್ಲದೇ ನೆತ್ತಿಗೂ ತಂಪು ತರುತ್ತವೆ. ಎದೆಯುರಿ ಹೆಚ್ಚಾಗಿದ್ದರೆ, ಈ ತಂಬುಳಿಗಳನ್ನು ಮಾಡಿ ಕುಡಿದರೆ ಬಹು ಬೇಗ ಶಮನವಾಗುತ್ತದೆ.

೩. ಆಯಾಸ ಹೆಚ್ಚಾದಾಗ, ಬಾಯಿರುಚಿ ಕೆಟ್ಟಿದೆ ಎಂದೆನಿಸಿದಾಗಲೂ ಇವು ಸಹಕಾರಿಯಾಗಿವೆ.

ಒಟ್ಟಿನಲ್ಲಿ ಬಹೋಪಯೋಗಿ ತಂಬುಳಿಗಳ ಸೇವನೆಯಿಂದ ಆರೋಗ್ಯವು ಸುಧಾರಿಸುವುದಲ್ಲದೇ ಸದೃಢವಾಗಿರುವುದು.


ಮಾಡಲು ಸುಲಭ, ಸರಳ, ಬೇಕಾಗುವ ಪದಾರ್ಥಗಳೂ ಅತ್ಯಂತ ಕಡಿಮೆ. ಆರೋಗ್ಯಕ್ಕೆ ಹಿತಕರ, ಬಾಯಿಗೂ ರುಚಿಕರ ತಂಬುಳಿಗಳನ್ನು ತಯಾರಿಸುವ ವಿಧಾನವೂ ಹೆಚ್ಚು ಕಡಿಮೆ ಒಂದೇ ರೀತಿಯದ್ದಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು - (೩-೪ ಜನರಿಗೆ) :-

ಒಂದು ಕಟ್ಟು ಮೆಂತೆ ಸೊಪ್ಪು/ ಪಾಲಕ್ ಸೊಪ್ಪು/ಅತ್ತಿ ಕುಡಿ (ಯಾವುದಾದರೂ ಒಂದು ಸಾಮಗ್ರಿ)

ಜೀರಿಗೆ - ೧ ಚಮಚ (ಟೇಬಲ್ ಸ್ಪೂನ್)
ಬಿಳೇ ಎಳ್ಳು - ೧/೨ ಚಮಚ
ಇಂಗು - ಒಂದೆರಡು ಕಾಳು...(ಪುಡಿಯಾಗಿದ್ದರೆ ಚಿಟಿಕೆ)
ತುಪ್ಪ ಅಥವಾ ಎಣ್ಣೆ - ೧ - ೨ ಚಮಚ. (ತುಪ್ಪದಲ್ಲಿ ಮಾಡಿದರೆ ಮತ್ತೂ ರುಚಿಕರ ಹಾಗೂ ಆರೋಗ್ಯಕ್ಕೂ ಉತ್ತಮ.)
ತೆಂಗಿನ ತುರಿ - ೪ ಚಮಚ
ಮಜ್ಜಿಗೆ ಅಥವಾ ಮೊಸರು  - ೩-೪ ಸೌಟು.
ಉಪ್ಪು - ರುಚಿಗೆ ತಕ್ಕಷ್ಟು.
ಬೆಲ್ಲ - 1-2 ಚಮಚ
------

ಮೆಂತೆಸೊಪ್ಪಿನ ತಂಬುಳಿ ಮಾಡುವ ವಿಧಾನ : ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಕತ್ತರಿಸಬೇಕು.

ಮೆಂತೆಸೊಪ್ಪಿನ ತಂಬುಳಿ ಮಾಡುವ ಮೊದಲು- ಸೊಪ್ಪನ್ನು ತೊಳೆದಮೇಲೆ ಹೆಚ್ಚಿ, ಸ್ವಲ್ಪ ಉಪ್ಪು ತಿಕ್ಕಿ ೧೦ ನಿಮಿಷ ಇಟ್ಟುಕೊಂಡಿರಬೇಕಾಗುತ್ತದೆ. (ಇದರಿಂದ ಕಹಿಯಂಶ ಕಡಿಮೆಯಾಗಿ ತಿನ್ನಲು ರುಚಿಕರವಾಗಿರುತ್ತದೆ. ಕಹಿ ಅಂಶ ಇಷ್ಟಪಡುವವರು ಹಾಗೇ ಮಾಡಿಕೊಳ್ಳಬಹುದು.)

ಬಾಣಲೆಗೆ ತುಪ್ಪ ಅಥವಾ ಎಣ್ಣೆ ಹಾಕಿ ಜೀರಿಗೆ + ಬಿಳೇ ಎಳ್ಳು +(ಈ ತಂಬುಳಿಗೆ ಬೇಕಿದ್ದರೆ ಮಾತ್ರ ಹಾಕಬಹುದು) ಚಿಟಿಕೆ ಇಂಗು - ಇವುಗಳನ್ನು ಹಾಗಿ ಒಗ್ಗರಿಸಿಕೊಂಡು, ಉಪ್ಪು ತಿಕ್ಕಿಟ್ಟಿದ್ದ ಮೆಂತೆ ಸೊಪ್ಪನ್ನು ಹಿಂಡಿ ಹಾಕಿ ಹುರಿಯಬೇಕು. ಕಹಿ ಬಿಟ್ಟಿರುವ ರಸವನ್ನು ಹಿಂಡಿ ಹಾಕುವುದರಿಂದ ತಿನ್ನುವಾಗ ಕಹಿಯೆನಿಸುವುದಿಲ್ಲ.

ಬಹು ಬೇಗ ಹುರಿದು ಬರುವ ಸೊಪ್ಪನ್ನು ತಣಿಯಲಿಡಬೇಕು. ನೆನಪಿಡಿ ಯಾವುದೇ ಸೊಪ್ಪಿರಲಿ.. ಹುರಿದು ಮಾಡುವಂಥದ್ದಾಗಿದ್ದರೆ, ಸಂಪೂರ್ಣ ತಣಿದ ಮೇಲೆ ಕಾಯಿಹಾಕಿ ರುಬ್ಬಬೇಕು.. ಬಿಸಿ ಇರುವಾಗಲೇ ರುಬ್ಬಿದರೆ ಕಸರು(ಕಮಟು) ವಾಸನೆ ಬರುತ್ತದೆ.

ತಣಿದ ಮೇಲೆ ಕಾಯಿತುರಿಯೊಂದಿಗೆ ನುಣ್ಣಗೆ ರುಬ್ಬಿ, ಮಜ್ಜಿಗೆ + ಉಪ್ಪು ಹಾಕಿ, ತೆಳ್ಳಗೆ ಬೇಕಿದ್ದರೆ ತುಸು ನೀರನ್ನೋ ಇಲ್ಲಾ ಮತ್ತೊಂದು ಸೌಟು ಮಜ್ಜಿಗೆಯನ್ನೋ ಹಾಕಿದರೆ ರುಚಿಕರ ಮೆಂತೆ ತಂಬುಳಿ ರೆಡಿ. ಸಿಹಿಯನ್ನು ಇಷ್ಟಪಡುವವರು... ಕಹಿಯೆನಿಸುವವರು... ಸ್ವಲ್ಪ ಬೆಲ್ಲವನ್ನು ಹಾಕಿ ಕರಗಿಸಿಕೊಳ್ಳಬಹುದು. ಮತ್ತಷ್ಟು ರುಚಿಕರವಾಗುತ್ತದೆ.

ವಿ.ಸೂ : - ೧. ಸೊಪ್ಪನ್ನು ತುಂಬಾ ಹೊತ್ತು ಉಪ್ಪಲ್ಲಿ ಹಾಕಿಡಬೇಡಿ.. ಅದರ ಕಹಿಯಂಶ ಸಂಪೂರ್ಣ ಹೋಗಿ, ಅದರೊಳಗಿನ ಉತ್ತಮ ಸತ್ವವೆಲ್ಲಾ ಉಪ್ಪಲ್ಲಿ ಕರಗಿಹೋಗಬಹುದು! 

೨. ಮಜ್ಜಿಗೆಯ ಬದಲು ಮೊಸರನ್ನೂ ಉಪಯೋಗಿಸಬಹುದು.... ೨-೩ ಸೌಟು ಮೊಸರನ್ನೇ ಮಿಕ್ಸಿಯಲ್ಲಿ ಹಾಕಿ ಒಮ್ಮೆ ತಿರುಗಿಸಿದರೆ ಅದು ತೆಳ್ಳಗಾಗುತ್ತದೆ.. ಅದಕ್ಕೆ ನೀರು ಸ್ವಲ್ಪ ಸೇರಿಸಿ ಬೀಸಿದ ಮಿಶ್ರಣಕ್ಕೆ ಹಾಕಿ ಹದಮಾಡಬಹುದು.


ಪಾಲಾಕ್ ಸೊಪ್ಪಿನ ತಂಬುಳಿ

ಮೇಲೆ ಹೇಳಿದ ಸಾಮಾಗ್ರಿಗಳನ್ನೇ ಉಪಯೋಗಿಸಿ ಒಗ್ಗರಿಸಿಕೊಂಡು, ಹೆಚ್ಚಿಟ್ಟಿದ್ದ ಸೊಪ್ಪನ್ನೂ ಹಾಕಿ ಹುರಿದು, ತಣಿದ ನಂತರ ಕಾಯಿಯೊಂದಿಗೆ ಬೀಸಿ, ಉಪ್ಪು ಮಜ್ಜಿಗೆ ಬೆರೆಸಿದರೆ ಆಯಿತು. ಈ ತಂಬುಳಿಗೆ ಇಂಗು ಹಾಕಿದರೆ ಮತ್ತೂ ರುಚಿಕರ. ಹಾಗಾಗಿ ತಪ್ಪದೇ ಒಗ್ಗರಣೆಗೆ ಹಾಕಿ. ಬೆಲ್ಲವನ್ನು ಹಾಕಬಾರದು.

ಅತ್ತಿಕುಡಿ ತಂಬುಳಿ

ಅತ್ತಿ ಕುಡಿಯ ಹಸಿರಾದ ಚಿಗುರೆಲೆಗಳು - ೧೦-೧೫ (ಬಲಿತ ದೊಡ್ಡ ಎಲೆಗಳಲ್ಲಾ!)... ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಂಡು ಮೇಲೆ ಪಾಲಾಕ್ ಸೊಪ್ಪಿನ ತಂಬುಳಿಯ ವಿಧಾನದಂತೇ ಮಾಡಿಕೊಳ್ಳುವುದು. ಆಮೇಲೆ ಸ್ವಲ್ಪ ಬೆಲ್ಲವನ್ನೂ ಸೇರಿಸಬೇಕು.


ಇದೇ ರೀತಿ ನೆಲನೆಲ್ಲಿತಂಬುಳಿಯನ್ನೂ ಮಾಡುತ್ತಾರೆ..ಆದರೆ ಇದಕ್ಕೆ ಕರಿಮೆಣಸಿನ ಕಾಳುಗಳನ್ನು ಸೇರಿಸುತ್ತಾರಷ್ಟೇ.. ಇದನ್ನು ಮಾಡುವ ವಿಧಾನವನ್ನು ಮೊದಲೇ ವಿವರಿಸಿದ್ದು.. ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ - "ನೆಲನೆಲ್ಲಿ"




ಹುರಿಯದೇ ಹಸಿಯಾಗಿ ಬೀಸಿ ಮಾಡುವ ತಂಬುಳಿಗಳು - 

ಲೆಮನ್ ಗ್ರಾಸ್ ಅಥವಾ ಮಜ್ಜಿಗೆ ಹುಲ್ಲಿನ ತಂಬುಳಿ :- 
೩-೪ ಮಜ್ಜಿಗೆ ಹುಲ್ಲನ್ನು ಕತ್ತರಿಸಿಟ್ಟುಕೊಂಡು ಅದಕ್ಕೆ ಹೆಬ್ಬೆರಳಿನ ಗಾತ್ರದ ಶುಂಠಿಯನ್ನು ಹೆಚ್ಚು ಹಾಕಿ, ಕಾಯಿತುರಿಯೊಂದಿಗೆ (೪-೫ ಚಮಚ) ಹಸಿಯಾಗಿ ಬೀಸಬೇಕು. ತದನಂತರ ಚೆನ್ನಾಗಿ ಸೋಸಿ ಅದರ ರಸವನ್ನಷ್ಟೇ ಹಿಂಡಿ ತೆಗೆದು, ಮಜ್ಜಿಗೆಯನ್ನೋ ಇಲ್ಲಾ ಮೇಲೆ ಹೇಳಿದಂತೇ (ಮೆಂತೆಸೊಪ್ಪಿನ ತಂಬುಳಿಗೆ..) ಮೊಸರನ್ನೋ ಸೇರಿಸಿ, ಉಪ್ಪು ಹಾಕಿದರೆ ಬಲುರುಚಿಕರ, ಆರೋಗ್ಯಕರ ಲೆಮನ್ ಗ್ರಾಸ್ ತಂಬುಳಿ ರೆಡಿ!

ಇದೇ ರೀತಿ ಕೊತ್ತುಂಬರಿ ಸೊಪ್ಪಿನ ತಂಬುಳಿಯನ್ನೂ ಮಾಡುತ್ತಾರೆ. : -
ಒಂದು ಪುಷ್ಠಿ ಕೊತ್ತುಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಅದಕ್ಕೆ ಹೆಬ್ಬೆರಳಿನ ಗಾತ್ರದ ಶುಂಠಿ ಸೇರಿಸಿ ಕಾಯಿಯೊಂದಿಗೆ ಹಸಿಯಾಗಿ ಬೀಸಬೇಕು. ಇದು ನುಣ್ಣಗೆ ಬೀಸಲು ಸಾಧ್ಯವಿರುವುದರಿಂದ ಸೋಸುವ ತಾಪತ್ರವಿಲ್ಲ. ಹಾಗೇ ಬೀಸಿದ ಮಿಶ್ರಣಕ್ಕೆ ಮಜ್ಜಿಗೆ+ಉಪ್ಪು ಬೇಕಿದ್ದರೆ ನೀರು ಹಾಕಿ ಹದಮಾಡಿಕೊಳ್ಳುವುದು. ಈ ತಂಬುಳಿಗೆ ಬೆಲ್ಲ ಹಾಕಲೇಬಾರದು! ರುಚಿಗೆಡುತ್ತದೆ.

---------

ಕರಿಬೇವಿನ ತಂಬುಳಿ, ಈರುಳ್ಳಿ ತಂಬುಳಿ, ವಿಟಮಿನ್ ಎಲೆಯ ತಂಬುಳಿ, ಎಲವರಿಗೆ ಕುಡಿಯ ತಂಬುಳಿ - ಹೀಗೆ ಹತ್ತು ಹಲವುಬಗೆಯ ತಂಬುಳಿಗಳಿವೆ... ಆಸಕ್ತರು ನನ್ನನ್ನು ಮೈಲ್ ಮೂಲಕ ಸಂಪರ್ಕಿಸಬಹುದು :).

-ತೇಜಸ್ವಿನಿ ಹೆಗಡೆ.

Wednesday, August 29, 2012

ಸರಳ, ಸುಲಭ, ಅತಿ ರುಚಿಕರ ಈ ಮೆಂತೆಸೊಪ್ಪು + ಕಡಲೇಹಿಟ್ಟಿನ ಪಲ್ಯ


ಮೆಂತೆಸೊಪ್ಪು(fenugreek leaves) ಬಾಯಿಗೆ ಸ್ವಲ್ಪ ಕಹಿ ಎನಿಸಿದರೂ ದೇಹಕ್ಕೆ ಬಹು ಸಿಹಿ... ಹಿತ. ಸರಿಯಾದ ರೀತಿಯಲ್ಲಿ ಬಳಸಿದರೆ ಕಹಿ ಅಂಶವೂ ಗಮನಕ್ಕೆ ಬಾರದು.  ವಿಟಮಿನ್ ಎ, ಸಿ ಹಾಗೂ ಪೊಟಾಶಿಯಂ, ಕಬ್ಬಿಣ, ಕ್ಯಾಲ್ಶಿಯಂ ಖನಿಜಾಂಶಗಳನ್ನು ಹೊಂದಿರುವ ಮೆಂತೆ ಸೊಪ್ಪು ಹತ್ತು ಹಲವು ರೋಗಗಳಿಗೆ ರಾಮಬಾಣ. ಬಲು ತಂಪು ಈ ಸೊಪ್ಪು.

ಮಧುಮೇಹ, ಮಲಬದ್ಧತೆ, ತಲೆನೋವು, ಕಣ್ಣಿನ ಸಮಸ್ಯೆ, ನೆತ್ತಿಯುರಿ, ಪಿತ್ಥ - ಈ ಎಲ್ಲಾ ರೋಗಗಳನ್ನು ಮೆಂತೆ ಕಾಳು ಹಾಗೂ ಸೊಪ್ಪಿನ ಬಳಕೆಯಿಂದ ದೂರವಿರಿಸಬಹುದು.

ಮಧುಮೇಹಿಗಳಿಗೊಂದು ಚಿಕ್ಕ ಸಲಹೆ : ರಾತ್ರಿ ಸ್ವಲ್ಪ ಮೆಂತೆ ಕಾಳನ್ನು ನೆನೆಸಿಕೊಂಡು ಮರುದಿವಸ ಅದನ್ನು ಬೀಸಿ ಹಸಿಹೊಟ್ಟೆಯಲ್ಲಿ ಕುಡಿಯುವುದರಿಂದ ಬಹು ಬೇಗ ಮಧುಮೇಹ ತಹಬಂದಿಗೆ ಬರುವುದು. ಇಲ್ಲಾ... ಮೆಂತೆಕಾಳನ್ನು ಹಾಗೇ ಹುಡಿ ಮಾಡಿಟ್ಟುಕೊಂಡು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು, ಊಟದ ಸಮಯದಲ್ಲಿ ಮೊದಲ ಕೆಲವು ತುತ್ತುಗಳಿಗೆ ಈ ಹಿಟ್ಟನ್ನು ಕಲಸಿ ತಿನ್ನುವುದರಿಂದಲೂ ತುಂಬಾ ಉಪಕಾರಿ.

ಇನ್ನು ಹಸಿ ಬಾಣಂತಿಯರಲ್ಲಿ ಹಾಲಿನ ಕೊರತೆ ಹಲವು ಬಾರಿ ಕಾಡುವುದು. ಆಗಾಗ ಮೆಂತೆ ಸೊಪ್ಪಿನ ಸೂಪ್, ತಂಬುಳಿ, ಪಲ್ಯ, ಹುಳಿ, ದೋಸೆ ಇತ್ಯಾದಿ ತಿಂಡಿ ಪದಾರ್ಥಗಳ ರೂಪದಲ್ಲಿ ಕೊಡುವುದರಿಂದ, ಸ್ವಲ್ಪ ಮೆಂತೆ ಕಾಳನ್ನು ಬೀಸಿ ಹಾಲಿನೊಂದಿಗೆ ಬೆರೆಸಿಕೊಡುವುದರಿಂದಲೂ ಸಮಸ್ಯೆಯನ್ನು ನಿವಾರಿಸಬಹುದು. (ಇದು ಅನಾದಿಕಲದಿಂದಲೂ ನಡೆಸಿಕೊಂಡು ಬಂದ ರೀತಿ-ನೀತಿ. ಸತ್ಯಕ್ಕೆ ಸತ್ಯವಾದ್ದು. ಹಾಗೂ ವೈಜ್ಞಾನಿಕವಾಗಿಯೂ ಒಪ್ಪಿಕೊಂಡದ್ದು.)

ಇಂತಹ ಬಹೂಪಯೋಗಿ ಮೆಂತೆ ಸೊಪ್ಪನ್ನು ನಮ್ಮ ಕಡೆ (ಶಿರಸಿಯ ಕಡೆ) ತಂಬುಳಿ, ಗೊಜ್ಜು, ದೋಸೆ, ಚಪಾತಿ, ಮೆಂತೆ ರೈಸ್ - ಇತ್ಯಾದಿ ತಿನಿಸುಗಳನ್ನು ತಯಾರಿಸಲು ವಿಶೇಷವಾಗಿ ಬಳಸುತ್ತಾರೆ.

CopyRight : Tejaswini Hegde
ಇತ್ತೀಚಿಗೆ ಮುಂಬಯಿಯಲ್ಲಿದ್ದ ನನ್ನ ಚಿಕ್ಕಮ್ಮ ನಮ್ಮ ಮನೆಗೆ ಬಂದಾಗ ಮೆಂತೆ ಸೊಪ್ಪು + ಕಡಲೇ ಹಿಟ್ಟು ಬೆರೆಸಿ ತಯಾರಿಸುವ ವಿಶೇಷರೀತಿಯ ಸುಲಭ ಸರಳ ಪಲ್ಯವೊಂದನ್ನು ಕಲಿಸಿಕೊಟ್ಟರು. ಇದು ಅಲ್ಲಿಯ ವಿಶೇಷತೆಯಂತೆ! ತಿನ್ನಲು ಬಹು ರುಚಿಕರವಾಗಿತ್ತು. ಬೆಳ್ಳುಳ್ಳಿಯನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಅದು ಕಡಲೇಹಿಟ್ಟಿನೊಳಗಿನ ಗ್ಯಾಸ್ಟ್ರಿಕ್ ಅಂಶವನ್ನು ತೆಗೆಯುವುದು. ಮೆಂತೆಸೊಪ್ಪಿನೊಳಗಿನ ಕಹಿ ಅಂಶವನ್ನು ಕಡಲೇ ಹಿಟ್ಟು ಹೀರಿಕೊಳ್ಳುವುದರಿಂದ ಬಾಯಿಗೆ ಹಿತ. ಹಾಗೆಯೇ ಮೆಂತೆಯೊಳಗಿರುವ ಉತ್ತಮ ಅಂಶಕ್ಕೆ ಬೆಳ್ಳುಳ್ಳಿಯ ಉತ್ತಮ ಅಂಶವೂ ಸೇರುವುದರಿಂದ ಹೊಟ್ಟೆಗೂ ಹಿತ.  

ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು :

೧. ಮೆಂತೆ ಸೊಪ್ಪು (ಹದಾ ದೊಡ್ಡ ಕಟ್ಟು) - ೨
೨. ಈರುಳ್ಳಿ - ೩
೩. ಬೆಳ್ಳುಳ್ಳಿ - ೭-೮ ಎಸಳು
೪. ಕಡಲೇ ಹಿಟ್ಟು - ಒಂದು ಬೌಲ್
೫. ಒಗ್ಗರಣೆಗೆ- ಸಾಸಿವೆ ಮತ್ತು ಉದ್ದಿನಬೇಳೆ - ೧/೪ ಚಮಚ
೬. ಅರಿಶಿನ - ಚಿಟಿಕೆಯಷ್ಟು.
೭. ಮೆಣಸಿನ  ಪುಡಿ (ಖಾರದ ಪುಡಿ) - ನಿಮ್ಮ ಖಾರಕ್ಕೆ ತಕ್ಕಷ್ಟು [ಸಾಮಾನ್ಯವಾಗಿ ೨ ಚಮಚ.]
೮. ಹುಳಿಪುಡಿ - ೧ ಚಮಚ
೯. ಉಪ್ಪು - ರುಚಿಗೆ ತಕ್ಕಷ್ಟು
೧೦. ಒಗ್ಗರೆಣೆಗೆ ಎಣ್ಣೆ - ೫-೬ ಚಮಚ

ಮಾಡುವ ವಿಧಾನ :

೧. ಮೊದಲಿಗೆ ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು. ಹಾಗೆಯೇ ಈರುಳ್ಳಿಯನ್ನೂ ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು.

೨. ಒಗ್ಗರಣೆಗೆ ಎಣ್ಣೆ+ಸಾಸಿವೆ+ಉದ್ದಿನ ಬೇಳೆಯನ್ನು ಹಾಕಿ ಅದು ಚಟಪಟಗುಡುತ್ತಲೇ, ಬೆಳ್ಳುಳ್ಳಿ ಎಸಳುಗಳನ್ನು ಹಾಕಬೇಕು.

೩. ಬೆಳ್ಳುಳ್ಳಿ ಎಸಳುಗಳು ಕಂದು ಬಣ್ಣಕ್ಕೆ ತಿರುಗುತ್ತಲೇ ಹೆಚ್ಚಿಟ್ಟ ಈರುಳ್ಳಿ ಚೂರುಗಳನ್ನು ಹಾಕಿ ಹುರಿಯಬೇಕು.

೪. ಈರುಳ್ಳಿ ಚೂರುಗಳು ಕೆಂಪಾಗುತ್ತಿದ್ದಂತೆಯೇ ಚಿಟಿಕಿ ಅರಿಶಿನ ಹಾಕಿ ತಕ್ಷಣ ಮೆಂತೆ ಸೊಪ್ಪನ್ನು ಹಾಕಬೇಕು.

ನೆನಪಿಡಿ - ಅರಿಶಿನವನ್ನು ಈರುಳ್ಳಿ ಬೆಂದ ನಂತರವೇ ಹಾಕಿ, ಮೆಂತೆ ಸೊಪ್ಪನ್ನು ಹಾಕುವ ಮೊದಲಷ್ಟೇ ಹಾಕಬೇಕು. ಮೊದಲೇ ಅರಿಶಿನ ಹಾಕಿದರೆ ಅದು ಸೀದು ಹೋಗುವ ಸಂಭವವಿರುತ್ತದೆ.

೫. ಮೆಂತೆ ಸೊಪ್ಪು ಹಾಕಿದ ಮೇಲೆ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರದ ಹುಡಿಗಳನ್ನು ಹಾಕಿ ಕಲಸಿ ಒಗ್ಗರಣೆಯ ಎಣ್ಣೆಯಲ್ಲೇ ೩ ನಿಮಿಷ ಬೇಯಲು ಬಿಡಬೇಕು.

೬. ಮಿಶ್ರಣ ತುಸು ಬೆಂದ ಮೇಲೆ ಕಡಲೇ ಹಿಟ್ಟನ್ನು ಮೇಲಿನಿಂದ ಉದುರಿಸುತ್ತಾ ಹೋಗಬೇಕು. ಕಡಲೇ ಹಿಟ್ಟು ಮೆಂತೆಸೊಪ್ಪಿನ ಮಿಶ್ರಣವನ್ನು ಸಂಪೂರ್ಣ ಕವರ್ ಆಗುವಂತೇ ಹಾಕಬೇಕು. ಕಲಸಬಾರದು.

೭. ಕಡಲೇ ಹಿಟ್ಟು ಮೆಂತೆಸೊಪ್ಪನ್ನು ಸಂಪೂರ್ಣ ಆವರಿಸಿಕೊಂಡ ಮೇಲೆ ಮುಚ್ಚಿಟ್ಟು ೫ ನಿಮಿಷ ಹಾಗೇ ಬೇಯಿಸಬೇಕು (ಕಲಸಬಾರದು... ಆಗಾಗ ಮುಚ್ಚಳ ತೆಗೆದು ಉಗಿ ಕಡಿಮೆ ಮಾಡಬಾರದು). ಸೊಪ್ಪಿನೊಳಗಿರುವ ನೀರಿನಲ್ಲೇ ಕಡಲೇಹಿಟ್ಟು ಸ್ವಲ್ಪ ಬೇಯುವುದು.

೮. ತದನಂತರ ಮುಚ್ಚಳ ತೆಗೆದು ಚೆನ್ನಾಗಿ ಕಲಸುತ್ತಾ, ತೊಳಸುತ್ತಾ ಕಡಲೇಹಿಟ್ಟು ಸರಿಯಾಗಿ ಬೇಯುವವರೆಗೆ ೫ - ೬ ನಿಮಿಷ ಬೇಯಿಸಿ ಗ್ಯಾಸ್ ನಂದಿಸಿಬಿಡಿ.

ಕಡಲೇ ಹಿಟ್ಟು ಚೆನ್ನಾಗಿ ಬೆಂದರೆ ಪಲ್ಯ ತಿನ್ನಲು ತಯಾರೆಂದು ಲೆಕ್ಕ. ಅರೆಬೆಂದರೆ ಹೊಟ್ಟೆಗೆ ಹಾಳು. ಹಾಗಾಗಿ ಮುಚ್ಚಿಟ್ಟು ತುಸು ಹೊತ್ತು ಬೇಯಿಸಿದ ನಂತರ, ತಳ ಹಿಡಿಯದಂತೇ ಆಗಾಗ ತೊಳೆಸುತ್ತಾ ಬೇಯಿಸುವುದು ಅತಿ ಅವಶ್ಯಕ. 

ಒಮ್ಮೆ ತಿಂದರೆ ಮಗದೊಮ್ಮೆ ಬಯಸುವಷ್ಟು ರುಚಿಕರ ಈ ಪಲ್ಯ. ಗಮನವಿಟ್ಟು ಮಾಡಿದರೆ ೧೫ ನಿಮಿಷದೊಳಗೆ ಪಲ್ಯ ರೆಡಿ (ಹೆಚ್ಚಿಕೊಳ್ಳುವ ಸಮಯ ಬಿಟ್ಟು :)).

-ತೇಜಸ್ವಿನಿ ಹೆಗಡೆ.

Thursday, September 22, 2011

ದಿಢೀರ್ ರವಾ ಮೊಸರು ಇಡ್ಲಿ


©: Tejaswini Hegde

ಸಿಹಿ ಇಡ್ಲಿ, ಚಪ್ಪೆ ಇಡ್ಲಿ, ಕೊಟ್ಟೆ ಇಡ್ಲಿ, ಮೂಡೆ (ದಕ್ಷಿಣ ಕನ್ನಡದ ಕಡೆಯ ವಿಶೇಷ ತಿನಿಸು), ಸವತೆ ಇಡ್ಲಿ, ಹಲಸಿನ ಹಣ್ಣಿನ ಇಡ್ಲಿ, ಉದ್ದು ರವಾ ಇಡ್ಲಿ, ಉದ್ದು ಅಕ್ಕಿತರಿ ಇಡ್ಲಿ - ಹೀಗೇ ನಾನಾ ತರಹದ ಇಡ್ಲಿಗಳಿವೆ. ಬಹುತೇಕೆ ಹೆಚ್ಚಿನ ಇಡ್ಲಿಗಳಲ್ಲಿ ಉದ್ದು ಪ್ರಧಾನ ವಸ್ತುವಾಗಿರುತ್ತದೆ. ಉದ್ದನ್ನು ಹಿಂದಿನ ದಿನವೇ ೨ ತಾಸಾದರೂ ನೆನೆಹಾಕಿಟ್ಟು, ರುಬ್ಬಿ, ಬುರುಗು ತರಿಸಿ ಅದಕ್ಕೆ ಅಕ್ಕಿತರಿಯನ್ನೋ ಇಲ್ಲಾ ರವೆಯನ್ನು ಹುರಿದೋ ಸೇರಿಸಿ ಮರುದಿವಸ ಹೊಯ್ಯುವುದು ಇಡ್ಲಿ ತಯಾರಿಕೆಯ ಸಾಂಪ್ರದಾಯಿಕ  ವಿಧಾನ ಎನ್ನಬಹುದು. 

ಆದರೆ ಒಮ್ಮೊಮ್ಮೆ ಉಪವಾಸ ವ್ರತ ದಿವಸಗಳಲ್ಲಿ ಉದ್ದಿನ ಜೊತೆ ಅಕ್ಕಿತರಿ ಬಳಸುವಂತಿರುವುದಿಲ್ಲ... ಮತ್ತೆ ಯಾವಾಗಲೋ ಉದ್ದನ್ನು ನೆನೆಹಾಕಲೇ ಮರೆತು ಬಿಡುತ್ತೇವೆ. ಇನ್ನು ಕೆಲವರಿಗೆ ರವೆ+ಉದ್ದಿನ ಇಡ್ಲಿ ಅಷ್ಟು ಸೇರಿಬರದು. (ಉದಾ:ನಾನೇ:)). ಹೀಗಿರುವಾಗ ಬರೀ ಅಕ್ಕಿತರಿಯನ್ನೋ ಇಲ್ಲಾ ಬರೀ ಉದ್ದನ್ನೋ ಹಾಕಿ ಮಾತ್ರ ಇಡ್ಲಿತಯಾರಿಸಲಾಗದು. ಹಲವರಿಗೆ ಉದ್ದು ಆರೋಗ್ಯಕ್ಕೆ ಸರಿ ಬರದು. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬೆಳ ಬೆಳಗ್ಗೆ ಉದ್ದಿನ ತಿಂಡಿಯನ್ನು ಸೇವಿಸಲು ಇಷ್ಟಪಡರು. ಹೀಗಿರುವಾಗ ರವಾ ಮೊಸರು ಇಡ್ಲಿ ಬಹು ಉಪಯೋಗಿ.

ಬೆಳಿಗ್ಗೆ ಎದ್ದ ಕೂಡಲೇ ಏನು ತಿಂಡಿ ಮಾಡಲಿ ಎಂದು ಚಿಂತಿಸುವವರಿಗೆ, ಮನೆಯಲ್ಲಿ ನೆಂಟರಿಷ್ಟರು ತುಂಬಿದ್ದಾಗ, ಉದ್ದು ನೆನೆಹಾಕಲು ಮರೆತು ಪೇಚಾಡುವ ಪ್ರಸಂಗ ಎದುರಾದಾಗ ಈ ದಿಢೀರ್ ಮೊಸರು ರವಾ ಇಡ್ಲಿ ಅತ್ಯುತ್ತಮ ತಿಂಡಿ. ತಯಾರಿಸುವುದೂ ಸುಲಭ, ರುಚಿಕರ ಹಾಗೂ ಆರೋಗ್ಯಕರ. ಆದರೆ ಇದನ್ನು ತಯಾರಿಸಲು ಪ್ರಮುಖವಾಗಿ ಸ್ವಲ್ಪ ಹೆಚ್ಚು ಮೊಸರು ಬೇಕಾಗುತ್ತದೆ. ಹೆಪ್ಪು ಹಾಕಿಡಲು ಮರೆತರೂ ಅಂಗಡಿಗಳಲ್ಲಿ ಮೊಸರು ಸಿಗುವುದರಿಂದ ತಯಾರಿಸಲು ಪರದಾಡಬೇಕೆಂದಿಲ್ಲ.

ಬೇಕಾಗುವ ಸಾಮಗ್ರಿಗಳು (೨೭-೩೦ ಇಡ್ಲಿಗಳಿಗೆ)

ಕಡಲೇ ಬೇಳೆ - ೨ ಚಮಚ
ಹಸಿಮೆಣಸು - ೧-೨
ಕುತ್ತೊಂಬರಿ ಸೊಪ್ಪು - ಒಂದು ಮುಷ್ಟಿ
ಸಾಸಿವೆ - ೧/೪ ಚಮಚ
ಕರಿಬೇವು - ೨-೩ ಎಸಳು (೧೦-೧೫ ಎಲೆ)
ತುಪ್ಪ ಅಥವಾ ತೆಂಗಿನೆಣ್ಣೆ - ೨-೩ ಚಮಚ 
ಕ್ಯಾರಟ್ - ೧ (ಚಿಕ್ಕ ಗಾತ್ರದ್ದದರೆ ೨)
ರವೆ - ೩ ಲೋಟ 
ಮೊಸರು - ೩ ಲೋಟ
ಬೇಕಿದ್ದಲ್ಲಿ ಚಿಟಿಕೆ ತಿನ್ನುವ ಸೋಡ (ಬೇಕಿಂಗ್ ಸೋಡ)

ಮಾಡುವ ವಿಧಾನ

*ಮೊದಲು ಕೊತ್ತುಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಂಡು, ಕ್ಯಾರೆಟ್ ಅನ್ನು ತುರಿದಿಟ್ಟುಕೊಳ್ಳಬೇಕು.

* ತುಪ್ಪ ಅಥವಾ ಅಡುಗೆ ಎಣ್ಣೆಯನ್ನು ಹಾಕಿ ಒಗ್ಗರಣೆಗೆ ಇಡಬೇಕು. ಸಾಸಿವೆ ಚಟಗುಟ್ಟಿದ ನಂತರ ಕಡಲೇಬೇಳೆ ಹಾಕಿ ಅದು ಕೆಂಪಾಗುವಷ್ಟು ಹುರಿಯಬೇಕು. ಅದಕ್ಕೆ ಹಸಿಮೆಣಸು, ಕರಿಬೇವು ಎಲೆಗಳನ್ನು ಹಾಕಿ ಅವು ಗರಿಯಾದ ನಂತರ ರವೆಯನ್ನು ಹಾಕಬೇಕು. ಉಪ್ಪಿಟ್ಟಿಗೆ ಹುರಿದಷ್ಟು ಹುರಿಯಬೇಕೆಂದಿಲ್ಲ. ರವೆ ಬಿಡಿ ಬಿಡಿ ಆಗುವಷ್ಟು, ತುಸು ಬಿಸಿಯಾಗಿ ಒಗ್ಗರಣೆಯೊಂದಿಗೆ ಬೆರೆಯುವಷ್ಟು ಅಂದರೆ ಸುಮಾರು ೨-೩ ನಿಮಿಷವಷ್ಟೇ ಹುರಿದರೆ ಸಾಕು. 
(ಸೂಚನೆ : ಹುರಿಯುವಾಗ ಮೇಲಿನ ಪದಾರ್ಥಗಳೊಡನೆ ಬೇಕಿದ್ದಲ್ಲಿ ಗೋಡಂಬಿ, ದ್ರಾಕ್ಷಿಗಳನ್ನೂ ಹಾಕಿ ಹುರಿಯಬಹುದು.)

*ಹುರಿದ ಮಿಶ್ರಣ ತಣಿದ ಮೇಲೆ ಅದಕ್ಕೆ ಮೊಸರನ್ನು ಹಾಕಿ ಗಟ್ಟಿಯಾಗಿ ಇಡ್ಲಿ ಹಿಟ್ಟಿನ ಹದಕ್ಕೇ ಕಲಸಬೇಕು. ನೀರು ಹಾಕದಿದ್ದರೆ ಉತ್ತಮ. ಒಂದೊಮ್ಮೆ ಮೊಸರು ಸ್ವಲ್ಪ ಕಡಿಮೆ ಬಿದ್ದಲ್ಲಿ ಅರ್ಧ ಲೋಟ ನೀರು ಹಾಕಬಹುದು. ಹಿಟ್ಟು ಮಾತ್ರ ತೆಳ್ಳಗಾಗಬಾರದು, ಇಡ್ಲಿ ಹಿಟ್ಟಿನ ಹದಕ್ಕೇ ಬರಬೇಕು.

* ಈ ಮಿಶ್ರಣಕ್ಕೆ ತುರಿದಿಟ್ಟ ಕ್ಯಾರೆಟ್ ಹಾಗೂ ಕುತ್ತೊಂಬರಿ ಸೊಪ್ಪನ್ನು ಹಾಕಿ, ಉಪ್ಪು ಸೇರಿಸಿ, ಬುರುಗು ಬರಲು ಬೇಕಿದ್ದಲ್ಲಿ ಚಿಟಿಕೆ ಬೇಕಿಂಗ್ ಸೋಡ ಹಾಕಿ ಕದಡಿ ೨ ನಿಮಿಷ ಹಾಗೇ ಬಿಡಬೇಕು. (ನೀವು ತಿನ್ನುವ ಸೋಡ ಬಳಸಿದರೆ, ಹಿಟ್ಟು ತಕ್ಷಣ ಬುರುಗು ಬಿಡತೊಡಗುತ್ತದೆ.) 

* ಇಡ್ಲಿ ಹಿಟ್ಟನ್ನು ಇಡ್ಲಿಪಾತ್ರೆಗೆ ಹೊಯ್ದು ಬೇಯಿಸಿದರೆ ಬಿಸಿ ಬಿಸಿ ಮೊಸರು ರವಾ ಇಡ್ಲಿ ತಿನ್ನಲು ತಯಾರು. ಸಾಂಬಾರ್ ಅಥವಾ ಸಾರಿಗಿಂತಲೂ ಕಾಯಿಚಟ್ನಿಯೊಂದಿಗೆ ಇದನ್ನು ಸೇವಿಸಲು ಬಲು ರುಚಿಕರ. 

ಕ್ಯಾರಟ್, ಕರಿಬೇವು, ಕೊತ್ತುಂಬರಿ ಸೊಪ್ಪು ಹಾಕುವುದರಿಂದ ಆರೋಗ್ಯಕ್ಕೂ ಉತ್ತಮವಾದ ತಿನಿಸು... ತಯಾರಿಸಲು ಬಲು ಸುಲಭ.

-ತೇಜಸ್ವಿನಿ ಹೆಗಡೆ.

Thursday, February 03, 2011

ಬಾಯಲ್ಲಿ ನೀರೂರಿಸುವ ಬಟಾಣಿ ಸಾರು

http://guide2herbalremedies.com

ಬಟಾಣಿ ಸಾರನ್ನು ಬಹು ಸುಲಭವಾಗಿ, ಹೆಚ್ಚು ಸಾಮಗ್ರಿಗಳನ್ನು ಬಳಸದೇ ತಯಾರಿಸಬಹುದು. ಬಿಸಿ ಬಿಸಿ ಅನ್ನಕ್ಕೆ ಕಲಸಿ ತಿನ್ನಲು ಈ ಸಾರು ತುಂಬಾ ಚೆನ್ನಾಗಿರುತ್ತದೆ. ಬೆಳ್ಳುಳ್ಳಿ, ಈರುಳ್ಳಿ, ಇಂಗುಗಳನ್ನು ಬಳಸುವುದರಿಂದ ವಾಯುಪ್ರಯೋಕದ ಭಯವೂ ಇರದು. ಬಟಾಣಿ ಕಾಳನ್ನು ಸಮೋಸ, ಫಲಾವ್, ಘೀ ರೈಸ್‌ಗಳ ತಯಾರಿಕೆಯಲ್ಲೂ ಸಾಮಾನ್ಯವಾಗಿ ಬಳಸುತ್ತಾರೆ. ಬಟಾಣಿ ಕಾಳಿನ ಪಕೋಡ ಕೂಡ ತುಂಬಾ ಚೆನ್ನಾಗಿರುತ್ತದೆ.

ಆರೋಗ್ಯಕರ ಹಾಗೂ ಬಹೋಪಯೋಗಿ ಬಟಾಣಿ

೧. ಸಂಶೋಧನೆಗಳ ಪ್ರಕಾರ ಬಟಾಣಿ ಕಾಳು ವಿಟಮಿನ್‌ಗಳ "ಪವರ್ ಹೌಸ್". ಇದರಲ್ಲಿ ವಿಟಮಿನ್ ಎ, ಬಿ ಹಾಗೂ ಸಿಗಳು ಹೇರಳವಾಗಿದೆ. 
೨. ಇದರ ಸೇವನೆ ಮೂಳೆಗಳ ಬಲ ವೃದ್ಧಿಗೆ, ರಕ್ತ ಪರಿಚಲನೆಗೆ, ರಕ್ತ ಹೆಪ್ಪುಗಟ್ಟುವಿಕೆಗೂ ತುಂಬಾ ಉಪಯುಕ್ತ. ಹೇರಳ ಪ್ರೋಟೀನ್ ಹೊಂದಿರುವ ಬಟಾಣಿ "ಒಸ್ಟಿಯೋಪೋರೋಸಿಸ್"(ಮೂಳೆ ತೆಳ್ಳಗಾಗುವಿಕೆ, ಮೂಳೆ ಕರಗುವಿಕೆ) ರೋಗನಿವಾರಣೆಗೆ ಅತ್ಯಗತ್ಯವಾದ ವಿಟಮಿನ್ ಕೆ ಅನ್ನೂ ಹೊಂದಿದೆ.
೩. ಇವುಗಳಲ್ಲಿ ನಾರಿನಂಶ ಹೆಚ್ಚಾಗಿದ್ದು, ಕೊಬ್ಬಿನಂಶ ತೀರಾ ಕಡಿಮೆ ಹಾಗು ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ.


ಸಾರಿನ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು

ನೆನೆಸಿದ ಬಟಾಣಿ ಕಾಳು - ೧ ಲೋಟ (ತೀರಾ ದೊಡ್ಡದೂ ಅಲ್ಲ, ಅತಿ ಚಿಕ್ಕದೂ ಅಲ್ಲ)
[Note : ಹಸಿ ಬಟಾಣಿಯಾಗಿದ್ದಲ್ಲಿ ಹಾಗೇ ಬೇಯಿಸುವುದು.. ನೆನೆಸಬೇಕೆಂದಿಲ್ಲ.]
ಟೊಮೆಟೋ - ೧
ಕೊತ್ತುಂಬರಿ ಬೀಜ - ೧-೨ ಚಮಚ (ಚಿಕ್ಕ ಚಮಚ)
ಕಾಯಿ ತುರಿ - ೧ ಬಟ್ಟಲು (ಬೌಲ್)
ಅರಿಶಿನ - ಚಿಟಿಕೆ
ಬೆಳ್ಳುಳ್ಳಿ - ೨-೩ ಎಸಳು
ಈರುಳ್ಳಿ - ೧ (ಮಧ್ಯಮ ಗಾತ್ರದ್ದು)
ಇಂಗು - ಚಿಟಿಕೆ (**ಬೆಳ್ಳುಳ್ಳಿ ಹಾಕುವುದರಿಂದ ಇಂಗು ಹಾಕಲೇ ಬೇಕೆಂದಿಲ್ಲ. ಆದರೆ ಇಂಗು ಬಟಾಣಿ ಕಾಳಿನೊಳಗಿನ ವಾಯುವಿನ ಪ್ರಭಾವವನ್ನು ತಗ್ಗಿಸುವುದರಿಂದ ಬಳಸಿದರೆ ಉತ್ತಮ.)
ಕೆಂಪು ಮೆಣಸು - ೨-೩ (ಖಾರಕ್ಕೆ ತಕ್ಕಂತೆ)
ಹುಳಿ - ಗೋಲಿಯಾಕಾರದಷ್ಟು
ಉಪ್ಪು ಹಾಗೂ ಬೆಲ್ಲ - ರುಚಿಕೆ ತಕ್ಕಷ್ಟು
ಮೆಂತೆ - ೩-೪ ಕಾಳು (**ಹೆಚ್ಚು ಹಾಕಬಾರದು... ಮೆಂತೆ ಹಾಕುವುದರಿಂದ ಸಾರು ತುಸು ದಪ್ಪಗಾಗಿ ತಿನ್ನಲು ಚೆನ್ನಗಾಗುತ್ತದೆ. ಹಾಗಾಗಿ ಕೇವಲ ಕೆಲವು ಕಾಳುಗಳನ್ನಷ್ಟೇ ಹಾಕಬೇಕು. ತುಂಬಾ ಹಾಕಿದರೆ ಕಹಿ ಆಗುವುದು!)

ಮಾಡುವ ವಿಧಾನ

* ಮೊದಲು ಚೆನ್ನಾಗಿ ನೆನೆದ ಬಟಾಣಿ ಕಾಳುಗಳ ಜೊತೆ ಒಂದು ಟೊಮೆಟೊ ಹೆಚ್ಚಿಹಾಕಿ, ಕುಕ್ಕರಿನಲ್ಲಿಟ್ಟು ಒಂದು ವಿಸಿಲ್ ಹಾಕಿ ಬೇಯಿಸಿಟ್ಟುಕೊಳ್ಳಬೇಕು.
* ಈರುಳ್ಳಿಯನ್ನು ಎರಡು ಭಾಗ ಮಾಡಿ, ಅದರಲ್ಲಿ ಒಂದು ಭಾಗವನ್ನು ಮಾತ್ರ ಹಾಗೇ ಸಾರಿನೊಂದಿಗೆ ಬೆರೆಸಿ ಕುದಿಸುವಂತೆ ಹೆಚ್ಚಿಕೊಳ್ಳಿ. ಇನ್ನೊಂದು ಭಾಗವನ್ನು ರುಬ್ಬಲು ಬಳಸಬೇಕು. (ಅರ್ಧ ಭಾಗವನ್ನು ಸಾರಿನೊಂದಿಗೆ ಕುದಿಸುವ ಬದಲು ಹಾಗೇ ಪೂರ್ತಿ ಈರುಳ್ಳಿಯನ್ನು ರುಬ್ಬಿಯೂ ಹಾಕಬಹುದು)
* ಕಾಯಿತುರಿಗೆ ಕೆಂಪು ಮೆಣಸು, ಮೆಂತೆ, ಕೊತ್ತೊಂಬರಿ ಬೀಜ, ಅರ್ಧ ಭಾಗ ಈರುಳ್ಳಿ, ಬೆಳ್ಳುಳ್ಳಿ,  ಅರಿಶಿನ - ಇವಿಷ್ಟನ್ನೂ ಹಾಕಿ ನುಣ್ಣಗೆ ಬೀಸಿಕೊಳ್ಳಬೇಕು
* ಬೆಂದ ಟೊಮೆಟೋ ಹಾಗೂ ಕಾಳುಗಳಿಗೆ ಬೀಸಿದ ಮಸಾಲೆಯನ್ನು ಹಾಕಿ ಬೇಕಾದ ಪ್ರಮಾಣದಲ್ಲಿ ನೀರನ್ನು ಹಾಕಬೇಕು. ಇದಕ್ಕೆ ಹೆಚ್ಚಿಟ್ಟುಕೊಂಡಿರುವ ಉಳಿದರ್ಧ ಈರುಳ್ಳಿ, ಉಪ್ಪು, ಬೆಲ್ಲ, ಹುಳಿಯನ್ನು ಹಾಕಿ ಚೆನ್ನಾಗಿ ಕುದಿಸಿ.
* ಕುದಿದ ಮೇಲೆ ಸಾಸಿವೆ ಒಗ್ಗರಣೆ ಬೇಕಿದ್ದರೆ ಹಾಕಬಹುದು.
* ಬಿಸಿ ಬಿಸಿ ಅನ್ನದೊಂದಿಗೆ ಈ ಸಾರು ಸೂಪರ್ಬ್! ವ್ಹಾ ಎಂದು ಚಪ್ಪರಿಸದಿದ್ದರೆ ಹೇಳಿ :)
(ಬೇಕಿದ್ದರೆ ಸ್ವಲ್ಪ ಕೊತ್ತುಂಬರಿ ಸೊಪ್ಪನ್ನೂ ಕೊನೆಯಲ್ಲಿ ಹಾಕಬಹುದು.)

-ತೇಜಸ್ವಿನಿ ಹೆಗಡೆ


Wednesday, January 19, 2011

ಬಹೋಪಯೋಗಿ ಕಲ್ಲಂಗಡಿ ಹಣ್ಣಿನ ತಿರುಳಿನ ದೋಸೆ

ಕಲ್ಲಂಗಡಿ ಹಣ್ಣಿನಲ್ಲಿರುವಷ್ಟು ನೀರಿನ ಪ್ರಮಾಣ ಬೇರಾವ ಹಣ್ಣಿನಲ್ಲೂ ಕಾಣಸಿಗದು. ಇದರ ಜ್ಯೂಸ್ ಹೊಟ್ಟೆಗೊಂದೇ ಅಲ್ಲಾ ಕಣ್ಣಿಗೂ ತಂಪು. ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿರುವುದರಿಂದ ಇದನ್ನು ಯಾರೂ ಸೇವಿಸಬಹುದು. ಅತ್ಯಲ್ಪ ಕ್ಯಾಲೊರಿಯನ್ನು ಹೊಂದಿರುವ ಹಣ್ಣು ಬಹೋಪಯೋಗಿಯೂ ಹೌದು. ಇದರಲ್ಲಿ ಪೊಟಾಶಿಯಂ  ಹಾಗೂ ವಿಟಮಿನ್ ’ಸಿ’ ಅತ್ಯಧಿಕ ಪ್ರಮಾಣದಲ್ಲಿದ್ದು, ಇದರ ಸೇವನೆಯಿಂದ ರಕ್ತದೊತ್ತಡವನ್ನು ಕಡಿಮೆಗೊಳಿಸಬಹುದು. ಅದೂ ಅಲ್ಲದೇ ಹೃದ್‌ರೋಗಕ್ಕೆ, ಕೆಲವೊಂದು ಕ್ಯಾನ್ಸರ್ ಚಿಕಿತ್ಸೆಗೆ ಇದನ್ನು ಔಷಧಿಯನ್ನಾಗಿ ಬಳಸುವುದೂ ತಿಳಿದುಬಂದಿದೆ.

ಕಲ್ಲಂಗಡಿ ಹಣ್ಣಿನ ಹೆಚ್ಚಿನ ಉಪಯೋಗಗಳನ್ನು ತಿಳಿಯಲು ಈ ಕೆಳಗಿನ ಲಿಂಕ್‌ಗೆ ತಪ್ಪದೇ ಭೇಟಿಕೊಡಿ.

http://home.howstuffworks.com/watermelon3.htm

ಈ ಹಣ್ಣನ್ನು ತಿರುಳು ಸಹಿತ ನುಣ್ಣಗೆ ಬೀಸಿ ಲೇಪದಂತೆ ಮಾಡಿಕೊಂಡು ಮೈ, ಕೈಗೆ ಹಚ್ಚಿಕೊಂಡರೆ ತ್ವಚೆ ನುಣುಪಾಗುವುದು, ಕಲೆರಹಿತವಾಗುವುದು ಅಲ್ಲದೇ ಸುಕ್ಕುಗಳು ಕ್ರಮೇಣ ಮಾಯವಾಗುವುವು. ಉರಿಮೂತ್ರಕ್ಕೆ ಇದು ದಿವ್ಯೌಷಧಿಯಾಗಿದೆ. ಅಲ್ಲದೇ ಕಿಡ್ನಿ ಸ್ಟೋನ್ ತಡೆಗಟ್ಟಲೂ ಇದು ತುಂಬಾ ಸಹಕಾರಿಯಾಗಿರುವುದು ತಿಳಿದು ಬಂದಿದೆ.

ಕಲ್ಲಂಗಡಿ ಹಣ್ಣಿನಿಂದ ಪಾಯಸ, ದೋಸೆ ಹಾಗೂ ಜ್ಯೂಸ್‌ಗಳನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ. ಪ್ರಸ್ತುತ ಇಲ್ಲಿ ಇದರ ತಿರುಳಿನಿಂದ ರುಚಿಕರವಾದ ದೋಸೆಯನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದೇನೆ. ಹಣ್ಣಿನ ಕೆಂಪಾದ ಮೇಲ್ಭಾಗವನ್ನು ಮಾತ್ರ ತಿಂದು ಅದರ ಬಿಳಿಯಾದ ಭಾಗ ಅಂದರೆ ತಿರುಳನ್ನು ಬಿಸುಟದೇ ಅದರಲ್ಲೇ ಸ್ವಾದಭರಿತ ದೋಸೆಯನ್ನು ತಯಾರಿಸಬಹುದಾಗಿದೆ. ಅಲ್ಲದೇ ತಿರುಳನ್ನು ನುಣ್ಣಗೆ ಬೀಸಿ ಮುಖಗಳಿಗೆ, ಕೈ ಕಾಲುಗಳಿಗೆ ಹಚ್ಚಿಕೊಂಡರೂ ತ್ಚಚೆಯ ಕಾಂತಿಯು ಹೆಚ್ಚುತ್ತದೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಹಾಗಾಗಿ ಇನ್ನು ಮುಂದೆ ತಿರುಳನ್ನು ಬಿಸುಟದಿರಿ. 

ಬೇಕಾಗುವ ಸಾಮಗ್ರಿಗಳು

* ಅಕ್ಕಿ - ೧ ಲೋಟ
* ಕಲ್ಲಂಗಡಿ ಹಣ್ಣಿನ ತಿರುಳಿನ ಚೂರುಗಳು (ಬಿಳಿಭಾಗದ ಹೋಳುಗಳು) - ೨ ಲೋಟ
* ಮೆಂತೆ - ೧/೨ ಚಮಚ
* ಜೀರಿಗೆ - ೧/೨ ಚಮಚ
* ಉಪ್ಪು - ರುಚಿಗೆ ತಕ್ಕಷ್ಟು
* ತಂಗಿನೆಣ್ಣೆ - ಸ್ವಲ್ಪ 

ತಯಾರಿಸುವ ವಿಧಾನ

* ಮೊದಲಿಗೆ ಅಕ್ಕಿ ಹಾಗೂ ಮೆಂತೆಯನ್ನು ನಾಲ್ಕು ಗಂಟೆಗಳ ಕಾಲ ನೆನೆಯಲು ಬಿಡಬೇಕು.
* ಕಲ್ಲಂಗಡಿ ಹಣ್ಣಿನ ಬಿಳಿ ಭಾಗವನ್ನು (ತಿರುಳನ್ನು) ಚೆನ್ನಾಗಿ ತೊಳೆದು ಸಣ್ಣ ಹೋಳುಗಳನ್ನಾಗಿಸಿಟ್ಟುಕೊಳ್ಳಬೇಕು.
* ಚೆನ್ನಾಗಿ ನೆನೆದ ಅಕ್ಕಿ ಹಾಗೂ ಮೆಂತೆಯನ್ನು ತಿರುಳಿನ ಚೂರುಗಳು ಹಾಗೂ ಜೀರಿಗೆಯ ಜೊತೆಗೆ ನುಣ್ಣಗೆ ರುಬ್ಬಬೇಕು.
* ನಂತರ ಈ ರುಬ್ಬಿದ ಮಿಶ್ರಣಕ್ಕೆ ದೋಸೆ ಹಿಟ್ಟಿನ ಹದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿ, ಉಪ್ಪನ್ನು ಸೇರಿಸಬೇಕು.
* ಕಾವಲಿಯಲ್ಲಿ ಈ ಹಿಟ್ಟನ್ನು ತೆಳ್ಳಗೆ ಹೊಯ್ದು ಮೇಲಿನಿಂತ ಸ್ವಲ್ಪ ತೆಂಗಿನೆಣ್ಣೆಯನ್ನು ಬಿಟ್ಟು ಕೆಂಪಗೆ ಕಾಯಿಸಬೇಕು.
* ಬಿಸಿ ಬಿಸಿಯಾದ ದೋಸೆಯನ್ನು ಕಾಯಿ ಚಟ್ನಿಯೊಂದಿಗೆ ಸೇವಿಸಲು ಬಲು ರುಚಿಕರವಾಗಿರುತ್ತದೆ.

-ತೇಜಸ್ವಿನಿ.

Wednesday, January 12, 2011

ಕುರು ಕುರೆನ್ನುವ ತಿಂಗಳವರೆ ಹಾಗೂ ಅಕ್ಕಿ ಹಿಟ್ಟಿನ ಕರೆ (ಖಾರದ ಕಡ್ಡಿ)

ನಮ್ಮಲ್ಲಿ ಖಾರದ ಕಡ್ಡಿಗೆ "ಕರೆ" ಎಂದು ಕರೆಯುತ್ತೇವೆ. ಖಾರದ ಕಡ್ಡಿಯ ತಯಾರಿಕೆಯಲ್ಲಿ ಹಲವಾರು ವಿಧಾನಗಳಿವೆ. ಸವತೆ ಕಾಯಿಯನ್ನು ಹಾಕಿಯೋ ಇಲ್ಲಾ ಹಾಗೇ ಸಾದ ಅಕ್ಕಿ ಹಿಟ್ಟಿನ್ನು ಬಳಸಿಯೋ ಕರೆಯನ್ನು ತಯಾರಿಸುವುದಿದೆ. ಆದರೆ ಸವತೆಕಾಯಿಯನ್ನು ಬಳಸಿದರೆ ಅದು ಎಣ್ಣೆಯನ್ನು ಜಾಸ್ತಿ ಹೀರುವುದರಿಂದ ಜಿಡ್ಡಿನಾಂಶ ತುಸು ಜಾಸ್ತಿಯಾಗಿರುತ್ತದೆ. ಹಾಗೂ ಈ ಖಾರದ ಕಡ್ಡಿ ಹೆಚ್ಚು ಕಾಲ ತಾಜಾ ಆಗಿ ಇರುವುದೂ ಕಡಿಮೆ.

ಇದೀಗ ತಿಂಗಳವರೆ ಸೀಸನ್. ಹಾಗಾಗಿ ನಾನು ತಿಂಗಳವರೆ ಹಾಗೂ ಅಕ್ಕಿ ಹಿಟ್ಟಿನ ಖಾರದ ಕಡ್ಡಿಯ ತಯಾರಿಯನ್ನು ಹೇಳುತ್ತಿದ್ದೇನೆ. ಈ ಕರೆ ತೆಂಗಿನೆಣ್ಣೆಯನ್ನು ಹೀರುವುದು ತೀರಾ ಕಡಿಮೆ. ಹಾಗಾಗಿ ಎಣ್ಣೆ ಪಸೆ ಹೆಚ್ಚಾಗದು. ಅಲ್ಲದೇ ಗಾಳಿಯಾಡದ ಡಬ್ಬದಲ್ಲಿಟ್ಟರೆ ಒಂದು ತಿಂಗಳಾದರೂ ತಾಜಾ ಆಗಿರುವುದು. ಅಲ್ಲದೇ ತಿನ್ನಲೂ ಬಲು ರುಚಿಕರ.

ತಿಂಗಳವರೆ ಹಾಗೂ ಅಕ್ಕಿ ಹಿಟ್ಟಿನ ಕರೆಯ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು ಇಂತಿವೆ :

* ತಿಂಗಳವರೆ - ೧/೪ ಕೆ.ಜಿ.
* ಅಕ್ಕಿ ಹಿಟ್ಟು - ೧ ಕೆ.ಜಿ.
* ಕಡಲೇ ಹಿಟ್ಟು - ೧೦೦ ಗ್ರಾಂ
* ಖಾರದ ಪುಡಿ - ಮೂರು ಚಮಚ (ಖಾರ ತುಸು ಜಾಸ್ತಿ ಬೇಕಿದ್ದವರು ಹೆಚ್ಚಿನ ಪ್ರಮಾಣದಲ್ಲೂ ಹಾಕಬಹುದು)
* ಇಂಗು - ಸುಮಾರು ೫ ಗ್ರಾಂನಷ್ಟು
* ಓಂ ಕಾಳು - ೧ ಚಮಚ
* ಉಪ್ಪು - ರುಚಿಗೆ ತಕ್ಕಷ್ಟು
* ಕರಿಯಲು ತೆಂಗಿನೆಣ್ಣೆ (ಬೇಕಿದ್ದರೆ ಬೇರೇ ಎಣ್ಣೆಯನ್ನೂ ಬಳಸಬಹುದು) - ೧/೨ ಲೀಟರ್(ಸುಮಾರು).

ಮಾಡುವ ವಿಧಾನ :

* ತಿಂಗಳವರೆಯನ್ನು ರಾತ್ರಿಯಿಡೀ ನೆನೆ ಹಾಕಿಟ್ಟು ಮರುದಿನ ಬೆಳಗ್ಗೆ ಕುಕ್ಕರಿನಲ್ಲಿಟ್ಟು ೫-೬ ವ್ಹಿಸಿಲ್ ತರಿಸಬೇಕು.

* ಅಕ್ಕಿ ಹಿಟ್ಟನ್ನು ಚೆನ್ನಾಗಿ ಪರಿಮಳ ಬರುವಷ್ಟು ಹುರಿದಿಟ್ಟುಕೊಳ್ಳಬೇಕು.

* ಬೇಯಿಸಿದ ತಿಂಗಳವರೆಯನ್ನು ಚೆನ್ನಾಗಿ ತಣಿಸಿದ ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

* ಬೀಸಿದ ತಿಂಗಳವರೆ ಹಾಗೂ ಅದರ ನೀರನ್ನು ಒಂದು ಬಾಣಲೆಗೆ ಇಲ್ಲಾ ಅಗಲವಾದ ಪಾತ್ರೆಯೊಳಗೆ ಹಾಕಿ, ಹುರಿದಿಟ್ಟಿದ್ದ ಅಕ್ಕಿ ಹಿಟ್ಟು, ಖಾರದ ಪುಡಿ, ಓಂಕಾಳು, ಕಡಲೇ ಹಿಟ್ಟು, ಇಂಗು ಎಲ್ಲವನ್ನೂ ಹಾಕಿ ನಾದಿ ಚೆನ್ನಾಗಿ ಕಲಕಬೇಕು. ಮಿಶ್ರಣವನ್ನು ಚಕ್ಕುಲಿ ಹಿಟ್ಟಿನ ಹದಕ್ಕೆ ತರಬೇಕು. ನಾದಲು ನೀರು ಕಡಿಮೆ ಎಂದೆಣಿಸಿದರೆ ತಣ್ಣೀರನ್ನು ಹಾಕಬಾರದು. ತುಸು ಬಿಸಿ ನೀರನ್ನು ಬೇಕಾದಷ್ಟೇ ಪ್ರಮಾಣದಲ್ಲಿ ಹಾಕಿ ಹದ ಮಾಡಬೇಕು.

* ನಂತರ ಬಾಣಲೆಯನ್ನಿ ಎಣ್ಣೆಯನ್ನು ಕಾಯಿಸಿಕೊಂಡು, ಚೆನ್ನಾಗಿ ಹದ ಮಾಡಿದ ಹಿಟ್ಟನ್ನು ಕರೆಯ(ಖಾರದ ಕಡ್ಡಿ) ಒತ್ತಿನಲ್ಲಿ ಒತ್ತಿ ಬಾಣಲೆಗೆ ಬಿಟ್ಟು ಗರಿಗರಿಯಾಗಿ ತೆಗೆದು ಗಾಳಿಯಾಡದ ಡಬ್ಬದಲ್ಲಿ ತುಂಬಿಡಬೇಕು.

ತಿಂಗಳವರೆ ಹಾಗೂ ಅಕ್ಕಿ ಹಿಟ್ಟಿನಿಂದ ತಯಾರಿಸುವ ಈ ಕರೆಯನ್ನು ಬಿಸಿ ಬಿಸಿ ಸಾರು ಹಾಗೂ ಸಾಂಬಾರಿನೊಟ್ಟಿಗೆ ತೆಗೆದುಕೊಂಡರೆ ಮತ್ತೂ ರುಚಿ. ಸಾಯಂಕಾಲದ ಕಾಫಿಯ ಜೊತೆಗೂ ಈ ಕುರು ಕುರು ತಿಂಡಿ ಉತ್ತಮ ಜೊತೆಯಾಗುವುದು.

[@ದಟ್ಸ್‌ಕನ್ನಡದಲ್ಲಿ ಪ್ರಕಟಿತ.]

Note :ತಿಂಗಳವರೆಯ ಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಬಹುದು. 
http://www.google.co.in/imgres?imgurl=http://imagecache2.allposters.com/images/pic/STFPOD/176465~Still-Life-with-Various-Types-of-Beans-Posters.jpg&imgrefurl=http://www.allposters.com/-sp/Still-Life-with-Various-Types-of-Beans-Posters_i3290989_.htm&h=400&wԌ ?L

ಹುರುಳಿ ಕಾಯಿಯೇ ಬೇರೆ ತಿಂಗಳವರೆಯೇ ಬೇರೆ. ಇದೊಂದು ಬೀನ್ಸ್ ಜಾತಿಗೆ ಸೇರಿದ ಬೀಜ. ಸಾಮಾನ್ಯವಾಗಿ ಒಣಗಿದಾಗ ಕಂದು ಇಲ್ಲಾ ನಸು ಗುಲಾಬಿ ವರ್ಣದಲ್ಲಿರುತ್ತದೆ. ಅವರೆ ಕಾಳಿಗಿಂತಲೂ ದೊಡ್ಡದಿರುತ್ತದೆ. ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ "Pink Kidney Beans" ಅನ್ನುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ಕೆಳಗಿನ ಲಿಂಕ್‌ಗೆ ಭೇಟಿ ಕೊಡಿ. ಇದರಲ್ಲಿ ವಿವಿಧ ಜಾತಿಯ ಬೀನ್ಸ್ ಬೀಜಗಳ ಬಗ್ಗೆ ಮಾಹಿತಿಯಿದೆ.
http://www.101vegetarianrecipes.com/peas-beans-pulses-recipes/different-types-beans.php


-ತೇಜಸ್ವಿನಿ ಹೆಗಡೆ

Thursday, January 06, 2011

ಆರೋಗ್ಯದಾಯಕ ನೆಲನೆಲ್ಲಿ ಸೊಪ್ಪಿನ ತಂಬುಳಿ


ನೆಲನೆಲ್ಲಿಗೆ ಸಂಸ್ಕೃತದಲ್ಲಿ ಭೂಮ್ಯಾಮಲಕಿ, ಹಿಂದಿಯಲ್ಲಿ ಪಾತಾಲ ಆಂವಲಾ ಹಾಗೂ ಇಂಗ್ಲೀಷಿನಲ್ಲಿ"Phyllanthus Amarus" ಎಂದೂ ಕರೆಯುತ್ತಾರೆ. ಇದು ಮಳೆಗಾಲದಲ್ಲಿ ಬೆಳೆಯುವ ಪುಟ್ಟಗಿಡ, ತರಕಾರಿಗಿಡಗಳೊಡನೆ ಕಳೆಯಾಗಿ ಬೆಳೆಯುತ್ತದೆ. ಇದರೆಲೆಗಳು ಬೆಟ್ಟದ ನೆಲ್ಲಿಯಂತಿದ್ದರೂ ಆಕಾರದಲ್ಲಿ ಬಲು ಚಿಕ್ಕದಾಗಿರುತ್ತವೆ. ಹಳದಿ ಬಣ್ಣದ ಹೂವುಗಳನ್ನು ಹೊಂದಿರುವ ಈ ಗಿಡದಲ್ಲಿ ಅಗಸ್ಟ್-ಸಪ್ಟೆಂಬರ್ ತಿಂಗಳಿನಲ್ಲಿ ಸಣ್ಣ ಸಣ್ಣ ಹಸಿರು ಬಣ್ಣದ ಗುಂಡಾಕಾರದ ಕಾಯಿಗಳನ್ನು ಕಾಣಬಹುದಾಗಿದೆ.

ನೆಲನೆಲ್ಲಿಯ ಸೊಪ್ಪು ಹಲವು ವಿಧದಲ್ಲಿ ಉಪಯುಕ್ತವಾಗಿದೆ. ಕಾಮಾಲೆಗೆ, ಉದರಶೂಲೆಗೆ ಶ್ಲೇಷ್ಮಾತೀಸಾರಕ್ಕೆ ಹಾಗೂ ಕಣ್ಣು ನೋವಿಗೆ ಇದರ ಸೊಪ್ಪು ದಿವ್ಯೌಷಧಿಯಾಗಿದೆ. ಅಲ್ಲದೇ ಪಿತ್ತಜನಕಾಂಗದ ಸಮಸ್ಯೆಗಳಿಗೂ ಇದನ್ನು ಔಷಧವನ್ನಾಗಿ ಉಪಯೋಗಿಸುತ್ತಾರೆ. ಇದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವೈದ್ಯ ಎ.ಅರ್.ಎಂ.ಸಾಹೇಬ್ ಅವರ "ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು" ಎಂಬ ಪುಸ್ತಕವನ್ನು ಓದಬಹುದು. ನೆಲನೆಲ್ಲಿಯ ಚಿತ್ರಗಳಿಗಾಗಿ ಈ ಕೆಳಗಿನ ಲಿಂಕ್‌ಅನ್ನು ನೋಡಿ.
http://images.google.co.in/images?hl=en&q=Phyllanthus+Amarus&gbv=2


ನೆಲನೆಲ್ಲಿ ತಂಬುಳಿಗೆ ಬೇಕಾಗುವ ಸಾಮಗ್ರಿಗಳು-

* ನೆಲನೆಲ್ಲಿ ಸೊಪ್ಪು - ಒಂದು ಹಿಡಿ ಅಥವಾ ಮುಷ್ಟಿಯಷ್ಟು
* ಜೀರಿಗೆ - ೧/೪ ಚಮಚ
* ಬಿಳೇ ಎಳ್ಳು - ೧/೪ ಚಮಚ
* ಕರಿಮೆಣಸಿನ ಕಾಳು(ಪೆಪ್ಪರ್) - ೨-೩
* ಇಂಗು - ಚಿಟಿಗೆಯಷ್ಟು
* ಕಾಯಿತುರಿ - ೧/೪ ಭಾಗ
* ಕಡೆದ ಮಜ್ಜಿಗೆ - ಒಂದು ಲೋಟ
* ಬೆಲ್ಲ - ರುಚಿಗೆ ತಕ್ಕಷ್ಟು (ಸಿಹಿ ಆಗದವರು ಬೆಲ್ಲವನ್ನು ಹಾಕದೆಯೂ ಮಾಡಬಹುದು)
* ಉಪ್ಪು - ರುಚಿಗೆ ತಕ್ಕಷ್ಟು
* ತುಪ್ಪ - ೧-೨ ಚಮಚ

ಮಾಡುವ ವಿಧಾನ

* ಮೊದಲಿಗೆ ನೆಲನೆಲ್ಲಿ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಬೇಕು.
* ಬಾಣಲೆಯಲ್ಲು ತುಪ್ಪವನ್ನು ಹಾಕಿ ಜೀರಿಗೆ, ಎಳ್ಳು, ಕರಿಮೆಣಸಿನ ಕಾಳು ಹಾಗೂ ಇಂಗನ್ನು ಹಾಕಿ ಹುರಿಯಬೇಕು. ಹಾಕಿದ ಪದಾರ್ಥ ಚಟಗುಡುತ್ತಲೇ, ಇದಕ್ಕೆ ಹೆಚ್ಚಿಟ್ಟ ನೆಲನೆಲ್ಲಿ ಸೊಪ್ಪನ್ನೂ ಹಾಕಿ ಚೆನ್ನಾಗಿ ಹುರಿದು ತಣಿಸಬೇಕು.
* ಚೆನ್ನಾಗಿ ತಣಿದ ನಂತರ ಕಾಯಿತುರಿಯೊಂದಿಗೆ ಬೀಸಿ, ಸೋಸಿ ರಸವನ್ನು ಹಿಂಡಬೇಕು. ಜಿಗುಟನ್ನು ತೆಗೆಯಬೇಕು.
* ಸೋಸಿದ ರಸಕ್ಕೆ ಕಡೆದ ಮಜ್ಜಿಗೆ, ಉಪ್ಪು ಹಾಗೂ ಬೆಲ್ಲವನ್ನು ಹಾಕಿದರೆ ರುಚಿಕರ ಹಾಗೂ ಆರೋಗ್ಯಕರ ತಂಬುಳಿ ತಯಾರೆನ್ನಬಹುದು.

ನೆಲನೆಲ್ಲಿ ಸೊಪ್ಪಿನಿಂತ ಚಟ್ನಿಯನ್ನೂ ತಯಾರಿಸಬಹುದು. ಬಹೋಪಯೋಗಿಯಾಗಿರುವ ಇದು ಸುಲಭದಲ್ಲಿ 
ಬೆಳೆಯುವಂತಹದ್ದೂ ಆಗಿದೆ.


ಕಳೆದ ವರ್ಷ ಮಾನಸದಲ್ಲಿ  "ಅತ್ತಿ ಕುಡಿ ತಂಬುಳಿಯ"   ಬಗ್ಗೆಯೂ ಬರೆದಿದ್ದೆ. (ಆಸಕ್ತಿ ಇದ್ದವರು ನೋಡಬಹುದು.)

-ತೇಜಸ್ವಿನಿ ಹೆಗಡೆ