ಇನ್ನೇನು ಮಳೆ ಧೊಪ್ಪನೆ ಬೀಳೋ ತರಹ ಕಪ್ಪುಗಟ್ಟಿದೆ.... ಹೊರ ಬೀಸುವ ಮಳೆಯ ಚಳಿಗಾಳಿಯ ಜೊತೆ ಒಳಗೆ ಸುಟಿ ಸುಟಿ ಈರುಳ್ಳಿ ತಂಬುಳಿ ಇದ್ದುಬಿಟ್ಟರೆ....... ಸ್ವರ್ಗಕ್ಕೆ ಎರಡೇಗೇಣು ನೋಡಿ :)
ಮಧ್ಯಮಗಾತ್ರದ ಒಂದು ಪುಟ್ಟ ಈರುಳ್ಳಿ+ ಅರ್ಧ ಚಮಚ ಜೀರಿಗೆಯನ್ನು ೩=೪ ಚಮಚ ಕಾಯಿತುರಿಯೊಂದಿಗೆ ಹಸೀ ಬೀಸಿಕೊಳ್ಳಿ. ಇದಕ್ಕೆ ೨-೩ ಸೌಟು (ಬೇಕಿದ್ದರೆ ಎರಡು ಸೌಟು ಜಾಸ್ತಿ...:)) ಮಜ್ಜಿಗೆಯನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಬೆರಸಿ. ದಪ್ಪಗಾಗಬೇಕೆಂದರೆ ಕಾಯಿತುರಿಯನ್ನೋ ಇಲ್ಲಾ ಮಜ್ಜಿಗೆಯನ್ನೋ ಜಾಸ್ತಿ ಹಾಕಬಹುದು. ತೆಳ್ಳಗೆ ಬೇಕೆನ್ನುವವರು ಸ್ವಲ್ಪ ನೀರನ್ನು ಬೆರೆಸಬಹುದು.
ತದನಂತರ ೧/೪ ಚಮಚ್ಚ ಸಾಸಿವೆ+ಒಂದು ಕಡ್ಡಿಮೆಣಸಿನ ಚೂರನ್ನು ಹಾಕಿ ತುಪ್ಪದಲ್ಲಿಯೋ ಇಲ್ಲಾ ಎಣ್ಣೆಯಲ್ಲಿಯೋ (೧/೨ ಚಮಚವೂ ಬೇಡ.. ಸಾಸಿವೆ ಚಟಗುಡುವಷ್ಟು ಹಾಕಿದರೆ ಸಾಕು..) ಒಗ್ಗರಿಸಿದರೆ ೫ ನಿಮಿಷದೊಳಗೆ ರುಚಿ ರುಚಿ, ಆರೋಗ್ಯಕರ ಈರುಳ್ಳಿ ತಂಬ್ಳಿ ರೆಡಿ :)
ಇದು ಶೀತ, ಕಫ, ಕೆಮ್ಮು, ಸ್ವಾದ ಕೆಟ್ಟಿದ್ದರೆ - ಎಲ್ಲವುದಕ್ಕೂ ರಾಮಬಾಣ.
ಇನ್ನು ತುಂಬಾ ಗಂಟಲು ಕೆರೆತ ಇದ್ದವರು, ಮಜ್ಜಿಗೆ ತಂಪು ಎಂದಾದಲ್ಲಿ ಹೀಗೆ ಮಾಡಿ: -
ಈರುಳ್ಳಿ+ಜೀರಿಗೆ+ಕಾಯಿತುರಿ ಬೀಸಿದ ನಂತರ ತುಸುವೇ ನೀರನ್ನು ಹಾಕಿ ಒಲೆಯಲ್ಲಿಟ್ಟು ಒಂದು ಗುಳ್ಳೆಬರುವವರೆಗೆ ಬಿಸಿಮಾಡಿ (ನೆನಪಿಡಿ.. ಕುದಿಸಬೇಡಿ!). ಗ್ಯಾಸ್ ನಂದಿಸಿ ಮಜ್ಜಿಗೆ ಬೆರೆಸಿ, ಒಗ್ಗರಿಸಿದರೆ ಗಂಟಲು ಕೆರೆತ, ನೆಗಡಿ ಸಾಕಷ್ಟು ಶಮನವಾಗುವುದು.
$$$$$$$$$$$$$$$$$
ಸಾಂಬ್ರಾಣಿ ಸೊಪ್ಪಿನ ತಂಬುಳಿಯೂ ಶೀತ, ಕೆಮ್ಮಿಗೆ ತುಂಬಾ ಪರಿಣಾಮಕಾರಿ. ಅದರಲ್ಲೂ ಮಕ್ಕಳಿಗೆ ಶೀತವಿದ್ದಾಗ ಇದನ್ನು ಉಣಿಸುವುದು ಉತ್ತಮ.
೫-೬ ಸಾಂಬ್ರಾಣಿ ಸೊಪ್ಪುಗಳನ್ನು ಚೂರುಮಾಡಿಟ್ಟುಕೊಳ್ಳಬೇಕು. ಈ ಚೂರುಗಳನ್ನು ೨ ಚಮಚ ಬಿಳೇ ಎಳ್ಳು +೧/೨ ಚಮಚ ಜೀರಿಗೆ + ಚಿಟಿಕೆ ಇಂಗು - ಇವಿಷ್ಟನ್ನು ೧ ಚಿಕ್ಕ ಚಮಚ ತುಪ್ಪದಲ್ಲಿ ಹುರಿದು, ೩-೪ ಚಮಚ ಕಾಯಿತುರಿಯೊಂದಿಗೆ ಬೀಸಿ, ಮೇಲೆ ಹೇಳಿರುವಂತೇ ಬಿಸಿಮಾಡಿ, ಮಜ್ಜಿಗೆ ಬೆರೆಸಿದರೆ ಶೀತಕ್ಕೆ ಚಳಿಹಿಡಿಯುವುದು :)
----------
(ವಿ.ಸೂ... ಮೊಸರನ್ನು ಇಷ್ಟಪಡುವವರು.. ಮಜ್ಜಿಗೆಯ ಬದಲು ಮೊಸರನ್ನೂ ಉಪಯೋಗಿಸಬಹುದು.... ೨-೩ ಸೌಟು ಮೊಸರನ್ನೇ ಮಿಕ್ಸಿಯಲ್ಲಿ ಹಾಕಿ ಒಮ್ಮೆ ತಿರುಗಿಸಿದರೆ ಅದು ತೆಳ್ಳಗಾಗುತ್ತದೆ.. ಅದಕ್ಕೆ ನೀರು ಸ್ವಲ್ಪ ಸೇರಿಸಿ ಬೀಸಿದ ಮಿಶ್ರಣಕ್ಕೆ ಹಾಕಿ ಹದಮಾಡಬಹುದು.)
-ತೇಜಸ್ವಿನಿ
Showing posts with label ಪೇಯ. Show all posts
Showing posts with label ಪೇಯ. Show all posts
Wednesday, August 14, 2013
Thursday, March 14, 2013
ಬಿಸಿ ಬಿಸಿ ಬೇಸಿಗೆಗೆ ತಂಪು ತಂಪು ವಿವಿಧ ತಂಬುಳಿಗಳು...
ಬೇಸಿಗೆಯ ಧಗೆಯ ಅನುಭವ ಎಲ್ಲೆಡೆ ಈಗಾಗಲೇ ಶುರುವಾಗಿದೆ.. ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಮೋಡಗಟ್ಟಿದ ವಾತಾವರಣ ಒಳ-ಹೊರಗೆ ತಾಪ ಹೆಚ್ಚಿಸುತ್ತಿದೆ. ದೇಹದ ಉಷ್ಣತೆಯ ಹೆಚ್ಚಳದಿಂದಾಗಿ ಹತ್ತು ಹಲವು ಸಮಸ್ಯೆಗಳು ತಲೆದೋರುವುದು ಸಹಜ. ಹೀಗಿರುವಾಗ ತೆಳ್ಳಗೆ, ತಂಪಾಗಿರುವ ಪದಾರ್ಥವನ್ನು ಸೇವಿಸುವ ಮನಸ್ಸಾಗುವುದು. ನಮ್ಮಲ್ಲಿ ಅಂದರೆ ಹವ್ಯಕರಲ್ಲಿ ವಿವಿಧ ರೀತಿಯ ತಂಬುಳಿಗಳನ್ನು ಮಾಡುತ್ತಾರೆ. ಇವುಗಳನ್ನು ಹಾಗೇ ತಂಫು ಪಾನೀಯದಂತೆಯೋ ಇಲ್ಲಾ ಸೂಪ್‌ನಂತೆಯೋ ಕುಡಿಯಬಹುದು ಇಲ್ಲವೇ ಅನ್ನಕ್ಕೆ ಕಲಸಿ ತಿನ್ನಬಹುದು.
![]() |
| Copy Right : Tejaswini Hegde |
೧. ದೇಹದ ಉಷ್ಣತೆಯು ಹೆಚ್ಚಾಗದಂತೇ ತಡೆಯುತ್ತವೆ... ಬಾಯಿ ಹುಣ್ಣು, ಕಣ್ಣುರಿ, ತಲೆ ಸಿಡಿತ, ಹೊಟ್ಟೆಯುರಿ, ಮಲಬದ್ಧತೆ, ಪಿತ್ಥ, ಗಾಸ್ಟ್ರಿಕ್ ಇಂತಹ ರೋಗಗಳಿಂದ ನಮ್ಮನ್ನು ದೂರವಿಡುತ್ತವೆ.
೨. ಕಣ್ಣಿಗೆ, ಉದರಕ್ಕೆ ತಂಪಲ್ಲದೇ ನೆತ್ತಿಗೂ ತಂಪು ತರುತ್ತವೆ. ಎದೆಯುರಿ ಹೆಚ್ಚಾಗಿದ್ದರೆ, ಈ ತಂಬುಳಿಗಳನ್ನು ಮಾಡಿ ಕುಡಿದರೆ ಬಹು ಬೇಗ ಶಮನವಾಗುತ್ತದೆ.
೩. ಆಯಾಸ ಹೆಚ್ಚಾದಾಗ, ಬಾಯಿರುಚಿ ಕೆಟ್ಟಿದೆ ಎಂದೆನಿಸಿದಾಗಲೂ ಇವು ಸಹಕಾರಿಯಾಗಿವೆ.
ಒಟ್ಟಿನಲ್ಲಿ ಬಹೋಪಯೋಗಿ ತಂಬುಳಿಗಳ ಸೇವನೆಯಿಂದ ಆರೋಗ್ಯವು ಸುಧಾರಿಸುವುದಲ್ಲದೇ ಸದೃಢವಾಗಿರುವುದು.
ಮಾಡಲು ಸುಲಭ, ಸರಳ, ಬೇಕಾಗುವ ಪದಾರ್ಥಗಳೂ ಅತ್ಯಂತ ಕಡಿಮೆ. ಆರೋಗ್ಯಕ್ಕೆ ಹಿತಕರ, ಬಾಯಿಗೂ ರುಚಿಕರ ತಂಬುಳಿಗಳನ್ನು ತಯಾರಿಸುವ ವಿಧಾನವೂ ಹೆಚ್ಚು ಕಡಿಮೆ ಒಂದೇ ರೀತಿಯದ್ದಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು - (೩-೪ ಜನರಿಗೆ) :-
ಒಂದು ಕಟ್ಟು ಮೆಂತೆ ಸೊಪ್ಪು/ ಪಾಲಕ್ ಸೊಪ್ಪು/ಅತ್ತಿ ಕುಡಿ (ಯಾವುದಾದರೂ ಒಂದು ಸಾಮಗ್ರಿ)
ಜೀರಿಗೆ - ೧ ಚಮಚ (ಟೇಬಲ್ ಸ್ಪೂನ್)
ಬಿಳೇ ಎಳ್ಳು - ೧/೨ ಚಮಚ
ಇಂಗು - ಒಂದೆರಡು ಕಾಳು...(ಪುಡಿಯಾಗಿದ್ದರೆ ಚಿಟಿಕೆ)
ತುಪ್ಪ ಅಥವಾ ಎಣ್ಣೆ - ೧ - ೨ ಚಮಚ. (ತುಪ್ಪದಲ್ಲಿ ಮಾಡಿದರೆ ಮತ್ತೂ ರುಚಿಕರ ಹಾಗೂ ಆರೋಗ್ಯಕ್ಕೂ ಉತ್ತಮ.)
ತೆಂಗಿನ ತುರಿ - ೪ ಚಮಚ
ಮಜ್ಜಿಗೆ ಅಥವಾ ಮೊಸರು - ೩-೪ ಸೌಟು.
ಉಪ್ಪು - ರುಚಿಗೆ ತಕ್ಕಷ್ಟು.
ಬೆಲ್ಲ - 1-2 ಚಮಚ
------
ಮೆಂತೆಸೊಪ್ಪಿನ ತಂಬುಳಿ ಮಾಡುವ ವಿಧಾನ : ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಕತ್ತರಿಸಬೇಕು.
ಮೆಂತೆಸೊಪ್ಪಿನ ತಂಬುಳಿ ಮಾಡುವ ಮೊದಲು- ಸೊಪ್ಪನ್ನು ತೊಳೆದಮೇಲೆ ಹೆಚ್ಚಿ, ಸ್ವಲ್ಪ ಉಪ್ಪು ತಿಕ್ಕಿ ೧೦ ನಿಮಿಷ ಇಟ್ಟುಕೊಂಡಿರಬೇಕಾಗುತ್ತದೆ. (ಇದರಿಂದ ಕಹಿಯಂಶ ಕಡಿಮೆಯಾಗಿ ತಿನ್ನಲು ರುಚಿಕರವಾಗಿರುತ್ತದೆ. ಕಹಿ ಅಂಶ ಇಷ್ಟಪಡುವವರು ಹಾಗೇ ಮಾಡಿಕೊಳ್ಳಬಹುದು.)
ಬಾಣಲೆಗೆ ತುಪ್ಪ ಅಥವಾ ಎಣ್ಣೆ ಹಾಕಿ ಜೀರಿಗೆ + ಬಿಳೇ ಎಳ್ಳು +(ಈ ತಂಬುಳಿಗೆ ಬೇಕಿದ್ದರೆ ಮಾತ್ರ ಹಾಕಬಹುದು) ಚಿಟಿಕೆ ಇಂಗು - ಇವುಗಳನ್ನು ಹಾಗಿ ಒಗ್ಗರಿಸಿಕೊಂಡು, ಉಪ್ಪು ತಿಕ್ಕಿಟ್ಟಿದ್ದ ಮೆಂತೆ ಸೊಪ್ಪನ್ನು ಹಿಂಡಿ ಹಾಕಿ ಹುರಿಯಬೇಕು. ಕಹಿ ಬಿಟ್ಟಿರುವ ರಸವನ್ನು ಹಿಂಡಿ ಹಾಕುವುದರಿಂದ ತಿನ್ನುವಾಗ ಕಹಿಯೆನಿಸುವುದಿಲ್ಲ.
ಬಹು ಬೇಗ ಹುರಿದು ಬರುವ ಸೊಪ್ಪನ್ನು ತಣಿಯಲಿಡಬೇಕು. ನೆನಪಿಡಿ ಯಾವುದೇ ಸೊಪ್ಪಿರಲಿ.. ಹುರಿದು ಮಾಡುವಂಥದ್ದಾಗಿದ್ದರೆ, ಸಂಪೂರ್ಣ ತಣಿದ ಮೇಲೆ ಕಾಯಿಹಾಕಿ ರುಬ್ಬಬೇಕು.. ಬಿಸಿ ಇರುವಾಗಲೇ ರುಬ್ಬಿದರೆ ಕಸರು(ಕಮಟು) ವಾಸನೆ ಬರುತ್ತದೆ.
ತಣಿದ ಮೇಲೆ ಕಾಯಿತುರಿಯೊಂದಿಗೆ ನುಣ್ಣಗೆ ರುಬ್ಬಿ, ಮಜ್ಜಿಗೆ + ಉಪ್ಪು ಹಾಕಿ, ತೆಳ್ಳಗೆ ಬೇಕಿದ್ದರೆ ತುಸು ನೀರನ್ನೋ ಇಲ್ಲಾ ಮತ್ತೊಂದು ಸೌಟು ಮಜ್ಜಿಗೆಯನ್ನೋ ಹಾಕಿದರೆ ರುಚಿಕರ ಮೆಂತೆ ತಂಬುಳಿ ರೆಡಿ. ಸಿಹಿಯನ್ನು ಇಷ್ಟಪಡುವವರು... ಕಹಿಯೆನಿಸುವವರು... ಸ್ವಲ್ಪ ಬೆಲ್ಲವನ್ನು ಹಾಕಿ ಕರಗಿಸಿಕೊಳ್ಳಬಹುದು. ಮತ್ತಷ್ಟು ರುಚಿಕರವಾಗುತ್ತದೆ.
ವಿ.ಸೂ : - ೧. ಸೊಪ್ಪನ್ನು ತುಂಬಾ ಹೊತ್ತು ಉಪ್ಪಲ್ಲಿ ಹಾಕಿಡಬೇಡಿ.. ಅದರ ಕಹಿಯಂಶ ಸಂಪೂರ್ಣ ಹೋಗಿ, ಅದರೊಳಗಿನ ಉತ್ತಮ ಸತ್ವವೆಲ್ಲಾ ಉಪ್ಪಲ್ಲಿ ಕರಗಿಹೋಗಬಹುದು!
೨. ಮಜ್ಜಿಗೆಯ ಬದಲು ಮೊಸರನ್ನೂ ಉಪಯೋಗಿಸಬಹುದು.... ೨-೩ ಸೌಟು ಮೊಸರನ್ನೇ ಮಿಕ್ಸಿಯಲ್ಲಿ ಹಾಕಿ ಒಮ್ಮೆ ತಿರುಗಿಸಿದರೆ ಅದು ತೆಳ್ಳಗಾಗುತ್ತದೆ.. ಅದಕ್ಕೆ ನೀರು ಸ್ವಲ್ಪ ಸೇರಿಸಿ ಬೀಸಿದ ಮಿಶ್ರಣಕ್ಕೆ ಹಾಕಿ ಹದಮಾಡಬಹುದು.
ಪಾಲಾಕ್ ಸೊಪ್ಪಿನ ತಂಬುಳಿ
ಮೇಲೆ ಹೇಳಿದ ಸಾಮಾಗ್ರಿಗಳನ್ನೇ ಉಪಯೋಗಿಸಿ ಒಗ್ಗರಿಸಿಕೊಂಡು, ಹೆಚ್ಚಿಟ್ಟಿದ್ದ ಸೊಪ್ಪನ್ನೂ ಹಾಕಿ ಹುರಿದು, ತಣಿದ ನಂತರ ಕಾಯಿಯೊಂದಿಗೆ ಬೀಸಿ, ಉಪ್ಪು ಮಜ್ಜಿಗೆ ಬೆರೆಸಿದರೆ ಆಯಿತು. ಈ ತಂಬುಳಿಗೆ ಇಂಗು ಹಾಕಿದರೆ ಮತ್ತೂ ರುಚಿಕರ. ಹಾಗಾಗಿ ತಪ್ಪದೇ ಒಗ್ಗರಣೆಗೆ ಹಾಕಿ. ಬೆಲ್ಲವನ್ನು ಹಾಕಬಾರದು.
ಅತ್ತಿಕುಡಿ ತಂಬುಳಿ
ಅತ್ತಿ ಕುಡಿಯ ಹಸಿರಾದ ಚಿಗುರೆಲೆಗಳು - ೧೦-೧೫ (ಬಲಿತ ದೊಡ್ಡ ಎಲೆಗಳಲ್ಲಾ!)... ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಂಡು ಮೇಲೆ ಪಾಲಾಕ್ ಸೊಪ್ಪಿನ ತಂಬುಳಿಯ ವಿಧಾನದಂತೇ ಮಾಡಿಕೊಳ್ಳುವುದು. ಆಮೇಲೆ ಸ್ವಲ್ಪ ಬೆಲ್ಲವನ್ನೂ ಸೇರಿಸಬೇಕು.
ಇದೇ ರೀತಿ ನೆಲನೆಲ್ಲಿತಂಬುಳಿಯನ್ನೂ ಮಾಡುತ್ತಾರೆ..ಆದರೆ ಇದಕ್ಕೆ ಕರಿಮೆಣಸಿನ ಕಾಳುಗಳನ್ನು ಸೇರಿಸುತ್ತಾರಷ್ಟೇ.. ಇದನ್ನು ಮಾಡುವ ವಿಧಾನವನ್ನು ಮೊದಲೇ ವಿವರಿಸಿದ್ದು.. ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ - "ನೆಲನೆಲ್ಲಿ"
ಹುರಿಯದೇ ಹಸಿಯಾಗಿ ಬೀಸಿ ಮಾಡುವ ತಂಬುಳಿಗಳು -
ಲೆಮನ್ ಗ್ರಾಸ್ ಅಥವಾ ಮಜ್ಜಿಗೆ ಹುಲ್ಲಿನ ತಂಬುಳಿ :-
೩-೪ ಮಜ್ಜಿಗೆ ಹುಲ್ಲನ್ನು ಕತ್ತರಿಸಿಟ್ಟುಕೊಂಡು ಅದಕ್ಕೆ ಹೆಬ್ಬೆರಳಿನ ಗಾತ್ರದ ಶುಂಠಿಯನ್ನು ಹೆಚ್ಚು ಹಾಕಿ, ಕಾಯಿತುರಿಯೊಂದಿಗೆ (೪-೫ ಚಮಚ) ಹಸಿಯಾಗಿ ಬೀಸಬೇಕು. ತದನಂತರ ಚೆನ್ನಾಗಿ ಸೋಸಿ ಅದರ ರಸವನ್ನಷ್ಟೇ ಹಿಂಡಿ ತೆಗೆದು, ಮಜ್ಜಿಗೆಯನ್ನೋ ಇಲ್ಲಾ ಮೇಲೆ ಹೇಳಿದಂತೇ (ಮೆಂತೆಸೊಪ್ಪಿನ ತಂಬುಳಿಗೆ..) ಮೊಸರನ್ನೋ ಸೇರಿಸಿ, ಉಪ್ಪು ಹಾಕಿದರೆ ಬಲುರುಚಿಕರ, ಆರೋಗ್ಯಕರ ಲೆಮನ್ ಗ್ರಾಸ್ ತಂಬುಳಿ ರೆಡಿ!
ಇದೇ ರೀತಿ ಕೊತ್ತುಂಬರಿ ಸೊಪ್ಪಿನ ತಂಬುಳಿಯನ್ನೂ ಮಾಡುತ್ತಾರೆ. : -
ಒಂದು ಪುಷ್ಠಿ ಕೊತ್ತುಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಅದಕ್ಕೆ ಹೆಬ್ಬೆರಳಿನ ಗಾತ್ರದ ಶುಂಠಿ ಸೇರಿಸಿ ಕಾಯಿಯೊಂದಿಗೆ ಹಸಿಯಾಗಿ ಬೀಸಬೇಕು. ಇದು ನುಣ್ಣಗೆ ಬೀಸಲು ಸಾಧ್ಯವಿರುವುದರಿಂದ ಸೋಸುವ ತಾಪತ್ರವಿಲ್ಲ. ಹಾಗೇ ಬೀಸಿದ ಮಿಶ್ರಣಕ್ಕೆ ಮಜ್ಜಿಗೆ+ಉಪ್ಪು ಬೇಕಿದ್ದರೆ ನೀರು ಹಾಕಿ ಹದಮಾಡಿಕೊಳ್ಳುವುದು. ಈ ತಂಬುಳಿಗೆ ಬೆಲ್ಲ ಹಾಕಲೇಬಾರದು! ರುಚಿಗೆಡುತ್ತದೆ.
---------
ಕರಿಬೇವಿನ ತಂಬುಳಿ, ಈರುಳ್ಳಿ ತಂಬುಳಿ, ವಿಟಮಿನ್ ಎಲೆಯ ತಂಬುಳಿ, ಎಲವರಿಗೆ ಕುಡಿಯ ತಂಬುಳಿ - ಹೀಗೆ ಹತ್ತು ಹಲವುಬಗೆಯ ತಂಬುಳಿಗಳಿವೆ... ಆಸಕ್ತರು ನನ್ನನ್ನು ಮೈಲ್ ಮೂಲಕ ಸಂಪರ್ಕಿಸಬಹುದು :).
-ತೇಜಸ್ವಿನಿ ಹೆಗಡೆ.
Wednesday, December 15, 2010
ಚುಮು ಚುಮು ಚಳಿಗೆ ಬಿಸಿ ಬಿಸಿ ಕಷಾಯ...
ಇನ್ನೇನು ಚಳಿಗಾಳಿ, ಶೀತ ಕಾಡತೊಡಗುತ್ತದೆ. ಹೀಗಿರುವಾಗ ಬಿಸಿ ಬಿಸಿ ಕಾಫಿ ಕುಡಿಯುವ ಮನಸಾಗುವುದು ಸಹಜ. ಆದರೆ ಕಾಫಿ, ಟೀ ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ ಎನ್ನುವುದು ಪ್ರಶ್ನೆ. ಗೂಗಲ್ ಮಾಡಿದರೆ ನಿಮಗೆ ಕಾಫಿಯ ಸತತ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ದೊಡ್ಡ ಲಿಸ್ಟೇ ಸಿಗುವುದು! ಹೀಗಿರುವಾಗ ಚಳಿಯನ್ನೋಡಿಸುವ, ರುಚಿಕರವಾಗಿರುವ ಜೊತೆಗೆ ಆರೋಗ್ಯಕರವೂ ಆಗಿರುವ ಪೇಯವೊಂದರ ಅಗತ್ಯತೆ ಚೆನ್ನಾಗಿ ಅರಿವಾಗುತ್ತದೆ. ನಮ್ಮಲ್ಲಿ ಅಂದರೆ ಶಿರಸಿಯ ಕಡೆ ಯಾರೇ ಬರಲಿ.. "ಒಂದು ಕುಡ್ತೆ ಕಷಾಯ"ವನ್ನಾದರೂ ಕೊಟ್ಟೇ ಕಳಿಸುವುದು ವಾಡಿಕೆ. ಊಟದ ಸಮಯವೇ ಆಗಿರಲಿ, ಇಲ್ಲಾ ಹೊದ್ದು ಮಲಗುವ ಸಮಯವೇ ಆಗಿರಲಿ... ಕಷಾಯ ನಮ್ಮ ಹಸಿವನ್ನು ತಣಿಸದು, ನಿದ್ದೆಯನ್ನು ಆರಿಸದು. ಬದಲಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಸುಖಕರವಾದ ನಿದ್ದೆಗೆ ಪ್ರೇರೇಪಿಸುವುದು. ಇಂತಹ ಕಷಾಯವನ್ನು ತಯಾರಿಸಲು ನಿಮಗೆ ತಗಲುವ ಸಮಯ ಕೇವಲ ೨-೩ ನಿಮಿಷ! ಆದರೆ ಮೊದಲು ಕಷಾಯದ ಹುಡಿಯನ್ನು ಮಾಡಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ. ಇದನ್ನು ತಯಾರಿಸಲು ತಗಲುವುದು ಕೇವಲ ೧೫ ನಿಮಿಷ. ಹೀಗೆ ತಯಾರಿಸಿಟ್ಟುಕೊಂಡ ಹುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳುಗಟ್ಟಲೆ ಬರುವುದು. ಈ ಪುಡಿಯನ್ನು ಉಪಯೋಗಿಸಿಯೇ ಕಷಾಯದ ಪೇಯವನ್ನು ತಯಾರಿಸುವುದು.
ಮೊದಲಿಗೆ ಕಷಾಯದ ಹುಡಿಯನ್ನು ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು :
೧. ಕೊತ್ತುಂಬರಿ ಬೀಜ - ೧/೨ ಲೋಟ
೨. ಜೀರಿಗೆ - ೧ ಲೋಟ
೩. ದಾಲ್ಚೀನಿ ಚಕ್ಕೆ - ಹೆಬ್ಬೆರಳಿನ ಗಾತ್ರದಷ್ಟು
೪. ಲವಂಗ - ೫-೬
೫. ಏಲಕ್ಕಿ - ೫-೬ (ಸಿಪ್ಪೆ ಸಹಿತ)
೬. ಕರಿ ಮೆಣಸಿನ ಕಾಳು - ೬
೭. ಬಡೇ ಸೊಪ್ಪು (ಸೋಂಪು) - ಒಂದು ಮುಷ್ಟಿ.
(ಮೇಲೆ ಹೇಳಿರುವ ಲೋಟ, ಹೋಟೇಲಿನಲ್ಲಿ ಕಾಫಿ ಕುಡಿಯಲು ಕೊಡುವಷ್ಟು ಸಣ್ಣ ಲೋಟವೂ ಅಲ್ಲ, ಹಳ್ಳಿಯಲ್ಲಿ ಆತಿಥ್ಯಮಾಡುವಾಗ ಕೊಡುವಷ್ಟು ದೊಡ್ಡದೂ ಅಲ್ಲ. ಮಧ್ಯಮ ಗಾತ್ರದ್ದು...:))
ಹುಡಿಯನ್ನು ಮಾಡುವ ವಿಧಾನ :
*ಮೊದಲಿಗೆ ಜೀರಿಗೆ + ಲವಂಗ + ಏಲಕ್ಕಿ + ದಾಲ್ಚೀನಿ + ಕರಿ ಮೆಣಸಿನ ಕಾಳುಗಳು ಎಲ್ಲವನ್ನೂ ಒಂದು ಚೆನ್ನಾಗಿ ಒಣಗಿದ ಬಾಣಲೆಗೆ ಹಾಕಿ ಹಾಗೇ ಚೆನ್ನಾಗಿ ಹುರಿಯಬೇಕು. (* ನೆನಪಿಡಿ ಎಣ್ಣೆಯನ್ನು ಹಾಕಿ ಹುರಿಯುವುದಲ್ಲ.) ಸುಮಾರು ಐದು ನಿಮಿಷದೊಳಗೇ ಕೆಂಪಗೆ ಹುರಿದು ಅದರ ಘಮ ಘಮ ಪರಿಮಳ ನಿಮ್ಮನ್ನಡರುವುದು.
*ಹಾಗೆ ಹುರಿದ ಪದಾರ್ಥಗಳನ್ನು, ಒಣಗಿದ ಮಿಕ್ಸಿಯಲ್ಲಿ ಹಾಕಿಡಿ. ತದನಂತರ ಅದೇ ಬಾಣಲೆಗೆ ಕುತ್ತೊಂಬರಿ ಬೀಜವನ್ನು ಹಾಕಿ ಮೊದಲಿನಂತೇ ಚೆನ್ನಾಗಿ ಹುರಿಯಿರಿ. ಕೇವಲ ೨ ನಿಮಿಷದೊಳಗೆ ಕೆಂಪಗೆ ಹುರಿದು ಬರುತ್ತದೆ. ಅದನ್ನೂ ಮಿಕ್ಸಿಯಲ್ಲಿ ಮೊದಲೇ ಹಾಕಿಟ್ಟಿದ್ದ ಮಿಶ್ರಣಕ್ಕೆ ಹಾಕಿಕೊಳ್ಳಿ.
*ನಂತರ ಮತ್ತೆ ಅದೇ ಬಾಣಲೆಯಲ್ಲಿ ಸೋಂಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದೂ ಸಹ ಕೂಡಲೇ ಒಂದೆರಡು ನಿಮಿಷಗಳೊಳಗೇ ಹುರಿದುಬರುತ್ತದೆ.
*ಕೊನೆಯಲ್ಲಿ ಎಲ್ಲಾ ಮಿಶ್ರಣವನ್ನೂ ಒಟ್ಟಿಗೇ ಸೇರಿಸಿ, ಮಿಕ್ಸಿಯಲ್ಲಿ ನುಣ್ಣಗೆ ಹುಡಿಮಾಡಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟರೆ ಘಮ ಘಮಿಸುವ ಕಷಾಯದ ಹುಡಿ ಉಪಯೋಗಕ್ಕೆ ಸಿದ್ಧ.
ಕಷಾಯ ಪೇಯವನ್ನು ಮಾಡುವ ವಿಧಾನ
ಇದು ಬಹಳ ಸುಲಭ. ಒಂದು ಕಪ್ ಅಳತೆಯಲ್ಲಿ ಹೇಳುವುದಾದರೆ ...
ಮೊದಲು ಅರ್ಧ ಲೊಟ ನೀರಿಗೆ ಒಂದು ಚಮಚ ಮೊದಲೇ ಮಾಡಿಟ್ಟಿದ್ದ ಕಷಾಯದ ಹುಡಿಯನ್ನು ಹಾಕಿ ಕುದಿಸಿ. ಕುದಿ ಬರುತ್ತಿದೆ ಎನ್ನುವಾಗಲೇ ಅರ್ಧ ಲೋಟ ಹಾಲು (ಬೇಕಿದ್ದರೆ ಹಾಲು ಹಾಕದೆಯೋ ಇಲ್ಲಾ ಸ್ವಲ್ಪವೇ ಹಾಲನ್ನು ಹಾಕಿಯೋ ಮಾಡಬಹುದು) ಹಾಕಿ ಬಿಸಿ ಮಾಡಿದರೆ ಕಷಾಯ ರೆಡಿ. ಸಿಹಿ ಬೇಕಿದ್ದವರು ಒಂದು ಚಮಚ ಸಕ್ಕರೆ ಹಾಕಿ ಸೇವಿಸಬಹುದು. ಇನ್ನು ಮಕ್ಕಳಿಗೆ ಬರೀ ಹಾಲಿನಲ್ಲೇ ಕಷಾಯವನ್ನು ಮಾಡಿ ಕೊಟ್ಟರೆ ಮತ್ತೂ ಉತ್ತಮ. (ನೀರನ್ನು ತೀರಾ ಕಡಿಮೆ ಹಾಕಿಯೋ ಇಲ್ಲಾ ಹಾಕದೆಯೂ..).
ವಿಶೇಷ ಸೂಚನೆ : - ಬೇಕಿದ್ದಲ್ಲಿ ಕಷಾಯದ ಹುಡಿಯನ್ನು ನೀರಿಗೆ ಹಾಕಿ ಕುದಿಸುವಾಗ ಕಾಲು ಚಮಚ ಜ್ಯೇಷ್ಠ ಮದ್ದಿನ ಹುಡಿ (ಎಲ್ಲಾ ಆಯುರ್ವೇದಿಕ್ ಅಂಗಡಿಗಳಲ್ಲಿ ಲಭ್ಯ)ಹಾಕಿ ಕುದಿಸಿ, ಹಾಲು ಹಾಕಿ ಕುಡಿದರೆ ಮತ್ತೂ ಉತ್ತಮ.
ವಿಶೇಷ ಸೂಚನೆ : - ಬೇಕಿದ್ದಲ್ಲಿ ಕಷಾಯದ ಹುಡಿಯನ್ನು ನೀರಿಗೆ ಹಾಕಿ ಕುದಿಸುವಾಗ ಕಾಲು ಚಮಚ ಜ್ಯೇಷ್ಠ ಮದ್ದಿನ ಹುಡಿ (ಎಲ್ಲಾ ಆಯುರ್ವೇದಿಕ್ ಅಂಗಡಿಗಳಲ್ಲಿ ಲಭ್ಯ)ಹಾಕಿ ಕುದಿಸಿ, ಹಾಲು ಹಾಕಿ ಕುಡಿದರೆ ಮತ್ತೂ ಉತ್ತಮ.
ಈ ಕಷಾಯವನ್ನು ಕುಡಿಯುವುದರಿಂದ ಆಗುವ ಉಪಯೋಗಗಳು ಹಲವು.
೧. ಯಾವುದೇ ರೀತಿಯ ಅಡ್ಡ ಪರಿಣಾಮಗಳುಂಟಾಗದು. ಯಾವ ಹೊತ್ತಿನಲ್ಲೂ ಎಷ್ಟು ಬೇಕಿದ್ದರೂ ಕುಡಿಯಬಹುದು.
೨. ಕಫ, ಗಂಟಲು ನೋವು, ಅಜೀರ್ಣದ ತೊಂದರೆ - ಈ ಎಲ್ಲಾ ಸಮಸ್ಯೆಗಳಿಗೂ ಇದು ಉತ್ತಮ ಪರಿಹಾರವಾಗಿದೆ.
೩. ಪಿತ್ತದ ಸಮಸ್ಯೆ ಇದ್ದವರು ಟೀ, ಕಾಫಿಯನ್ನು ಸೇವಿಸಲೇ ಬಾರದೆನ್ನುತ್ತಾರೆ ವೈದ್ಯರು. ಹಾಗಿರುವಾಗ ಈ ಪೇಯ ಅತ್ಯುತ್ತಮ ಬದಲಿಯಾಗಿದೆ.
೪. ಒಮ್ಮೆ ಈ ಕಷಾಯದ ರುಚಿ ಹತ್ತಿದವರು ಮತ್ತೊಮ್ಮೆ ಯಾವುದೇ ಕೆಫೆಯ ಕಡೆಯೂ ಹೆಜ್ಜೆ ಹಾಕರು.
-ತೇಜಸ್ವಿನಿ ಹೆಗಡೆ.
Subscribe to:
Posts (Atom)


