Friday, October 30, 2020

ಸಿಹಿ ಕುಂಬಳಕಾಯಿ (ಚೀನಿಕಾಯಿ) ಅತ್ರಾಸ

Sweet pumpkin, ಸೀಗುಂಬ್ಳ ಅಥವಾ ಚೀನಿಕಾಯಿಯು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು. ಇದರೊಳಗಿರುವ ಪೊಟಾಶಿಯಮ್ ಮತ್ತು ಬೀಟಾ ಕೆರೋಟಿನ್ ಕಣ್ಣಿಗೆ, ಹೃದಯಕ್ಕೆ, ರಕ್ತದೊತ್ತಡಕ್ಕೆ ಚರ್ಮದ ಹೊಳಪಿಗೆ ಹೀಗೆ ಹಲವು ರೀತಿಯಲ್ಲಿ ಇದು ಬಹಳ ಉಪಯೋಗಿ ಎಂದು ಹೇಳುತ್ತಾರೆ. ನಾವು ಇದರಿಂದ ಪಲ್ಯ, ಕೊದ್ದೆಲು, ಸಾಂಬಾರು, ಕಡುಬು, ಅತ್ರಾಸ – ಇತ್ಯಾದಿ ತಿನಿಸುಗಳನ್ನು ಮಾಡುತ್ತೇವೆ. ಕೊದ್ದಲು ಮಾದುವ ವಿಧಾನವನ್ನು ಇದೇ ಬ್ಲಾಗಿನಲ್ಲಿ ಹಾಕಿದ್ದು ಅದಕ್ಕಾಗಿ ಈ ಕೆಳಗಿನ ಲಿಂಕಿಗೆ ಭೇಟಿಕೊಡಬಹುದು… 👇👇

ಚೀನಿಕಾಯಿ ಕೊದ್ದೆಲು 

http://tejaswini-hegde.blogspot.com/2018/02/blog-post.html



 ಅತ್ರಾಸವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು:

 ೧) ಚೀನಿಕಾಯಿ – ೧/೪ ಕೆ.ಜಿ.

೨) ತೆಂಗಿನ ತುರಿ – ಸಣ್ಣ ಕಾಯಿಯಲ್ಲಿ ಅರ್ಧಭಾಗ

೩) ಅಕ್ಕಿ ಹಿಟ್ಟು – ೧/೪ ಕೆ.ಜಿ. (ಗಾಳಿಸಿಕೊಂಡಿರಬೇಕು)

೪) ಪರಿಮಳಕ್ಕೆ ಒಂದು ಚಮಚ ಏಲಕ್ಕಿ ಹುಡಿ

೫) ಬಿಳೇ ಎಳ್ಳು - ಎರಡು ಚಮಚ

೬) ಕರಿಯಲು ಎಣ್ಣೆ

೭) ಬೆಲ್ಲ – ಮುಕ್ಕಾಲು ಲೋಟ (ನೀರಾಗಿಸಿದ್ದು)

೮) ಉಪ್ಪು – ೧/೨ ಚಮಚ (ರುಚಿಗೆ ತಕ್ಕಷ್ಟು)

 ಮಾಡುವ ವಿಧಾನ: 

  • ಚೀನಿಕಾಯಿಯನ್ನು ತುರಿದುಕೊಳ್ಳಿ. ಇದಕ್ಕೆ ಹೆರೆದಿಟ್ಟಿಕೊಂಡಿರುವ ಕಾಯಿತುರಿಯನ್ನು ಸೇರಿಸಿ, ತುಸು ನೀರು ಚಿಮುಕಿಸಿ ಒಂದು ೫ ನಿಮಿಷ ಬೇಯಿಸಿಕೊಳ್ಳುವುದು.
  • ಸೀಗುಂಬ್ಳದಲ್ಲೇ ಸಿಹಿಯಂಶ ಇರುವುದರಿಂದ ಹೆಚ್ಚು ಬೆಲ್ಲ ಬೇಕಾಗುವುದಿಲ್ಲ. ಅಕ್ಕಿಹಿಟ್ಟನ್ನು ಯಾವ ಲೋಟದಲ್ಲಿ ಅಳತೆಗೆ ತೆಗೆದುಕೊಳ್ಳುವಿರೋ ಅದೇ ಲೋಟದಳತೆಯಲ್ಲಿ ಸುಮಾರು ಮುಕ್ಕಾಲು ಲೋಟ ಅಳತೆಯ ಬೆಲ್ಲವನ್ನು ಈ ಮಿಶ್ರಣಕ್ಕೆ ಹಾಕಿ.  ಗಮನಿಸಿ, ಇಲ್ಲಿ ನಾವು ತೆಗೆದುಕೊಂಡಿದ್ದು ಊರಿನ ಪಾಕ ಬೆಲ್ಲವನ್ನು. ಅದು ಮೊದಲೇ ನೀರಾಗಿರುತ್ತದೆ. ಅದನ್ನು ಮುಕ್ಕಾಲು ಲೋಟದಷ್ಟು ಹಾಕಲಾಗಿದೆ.
  • ಬೆಲ್ಲಹಾಕಿದ ಮೇಲೆ ಮಿಶ್ರಣಕ್ಕೆ ಉಪ್ಪು ಸೇರಿಸಿ ಸುಮಾರು ೧೫ ನಿಮಿಷ ಚೆನ್ನಾಗಿ ಕುದಿಸಿ. ಚೀನಿಕಾಯಿ, ತೆಂಗಿನತುರಿ ಎಲ್ಲವೂ ನೀರಾಗಿ ಕುದಿಯುವುದು.
  • ಇದಕ್ಕೆ ಅಕ್ಕಿಹಿಟ್ಟು ಹಾಗೂ ಹುರಿದಿಟ್ಟುಕೊಂಡಿರುವ ಎರಡು ಚಮಚ ಬಿಳೇ ಎಳ್ಳನ್ನು ಹಾಕಿ ಸಣ್ಣ ಉರಿಯಲ್ಲಿ ತೊಳೆಸುತ್ತಾ ಇರಬೇಕು. ತುಸು ಹೊತ್ತಿಗೆ ಮಿಶ್ರಣ ಮುದ್ದೆಯಾಗಿ ಬರುತ್ತದೆ. ಮಿಶ್ರಣವು ಹದವಾಗಿದೆಯೆ ಎಂದು ತಿಳಿಯಲು ಅಂಗೈಗೆ ತುಪ್ಪ ಸವರಿಕೊಂಡು ಮುದ್ದೆಯಾದ ಮಿಶ್ರಣವನ್ನು ಸ್ವಲ ಮುಟ್ಟಿನೋಡಿ. ಹದವಾಗಿ ಬಂದಿದ್ದರೆ ಅದು ಅಂಗೈಗೆ ಅಂಟುವುದಿಲ್ಲ. ಆಗ ಗ್ಯಾಸ್ ಆಫ್ ಮಾಡಿಬಿಡಿ.
  • ಹದಗೊಂಡ ಮಿಶ್ರಣವನ್ನು ಸುಮಾರು ೧೫ ನಿಮಿಷಗಳ ಕಾಲ ಮುಚ್ಚಿಡಬೇಕು.
  • ಬಾಳೆಯೆಲೆಯ ಮೇಲೋ ಇಲ್ಲಾ ಹೋಳಿಗೆ ಮಾಡುವ ಕವರಿನ ಮೇಲೋ ತುಪ್ಪ ಸವರಿಕೊಂಡ ಕೈಯಲ್ಲಿ ಮಿಶ್ರಣವನ್ನು ನುಣ್ಣಗೆ ಉಂಡೆಮಾಡಿಕೊಂಡು ಅಂಗೈಯಲ್ಲಿ ಒತ್ತಿಕೊಳ್ಳಿ.
  • ಕರಿಯಲು ಎಣ್ಣೆಯನ್ನು ಬಿಸಿಮಾಡಿಕೊಂಡು ಮಧ್ಯಮ ಉರಿಯಲ್ಲೇ (ಸಣ್ಣ ಅಥವಾ ದೊಡ್ಡ ಉರಿಯಲ್ಲಲ್ಲ) ಕವರಿನ ಮೇಲೆ ಒತ್ತಿಕೊಂಡಿದ್ದನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಕರಿಯಿರಿ. ಬಂಡಿಗೆಹಾಕಿದ ಮೇಲೆ ಅದು ಕರಿದುಬರುವಾಗಲೇ ಜಾಲಿ ಹುಟ್ಟಿನಿಂದ ತಟ್ಟಿದರೆ ಅದು ಉಬ್ಬುವುದು. ಮಗುಚಿಹಾಕಿ ಕೆಂಪಗೆ ಬೇಯಿಸಿ ತೆಗೆಯುವುದು.
  • ಚೆನ್ನಾಗಿ ಕರಿದ ಈ ಅತ್ರಾಸವನ್ನು ಗಾಳಿಯಾಡದ ಡಬ್ಬದಲ್ಲಿಡಬೇಕು. ಈ ಅತ್ರಾಸಕ್ಕೆ ತಯಾರಿಸಿದ ದಿನಕ್ಕಿಂದ ಎರಡು ದಿನಗಳ ನಂತರವೇ ರುಚಿ ಹೆಚ್ಚು.

 ~ತೇಜಸ್ವಿನಿ ಹೆಗಡೆ.