Wednesday, February 24, 2016

ತರ ತರ ವಿಧ ವಿಧ ತರಕಾರಿ ಹಶಿಗಳು..

ನಮ್ಮಲ್ಲಿ ಅಂದರೆ ಮಲೆನಾಡಿನಲ್ಲಿ ತಂಬುಳಿಯಷ್ಟೇ ಪ್ರಸಿದ್ಧ ಪ್ರಚಲಿತ ಹಶಿಗಳು. ಹಶಿಗೆ ನೀವು ಒಂದರ್ಥದಲ್ಲಿ ಸಾಲಡ್ ಅಂತಾನೋ ಇಲ್ಲಾ ಮೊಸರು ಬಜ್ಜಿ ಅಂತಾನೂ ಕರೆಯಬಹುದು. (ಇನ್ಯಾವ್ಯಾವ ಹೆಸರುಗಳಿವೆ ಗೊತ್ತಿಲ್ಲ.). ಇಲ್ಲಿ ನಾನು ಬಾಳೆಕಾಯಿ, ಸವತೆಕಾಯಿ, ಬದನೆಕಾಯಿ, ಬಟಾಟೆ, ಹಾಗಲಕಾಯಿ, ಮೆಂತೆಸೊಪ್ಪು, ಬೀಟ್ರೂಟು - ಈ ಕಾಯಿಪಲ್ಲೆಗಳ ಹಶಿಯ ತಯಾರಿಕಾ ವಿಧಾನವನ್ನು ಹೇಳುತ್ತಿದ್ದೇನೆ. ಇವೆಲ್ಲಾ ತಯಾರಿಸಲು ಬಲು ಸುಲಭ, ಸರಳ, ತುಂಬಾ ರುಚಿಕರ, ಆರೋಗ್ಯಕ್ಕೂ ಹಿತಕರ. ಮಾಡಲು ಬೇಕಾಗುವ ಸಾಮಗ್ರಿಗಳೂ ಅತ್ಯಲ್ಪ. ನೀವೂ ಮಾಡಿ, ತಿಂದು, ಹೇಗಿತ್ತು ಎಂದು ಹೇಳಿದರೆ ಹೇಳಿಕೊಟ್ಟ ನನಗೆ ಗುರು ದಕ್ಷಿಣೆ ಸಂದಾಯ ;)

ಹಶಿಗಳ ಪಟ್ಟಿ ತುಸು ಉದ್ದವಿರುವುದರಿಂದ ಇದನ್ನು ಭಾಗ ಒಂದು ಹಾಗೂ ಎರಡರಲ್ಲಿ ವಿಂಗಡಿಸಿದ್ದೇನೆ.

ಭಾಗ -೧

ಸೂಚನೆ: ೧) ಇಲ್ಲಿ ೪-೫ ಜನರಿಗೆ ಸಾಕಾಗುವಷ್ಟು ಪ್ರಮಾಣವನ್ನು ಕೊಡಲಾಗಿದೆ.
 ೨) ಇಲ್ಲಿ ಹೇಳಿರುವ ಎಲ್ಲಾ ಹಶಿಗಳಿಗೂ ಸ್ವಲ್ಪ (ಒಂದು ಮುಷ್ಟಿಯಷ್ಟು) ಕಾಯಿಯನ್ನು ರುಬ್ಬಿ ಹಾಕುತ್ತೇವೆ. ಆದರೆ ಅದು ಅತ್ಯವಶ್ಯಕ ಅಲ್ಲ. ತೆಂಗಿನ ಕಾಯಿ ಇಲ್ಲದೇ ಬರೀ ಮೊಸರಿನಲ್ಲಿ ಮಾಡಿದರೂ ಬಲು ರುಚಿಯಾಗಿರುತ್ತದೆ. ಕೆಲವೊಮ್ಮೆ ಮೊಸರು ಇಲ್ಲದಿದ್ದಾಗ ಬರೀ ಅರ್ಧ ಕಡಿ ಕಾಯಿಯನ್ನೇ ಬೀಸಿ ಹಾಕುವುದೂ ಇದೆ. ಸಾಮಾನ್ಯವಾಗಿ ಮೊಸರು + ತುಸು ಕಾಯಿ ಇದ್ದರೆ ಚೆನ್ನ.  ಅವರವರ ರುಚಿಗೆ ಬಿಟ್ಟಿದ್ದು. ಪ್ರಸ್ತುತ ಇಲ್ಲಿ ತೆಂಗಿನ ತುರಿ ನಾನು ಬಳಸಿಲ್ಲ. ನೀವು ಬೇಕಿದ್ದರೆ ತೆಂಗಿನ ತುರಿಯನ್ನೂ ಬೀಸಿ ಮೊಸರಿಗೆ ಮಿಶ್ರಮಾಡಬಹುದು ಇಲ್ಲಾ ಮೊಸರು ತೀರಾ ಕಡಿಮೆ ಇದ್ದಲ್ಲಿ, ತೆಂಗಿನ ತುರಿಯನ್ನೇ ಜಾಸ್ತಿ ರುಬ್ಬಿ ತೆಂಗಿನ ಹಾಲನ್ನು ಜಾಸ್ತಿ ಹಾಕಬಹುದು. ತೆಂಗಿನ ಹಾಲು ಹಾಕಿದರೆ ಬೇರೆಯೇ ರುಚಿ ಸಿಗುತ್ತದೆ. ಅದೂ ಬಲು ಚೆನ್ನಾಗಿಯೇ ಇರುತ್ತದೆ.

೧) ಬಾಳೆಕಾಯಿ ಹಶಿ


ಬೇಕಾಗುವ ಸಾಮಗ್ರಿಗಳು :-

* ಎರಡು ಮಧ್ಯಮ ಗಾತ್ರದ ಬಾಳೇಕಾಯಿ (ತೀರಾ ದೊಡ್ಡದಿದ್ದರೆ ಒಂದೇ ಸಾಕು ನಾಲ್ಕು ಜನರಿಗೆ)
* ಈರುಳ್ಳಿ - ದೊಡ್ಡದಾದರೆ ಒಂದು, ಚಿಕ್ಕದಿದ್ದಲ್ಲಿ ಎರಡು
* ರುಚಿಗೆ ತಕ್ಕಷ್ಟು ಉಪ್ಪು
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿ ಮೆಣಸು ಅಥವಾ ಒಣ ಕೆಂಪು ಮೆಣಸು (ಖಾರಕ್ಕೆ ತಕ್ಕಂತೇ)
* ದಪ್ಪ ಮೊಸರು - ೪-೫ ಸೌಟು
* ತುಸು ನೀರು (ಬೇಕಿದ್ದಲ್ಲಿ)

ಮಾಡುವ ವಿಧಾನ

* ಮೊದಲು ಬಾಳೇಕಾಯಿಗಳ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ
* ಅದಕ್ಕೆ ತುಸು ಉಪ್ಪು ಹಾಕಿ ಬೇಯುವಷ್ಟು ನೀರು ಸುರಿದು ಗ್ಯಾಸಿನಲ್ಲಿ ಬೇಯಿಸಿಕೊಳ್ಳಿ. ಬಾಳೆಕಾಯಿ ಬಹು ಬೇಗನೆ ಐದು ನಿಮಿಷದೊಳಗೆ ಬೆಂದು ಹೋಗುವುದು.
* ಬೆಂದ ಬಾಳೆಕಾಯಿಯನ್ನು ತಣಿಯಲು ಬಿಡಿ. ಅದು ತಣಿದ ಮೇಲೆ ಬೇಕಿದ್ದರೆ ರುಬ್ಬಿದ ಕಾಯಿ ಹಾಲು + ಮೊಸರು ಸೇರಿಸಿ. ಇಲ್ಲಾ ಹಾಗೇ ಮೊಸರನ್ನು ಹಾಕಿ. ಕಾಯಿ ಹಾಲು ಹಾಕುವುದಿದ್ದರೆ ಮೊಸರಿನ ಪ್ರಮಾಣ ಕಡಿಮೆ ಮಾಡಿ.
* ಉಪ್ಪಿನ ಹದ ನೋಡಿ, ಬೇಕಿದ್ದಲ್ಲಿ ತುಸು ಸೇರಿಸಿಕೊಳ್ಳಿ. ಈ ಮಿಶ್ರಣಕ್ಕೆ ಈರುಳ್ಳಿಗಳನ್ನು ಚಿಕ್ಕದಾಗಿ  ಹೆಚ್ಚಿ ಹಾಕಿ.
* ತದನಂತರ ಮೇಲೆ ಹೇಳಿದ ಪದಾರ್ಥಗಳಿಂದ ಒಗ್ಗರಣೆ ಕೊಟ್ಟು ಮುಚ್ಚಿಡಿ. ಖಾರ ಪ್ರಿಯರಾಗಿದ್ದರೆ ಹಸಿಮೆಣಸು ಅಥವಾ ಒಣಮೆಣಸನ್ನು ಹೆಚ್ಚು ಬಳಸಬಹುದು. ಇನ್ನು ಹಶಿ ತೀರಾ ದಪ್ಪಗಿದೆ ಎಂದೆನಿಸಿದರೆ ತುಸು ನೀರನ್ನು ಬೆರೆಸಬಹುದು.

ಬಿಸಿ ಬಿಸಿ ಅನ್ನಕ್ಕೆ ಗಟ್ಟಿಯಾಗಿ ಹಶಿಯನ್ನು ಕಲಸಿ ತಿಂದರೆ ಬೇರೇನೂ ಪದಾರ್ಥ ಬೇಕಾಗದು.

~~~~~

೨) ಸವತೆಕಾಯಿ ಹಶಿ


ಬೇಕಾಗುವ ಸಾಮಗ್ರಿಗಳು :-

* ಎರಡು ಮಧ್ಯಮ ಗಾತ್ರದ ಸವತೆಕಾಯಿ (ತೀರಾ ಚಿಕ್ಕದಿದ್ದಲ್ಲಿ ಮೂರೂ ಹಾಕಬಹುದು.)
*  ರುಚಿಗೆ ತಕ್ಕಷ್ಟು ಉಪ್ಪು
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿ ಮೆಣಸು ಅಥವಾ ಒಣ ಕೆಂಪು ಮೆಣಸು (ಖಾರಕ್ಕೆ ತಕ್ಕಂತೇ), ಚಿಟಿಕೆ ಅರಿಶಿನ.
* ದಪ್ಪ ಮೊಸರು - ೪-೫ ಸೌಟು

ಮಾಡುವ ವಿಧಾನ

* ಇದು ಮತ್ತೂ ಸರಳವಾಗಿದೆ. ಮೊದಲು ಸವತೆಯಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಸಿಪ್ಪೆ ಬೇಡದಿದ್ದರೆ, ಅದನ್ನು ಮೇಲಿಂದ ಚೂರು ತೆಗೆದುಕೊಳ್ಳಬಹುದು. ಸವತೆಯ ತುತ್ತ ತುದಿಯನ್ನು ಸ್ವಲ್ಪ ತೆಗೆದು ರುಚಿ ನೋಡಿಕೊಳ್ಳಿ. ಒಮ್ಮೊಮ್ಮೆ ಸವತೆಕಾಯಿ ಬಲು ಕಹಿಯಾಗಿರುತ್ತದೆ. ಕಹಿಯಿಲ್ಲದಿದ್ದಲ್ಲಿ ಚಿಕ್ಕದಾಗಿ ಹೆಚ್ಚಿಕೊಳ್ಳಿ.
* ಬಾಣಲೆಗೆ ಎಣ್ಣೆ ಹಾಕಿ ಮೇಲೆ ಹೇಳಿದ ಪದಾರ್ಥಗಳಿಂದ ಒಗ್ಗರಣೆ ಹಾಕಿಕೊಳ್ಳಿ.
* ಇನ್ನೇನು ಒಗ್ಗರಣೆ ಬೆಂದಿತು ಎನ್ನುವಾಗ ಚಿಟಿಕೆ ಅರಿಶಿನ ಹಾಕಿ, ಹೆಚ್ಚಿದ ಸವತೆಯನ್ನೂ ಹಾಕಿ ಚೆನ್ನಾಗಿ ಒಮ್ಮೆ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ ಬಿಡಿ. ಒಂದೊಮ್ಮೆ ನಿಮಗೋ, ನಿಮ್ಮ ಮಕ್ಕಳಿಗೋ ಶೀತವಿದ್ದಲ್ಲಿ, ತುಸು ಹೊತ್ತು ಹೆಚ್ಚು ಸವತೆಯನು ಬಿಸಿಯಲ್ಲೇ ಬಾಡಿಸಿದರೆ, ಅದರ ಶೀತದ ಅಂಶ ಹೋಗಿ ಹೆಚ್ಚು ತೊಂದರೆ ಆಗದು. ಇಲ್ಲದಿದ್ದರೆ ಹೆಚ್ಚು ಬಾಡಿಸಬೇಕೆಂದಿಲ್ಲ.
* ಒಗ್ಗರಿಸಿದ ಸವತೆ ಮಿಶ್ರಣ ಸಂಪೂರ್ಣ ತಂಪಾದ ಮೇಲೆ ಅದಕ್ಕೆ ಮೊಸರನ್ನು ಹಾಕಿ, ಉಪ್ಪು ಬೇಕಿದ್ದಲ್ಲಿ ಸೇರಿಸಿ ಊಟದ ಜೊತೆ ಸವಿಯಿರಿ. (ಇಲ್ಲೂ ಕಾಯಿ ಹಾಲು ಬೇಕಿದ್ದಲ್ಲಿ ಹಾಕಿಕೊಳ್ಳಬಹುದು.)
ಸವತೆಯಲೇ ನೀರಿನಂಶ ಧಾರಾಳವಿರುವುದರಿಂದ ಇದಕ್ಕೆ ಮತ್ತೆ ನೀರು ಸೇರಿಸುವ ಅಗತ್ಯವಿರುವುದಿಲ್ಲ.

~~~~

೩) ಬದನೆಕಾಯಿ ಹಶಿ


 ಬೇಕಾಗುವ ಸಾಮಗ್ರಿಗಳು :-

* ಎರಡು ಮಧ್ಯಮ ಗಾತ್ರದ ಬದನೆಕಾಯಿ (ತೀರಾ ದೊಡ್ಡದಿದ್ದರೆ ಒಂದೇ ಸಾಕು.. ತುಂಬಾ ಚಿಕ್ಕದಿದ್ದರೆ ನಾಲ್ಕೈದು ಬೇಕು)
* ಈರುಳ್ಳಿ - ತುಂಬಾ ದೊಡ್ಡದಾದರೆ ಒಂದು, ಚಿಕ್ಕದಿದ್ದಲ್ಲಿ ಎರಡು
* ರುಚಿಗೆ ತಕ್ಕಷ್ಟು ಉಪ್ಪು
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿ ಮೆಣಸು ಅಥವಾ ಒಣ ಕೆಂಪು ಮೆಣಸು (ಖಾರಕ್ಕೆ ತಕ್ಕಂತೇ), ಚಿಟಿಗೆ ಅರಿಶಿನ
* ದಪ್ಪ ಮೊಸರು - ೪-೫ ಸೌಟು
* ತುಸು ನೀರು (ಬೇಕಿದ್ದಲ್ಲಿ)

ತಯಾರಿಸುವ ವಿಧಾನ

ಬದನೆಕಾಯಿ ಹಶಿಯನು ನಾವು ಎರಡು ವಿಧದಲ್ಲಿ ಮಾಡುತ್ತೇವೆ.

ವಿಧಾನ ೧ :-

* ಬದನೆಕಾಯಿಯನ್ನು ತೊಳೆದು, ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹೆಚ್ಚಿಕೊಂಡ ಬದನೆಕಾಯಿಯನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿಟ್ಟಿರಿ. ಹೀಗೆ ಮಾಡುವುದರಿಂದ ಬದನೇಕಾಯಿ ಕಪ್ಪಾಗುವುದನ್ನು ತಡೆಯಬಹುದು ಮತ್ತು ಅದರ ಚೊಗರಿನ ರುಚಿಯೂ ಮಾಯವಾಗುವುದು.
* ನೀರಿನಲ್ಲಿ ನೆನೆಸಿಟ್ಟಿ ಬದನೆ ಚೂರುಗಳನ್ನು ಹಿಂಡಿ ತೆಗೆದು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. (ನೆನೆಸಿಟ್ಟ ನೀರನ್ನು ಚೆಲ್ಲಬೇಕು.) ಅದಕ್ಕೆ ಬೇಯಲಷ್ಟೇ ಸಾಕಾಗುವಷ್ಟು ನೀರನ್ನು ಸೇರಿಸಿ, ಇದಕ್ಕೆ ತುಸು ಉಪ್ಪು ಹಾಕಿ ಗ್ಯಾಸಿನಲ್ಲಿ ಬೇಯಿಸಿಕೊಳ್ಳಿ.
* ಬೇಯಿಸಿಕೊಂಡ ಮಿಶ್ರಣವು ತಣಿದ ಮೇಲೆ ಅದಕ್ಕೆ ಕಾಯಿ ಹಾಲು (ಬೇಕಿದ್ದರೆ), ಮೊಸರು ಹಾಗೂ ಈರುಳ್ಳಿ ಹೆಚ್ಚಿ ಹಾಕಿ ಚೆನ್ನಾಗಿ ಕಲಸಿ.
* ಈ ಮಿಶ್ರಣಕ್ಕೆ ಮೇಲೆ ಹೇಳಿದ ಪದಾರ್ಥಗಳಿಂದ ಒಗ್ಗರಣೆ ಕೊಟ್ಟರೆ ರುಚಿ ಶುಚಿಯಾದ ಹಶಿ ರೆಡಿ.

ವಿಧಾನ - ೨

* ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಹೆಚ್ಚಿಟ್ಟಿದ್ದಕ್ಕೆ ತುಸು ಉಪ್ಪು ಹಾಗೂ ಅರಿಶಿನ ಹಾಕಿ ತುಸು ಹೊತ್ತು ಕಲಸಿಡಿ. (ನೀರು ಹಾಕಬೇಡಿ. ಉಪ್ಪು ಕರಗಿ ನೀರಾಗಿ ಚೊಗರನ್ನು ತೆಗೆಯುವುದರಿಂದ, ನೀರು ಅನಗತ್ಯ. ಅಲ್ಲದೇ ತದನಂತರ ಹುರಿಯಬೇಕಾಗಿರುವುದರಿಂದ ನೀರಿನಂಶವಿರಬಾರದು)
* ಬಾಣಲೆಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಸಾಸಿವೆ, ಹಸಿಮೆಣಸು ಅಥವಾ ಒಣಮೆಣಸು, ಇಂಗು ಹಾಕಿ ಒಗ್ಗರಿಸಿಕೊಳ್ಳಿ. (ಈ ಒಗ್ಗರಣೆಗೆ ಅರಿಶಿನ ಬೇಡ.. ಮೊದಲೇ ಮೇಲೆ ಹಾಕಿರುವುದರಿಂದ)
* ಒಗ್ಗರಣೆ ಬೆಂದಂತೇ ಉಪ್ಪು+ಅರಿಶಿನ ಹಾಕಿಟ್ಟ ಬದನೆಕಾಯಿ ಚೂರುಗಳನ್ನು ಹಿಂಡಿ ಒಗ್ಗರಣೆಗೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. (ಇಲ್ಲಿ ಹುರಿಯುವುದು ಇರುವುದರಿಂದ ಒಗ್ಗರಣೆಗೆ ತುಸು ಜಾಸ್ತಿ ಎಣ್ಣೆ ಬೇಕಾಗುವುದು. ನೆನಪಿರಲಿ.)
* ಬದನೆಕಾಯಿ ಚೂರುಗಳು ಒಗ್ಗರಣೆಯಲ್ಲೇ ಹುರಿದು ಬೆಂದ ಮೇಲೆ ಸಂಪೂರ್ಣ ತಣಿಯಲು ಬಿಡಿ.
* ಈ ಮಿಶ್ರಣಕ್ಕೆ ಮೊಸರು, ಈರುಳ್ಳಿ, ಬೇಕಿದ್ದರೆ ತೆಂಗಿನ ತುರಿ ಬೀಸಿದ ಕಣಕು ಹಾಕಿ, ಉಪ್ಪು ಬೇಕಿದ್ದಲ್ಲಿ ಅದನ್ನೂ ಸೇರಿಸಿ, ದಪ್ಪಗಾಗಿದ್ದಲ್ಲಿ ನೀರನ್ನೂ ಹಾಕಿಕೊಂಡು ಚೆನ್ನಾಗಿ ಕಲಸಿ. ಬಿಸಿ ಬಿಸಿ ಅನ್ನಕ್ಕೆ ಹತ್ತಕೆ (ಗಟ್ಟಿಯಾಗಿ) ಕಲಸಿ ತಿಂದರೆ ಕೈ ಚಪ್ಪರಿಸುವುದು. ಖಾರ ಬೇಕಾದವರು ತುಸು ಹೆಚ್ಚು ಮೆಣಸನ್ನು ಒಗ್ಗರಣೆಗೆ ಸೇರಿಸಿಕೊಳ್ಳಬಹುದು.

ಸೂಚನೆ :-  ಈ ಮೇಲಿನ ಎರಡು ವಿಧಾನಗಳಲ್ಲದೇ, ಇನ್ನೂ ಒಂದು ವಿಧಾನವಿದೆ. ಬದನೇಕಾಯಿ ಉದ್ದ ಗಾತ್ರದಲ್ಲಿದ್ದರೆ, ಗ್ಯಾಸಿನಲ್ಲಿಟ್ಟು ಬೇಯಿಸಿಕೊಳ್ಳುವುದು. (ಬೇಯಿಸಲಿಡುವ ಮುನ್ನ ಅದಕ್ಕೆ ನಾಲ್ಕೈದು ಕಡೆ ತೂತು ಮಾಡುವುದು. ಇದರಿಂದ ಅದು ಚೆನ್ನಾಗಿ ಬೇಯುವುದು). ಬದನೆಕಾಯಿ ಚೆನ್ನಾಗಿ ಬೆಂದ ಮೇಲೆ ಅದರ ಸಿಪ್ಪೆ ಸುಲಿದು ಸೌಟಲ್ಲಿ ಅದನ್ನು ಕೊಚ್ಚಿ, ಪೇಸ್ಟ್ ತರಹ ಮಾಡಿ, ಆ ಮಿಶ್ರಣಕ್ಕೆ ಈರುಳ್ಳಿ, ಮೊಸರು, ಉಪ್ಪು ಹಾಕಿ ಮೇಲಿನ ಒಗ್ಗರಣೆ ಸಾಮಗ್ರಿಗಳಿಂದ ಒಗ್ಗರಿಸಿದರೆ ಇದು ಬೇರೆಯೇ ಒಂದು ಟೇಸ್ಟ್ ನೀಡುವುದು. ಸುಟ್ಟ ಬದನೆಕಾಯಿ ಹಶಿ ಎಂದೇ ಪ್ರಸಿದ್ಧಿಯೂ ಇದೆ :)

ನೆನಪಿರಲಿ :- ಪ್ರತಿಯೊಂದು ಹಶಿಗೂ ಅದನ್ನು ಹುರಿದೋ ಇಲ್ಲಾ ಬೇಯಿಸಿಯೋ ಮಾಡುವಾಗ, ಅದು ಸಂಪೂರ್ಣ ತಣಿದ ವಿನಃ ಮೊಸರು+ಕಾಯಿ ಸೇರಿಸಬೇಡಿ. ಬಿಸಿ ಇರುವಾಗಲೇ ಸೇರಿಸಿದರೆ ತುಸು ಅಡ್ಡ ವಾಸನೆ ಹೊಂದಿ ಕೆಡುವ ಸಂಭವ ಹೆಚ್ಚಾಗುವುದು.

ಸರಿ.. ಈಗ ಇವಿಷ್ಟು ಹಶಿಯನ್ನು ಈ ವಾರದಲ್ಲಿ ಮಾಡಿ ತಿಂದು ತೇಗಿ, ರಿಸಲ್ಟ್ ನನಗೆ ಕೊಟ್ಟ ಮೇಲೆ ಭಾಗ -೨ ನ್ನು ರಿಲೀಸ್ ಮಾಡಲಾಗುವುದು. :)

ಚಿತ್ರಗಳ ಕೃಪೆ : ಗೂಗಲಣ್ಣ.

~ತೇಜಸ್ವಿನಿ ಹೆಗಡೆ