Wednesday, August 29, 2012

ಸರಳ, ಸುಲಭ, ಅತಿ ರುಚಿಕರ ಈ ಮೆಂತೆಸೊಪ್ಪು + ಕಡಲೇಹಿಟ್ಟಿನ ಪಲ್ಯ


ಮೆಂತೆಸೊಪ್ಪು(fenugreek leaves) ಬಾಯಿಗೆ ಸ್ವಲ್ಪ ಕಹಿ ಎನಿಸಿದರೂ ದೇಹಕ್ಕೆ ಬಹು ಸಿಹಿ... ಹಿತ. ಸರಿಯಾದ ರೀತಿಯಲ್ಲಿ ಬಳಸಿದರೆ ಕಹಿ ಅಂಶವೂ ಗಮನಕ್ಕೆ ಬಾರದು.  ವಿಟಮಿನ್ ಎ, ಸಿ ಹಾಗೂ ಪೊಟಾಶಿಯಂ, ಕಬ್ಬಿಣ, ಕ್ಯಾಲ್ಶಿಯಂ ಖನಿಜಾಂಶಗಳನ್ನು ಹೊಂದಿರುವ ಮೆಂತೆ ಸೊಪ್ಪು ಹತ್ತು ಹಲವು ರೋಗಗಳಿಗೆ ರಾಮಬಾಣ. ಬಲು ತಂಪು ಈ ಸೊಪ್ಪು.

ಮಧುಮೇಹ, ಮಲಬದ್ಧತೆ, ತಲೆನೋವು, ಕಣ್ಣಿನ ಸಮಸ್ಯೆ, ನೆತ್ತಿಯುರಿ, ಪಿತ್ಥ - ಈ ಎಲ್ಲಾ ರೋಗಗಳನ್ನು ಮೆಂತೆ ಕಾಳು ಹಾಗೂ ಸೊಪ್ಪಿನ ಬಳಕೆಯಿಂದ ದೂರವಿರಿಸಬಹುದು.

ಮಧುಮೇಹಿಗಳಿಗೊಂದು ಚಿಕ್ಕ ಸಲಹೆ : ರಾತ್ರಿ ಸ್ವಲ್ಪ ಮೆಂತೆ ಕಾಳನ್ನು ನೆನೆಸಿಕೊಂಡು ಮರುದಿವಸ ಅದನ್ನು ಬೀಸಿ ಹಸಿಹೊಟ್ಟೆಯಲ್ಲಿ ಕುಡಿಯುವುದರಿಂದ ಬಹು ಬೇಗ ಮಧುಮೇಹ ತಹಬಂದಿಗೆ ಬರುವುದು. ಇಲ್ಲಾ... ಮೆಂತೆಕಾಳನ್ನು ಹಾಗೇ ಹುಡಿ ಮಾಡಿಟ್ಟುಕೊಂಡು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು, ಊಟದ ಸಮಯದಲ್ಲಿ ಮೊದಲ ಕೆಲವು ತುತ್ತುಗಳಿಗೆ ಈ ಹಿಟ್ಟನ್ನು ಕಲಸಿ ತಿನ್ನುವುದರಿಂದಲೂ ತುಂಬಾ ಉಪಕಾರಿ.

ಇನ್ನು ಹಸಿ ಬಾಣಂತಿಯರಲ್ಲಿ ಹಾಲಿನ ಕೊರತೆ ಹಲವು ಬಾರಿ ಕಾಡುವುದು. ಆಗಾಗ ಮೆಂತೆ ಸೊಪ್ಪಿನ ಸೂಪ್, ತಂಬುಳಿ, ಪಲ್ಯ, ಹುಳಿ, ದೋಸೆ ಇತ್ಯಾದಿ ತಿಂಡಿ ಪದಾರ್ಥಗಳ ರೂಪದಲ್ಲಿ ಕೊಡುವುದರಿಂದ, ಸ್ವಲ್ಪ ಮೆಂತೆ ಕಾಳನ್ನು ಬೀಸಿ ಹಾಲಿನೊಂದಿಗೆ ಬೆರೆಸಿಕೊಡುವುದರಿಂದಲೂ ಸಮಸ್ಯೆಯನ್ನು ನಿವಾರಿಸಬಹುದು. (ಇದು ಅನಾದಿಕಲದಿಂದಲೂ ನಡೆಸಿಕೊಂಡು ಬಂದ ರೀತಿ-ನೀತಿ. ಸತ್ಯಕ್ಕೆ ಸತ್ಯವಾದ್ದು. ಹಾಗೂ ವೈಜ್ಞಾನಿಕವಾಗಿಯೂ ಒಪ್ಪಿಕೊಂಡದ್ದು.)

ಇಂತಹ ಬಹೂಪಯೋಗಿ ಮೆಂತೆ ಸೊಪ್ಪನ್ನು ನಮ್ಮ ಕಡೆ (ಶಿರಸಿಯ ಕಡೆ) ತಂಬುಳಿ, ಗೊಜ್ಜು, ದೋಸೆ, ಚಪಾತಿ, ಮೆಂತೆ ರೈಸ್ - ಇತ್ಯಾದಿ ತಿನಿಸುಗಳನ್ನು ತಯಾರಿಸಲು ವಿಶೇಷವಾಗಿ ಬಳಸುತ್ತಾರೆ.

CopyRight : Tejaswini Hegde
ಇತ್ತೀಚಿಗೆ ಮುಂಬಯಿಯಲ್ಲಿದ್ದ ನನ್ನ ಚಿಕ್ಕಮ್ಮ ನಮ್ಮ ಮನೆಗೆ ಬಂದಾಗ ಮೆಂತೆ ಸೊಪ್ಪು + ಕಡಲೇ ಹಿಟ್ಟು ಬೆರೆಸಿ ತಯಾರಿಸುವ ವಿಶೇಷರೀತಿಯ ಸುಲಭ ಸರಳ ಪಲ್ಯವೊಂದನ್ನು ಕಲಿಸಿಕೊಟ್ಟರು. ಇದು ಅಲ್ಲಿಯ ವಿಶೇಷತೆಯಂತೆ! ತಿನ್ನಲು ಬಹು ರುಚಿಕರವಾಗಿತ್ತು. ಬೆಳ್ಳುಳ್ಳಿಯನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಅದು ಕಡಲೇಹಿಟ್ಟಿನೊಳಗಿನ ಗ್ಯಾಸ್ಟ್ರಿಕ್ ಅಂಶವನ್ನು ತೆಗೆಯುವುದು. ಮೆಂತೆಸೊಪ್ಪಿನೊಳಗಿನ ಕಹಿ ಅಂಶವನ್ನು ಕಡಲೇ ಹಿಟ್ಟು ಹೀರಿಕೊಳ್ಳುವುದರಿಂದ ಬಾಯಿಗೆ ಹಿತ. ಹಾಗೆಯೇ ಮೆಂತೆಯೊಳಗಿರುವ ಉತ್ತಮ ಅಂಶಕ್ಕೆ ಬೆಳ್ಳುಳ್ಳಿಯ ಉತ್ತಮ ಅಂಶವೂ ಸೇರುವುದರಿಂದ ಹೊಟ್ಟೆಗೂ ಹಿತ.  

ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು :

೧. ಮೆಂತೆ ಸೊಪ್ಪು (ಹದಾ ದೊಡ್ಡ ಕಟ್ಟು) - ೨
೨. ಈರುಳ್ಳಿ - ೩
೩. ಬೆಳ್ಳುಳ್ಳಿ - ೭-೮ ಎಸಳು
೪. ಕಡಲೇ ಹಿಟ್ಟು - ಒಂದು ಬೌಲ್
೫. ಒಗ್ಗರಣೆಗೆ- ಸಾಸಿವೆ ಮತ್ತು ಉದ್ದಿನಬೇಳೆ - ೧/೪ ಚಮಚ
೬. ಅರಿಶಿನ - ಚಿಟಿಕೆಯಷ್ಟು.
೭. ಮೆಣಸಿನ  ಪುಡಿ (ಖಾರದ ಪುಡಿ) - ನಿಮ್ಮ ಖಾರಕ್ಕೆ ತಕ್ಕಷ್ಟು [ಸಾಮಾನ್ಯವಾಗಿ ೨ ಚಮಚ.]
೮. ಹುಳಿಪುಡಿ - ೧ ಚಮಚ
೯. ಉಪ್ಪು - ರುಚಿಗೆ ತಕ್ಕಷ್ಟು
೧೦. ಒಗ್ಗರೆಣೆಗೆ ಎಣ್ಣೆ - ೫-೬ ಚಮಚ

ಮಾಡುವ ವಿಧಾನ :

೧. ಮೊದಲಿಗೆ ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು. ಹಾಗೆಯೇ ಈರುಳ್ಳಿಯನ್ನೂ ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು.

೨. ಒಗ್ಗರಣೆಗೆ ಎಣ್ಣೆ+ಸಾಸಿವೆ+ಉದ್ದಿನ ಬೇಳೆಯನ್ನು ಹಾಕಿ ಅದು ಚಟಪಟಗುಡುತ್ತಲೇ, ಬೆಳ್ಳುಳ್ಳಿ ಎಸಳುಗಳನ್ನು ಹಾಕಬೇಕು.

೩. ಬೆಳ್ಳುಳ್ಳಿ ಎಸಳುಗಳು ಕಂದು ಬಣ್ಣಕ್ಕೆ ತಿರುಗುತ್ತಲೇ ಹೆಚ್ಚಿಟ್ಟ ಈರುಳ್ಳಿ ಚೂರುಗಳನ್ನು ಹಾಕಿ ಹುರಿಯಬೇಕು.

೪. ಈರುಳ್ಳಿ ಚೂರುಗಳು ಕೆಂಪಾಗುತ್ತಿದ್ದಂತೆಯೇ ಚಿಟಿಕಿ ಅರಿಶಿನ ಹಾಕಿ ತಕ್ಷಣ ಮೆಂತೆ ಸೊಪ್ಪನ್ನು ಹಾಕಬೇಕು.

ನೆನಪಿಡಿ - ಅರಿಶಿನವನ್ನು ಈರುಳ್ಳಿ ಬೆಂದ ನಂತರವೇ ಹಾಕಿ, ಮೆಂತೆ ಸೊಪ್ಪನ್ನು ಹಾಕುವ ಮೊದಲಷ್ಟೇ ಹಾಕಬೇಕು. ಮೊದಲೇ ಅರಿಶಿನ ಹಾಕಿದರೆ ಅದು ಸೀದು ಹೋಗುವ ಸಂಭವವಿರುತ್ತದೆ.

೫. ಮೆಂತೆ ಸೊಪ್ಪು ಹಾಕಿದ ಮೇಲೆ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರದ ಹುಡಿಗಳನ್ನು ಹಾಕಿ ಕಲಸಿ ಒಗ್ಗರಣೆಯ ಎಣ್ಣೆಯಲ್ಲೇ ೩ ನಿಮಿಷ ಬೇಯಲು ಬಿಡಬೇಕು.

೬. ಮಿಶ್ರಣ ತುಸು ಬೆಂದ ಮೇಲೆ ಕಡಲೇ ಹಿಟ್ಟನ್ನು ಮೇಲಿನಿಂದ ಉದುರಿಸುತ್ತಾ ಹೋಗಬೇಕು. ಕಡಲೇ ಹಿಟ್ಟು ಮೆಂತೆಸೊಪ್ಪಿನ ಮಿಶ್ರಣವನ್ನು ಸಂಪೂರ್ಣ ಕವರ್ ಆಗುವಂತೇ ಹಾಕಬೇಕು. ಕಲಸಬಾರದು.

೭. ಕಡಲೇ ಹಿಟ್ಟು ಮೆಂತೆಸೊಪ್ಪನ್ನು ಸಂಪೂರ್ಣ ಆವರಿಸಿಕೊಂಡ ಮೇಲೆ ಮುಚ್ಚಿಟ್ಟು ೫ ನಿಮಿಷ ಹಾಗೇ ಬೇಯಿಸಬೇಕು (ಕಲಸಬಾರದು... ಆಗಾಗ ಮುಚ್ಚಳ ತೆಗೆದು ಉಗಿ ಕಡಿಮೆ ಮಾಡಬಾರದು). ಸೊಪ್ಪಿನೊಳಗಿರುವ ನೀರಿನಲ್ಲೇ ಕಡಲೇಹಿಟ್ಟು ಸ್ವಲ್ಪ ಬೇಯುವುದು.

೮. ತದನಂತರ ಮುಚ್ಚಳ ತೆಗೆದು ಚೆನ್ನಾಗಿ ಕಲಸುತ್ತಾ, ತೊಳಸುತ್ತಾ ಕಡಲೇಹಿಟ್ಟು ಸರಿಯಾಗಿ ಬೇಯುವವರೆಗೆ ೫ - ೬ ನಿಮಿಷ ಬೇಯಿಸಿ ಗ್ಯಾಸ್ ನಂದಿಸಿಬಿಡಿ.

ಕಡಲೇ ಹಿಟ್ಟು ಚೆನ್ನಾಗಿ ಬೆಂದರೆ ಪಲ್ಯ ತಿನ್ನಲು ತಯಾರೆಂದು ಲೆಕ್ಕ. ಅರೆಬೆಂದರೆ ಹೊಟ್ಟೆಗೆ ಹಾಳು. ಹಾಗಾಗಿ ಮುಚ್ಚಿಟ್ಟು ತುಸು ಹೊತ್ತು ಬೇಯಿಸಿದ ನಂತರ, ತಳ ಹಿಡಿಯದಂತೇ ಆಗಾಗ ತೊಳೆಸುತ್ತಾ ಬೇಯಿಸುವುದು ಅತಿ ಅವಶ್ಯಕ. 

ಒಮ್ಮೆ ತಿಂದರೆ ಮಗದೊಮ್ಮೆ ಬಯಸುವಷ್ಟು ರುಚಿಕರ ಈ ಪಲ್ಯ. ಗಮನವಿಟ್ಟು ಮಾಡಿದರೆ ೧೫ ನಿಮಿಷದೊಳಗೆ ಪಲ್ಯ ರೆಡಿ (ಹೆಚ್ಚಿಕೊಳ್ಳುವ ಸಮಯ ಬಿಟ್ಟು :)).

-ತೇಜಸ್ವಿನಿ ಹೆಗಡೆ.