Wednesday, August 14, 2013

ಜಿಟಿ ಜಿಟಿ ಮಳೆಗೆ ಹಸಿ ಬಿಸಿ ಈರುಳ್ಳಿ ಹಾಗೂ ಸಾಂಬ್ರಾಣಿ ಸೊಪ್ಪಿನ ತಂಬುಳಿಗಳು....

ಇನ್ನೇನು ಮಳೆ ಧೊಪ್ಪನೆ ಬೀಳೋ ತರಹ ಕಪ್ಪುಗಟ್ಟಿದೆ....  ಹೊರ ಬೀಸುವ ಮಳೆಯ ಚಳಿಗಾಳಿಯ ಜೊತೆ ಒಳಗೆ ಸುಟಿ ಸುಟಿ ಈರುಳ್ಳಿ ತಂಬುಳಿ ಇದ್ದುಬಿಟ್ಟರೆ....... ಸ್ವರ್ಗಕ್ಕೆ ಎರಡೇಗೇಣು ನೋಡಿ :)

ಮಧ್ಯಮಗಾತ್ರದ ಒಂದು ಪುಟ್ಟ ಈರುಳ್ಳಿ+ ಅರ್ಧ ಚಮಚ ಜೀರಿಗೆಯನ್ನು ೩=೪ ಚಮಚ ಕಾಯಿತುರಿಯೊಂದಿಗೆ ಹಸೀ ಬೀಸಿಕೊಳ್ಳಿ. ಇದಕ್ಕೆ ೨-೩ ಸೌಟು (ಬೇಕಿದ್ದರೆ ಎರಡು ಸೌಟು ಜಾಸ್ತಿ...:)) ಮಜ್ಜಿಗೆಯನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಬೆರಸಿ. ದಪ್ಪಗಾಗಬೇಕೆಂದರೆ ಕಾಯಿತುರಿಯನ್ನೋ ಇಲ್ಲಾ ಮಜ್ಜಿಗೆಯನ್ನೋ ಜಾಸ್ತಿ ಹಾಕಬಹುದು. ತೆಳ್ಳಗೆ ಬೇಕೆನ್ನುವವರು ಸ್ವಲ್ಪ ನೀರನ್ನು ಬೆರೆಸಬಹುದು.

ತದನಂತರ ೧/೪ ಚಮಚ್ಚ ಸಾಸಿವೆ+ಒಂದು ಕಡ್ಡಿಮೆಣಸಿನ ಚೂರನ್ನು ಹಾಕಿ ತುಪ್ಪದಲ್ಲಿಯೋ ಇಲ್ಲಾ ಎಣ್ಣೆಯಲ್ಲಿಯೋ (೧/೨ ಚಮಚವೂ ಬೇಡ.. ಸಾಸಿವೆ ಚಟಗುಡುವಷ್ಟು ಹಾಕಿದರೆ ಸಾಕು..) ಒಗ್ಗರಿಸಿದರೆ ೫ ನಿಮಿಷದೊಳಗೆ ರುಚಿ ರುಚಿ, ಆರೋಗ್ಯಕರ ಈರುಳ್ಳಿ ತಂಬ್ಳಿ ರೆಡಿ :)

ಇದು ಶೀತ, ಕಫ, ಕೆಮ್ಮು, ಸ್ವಾದ ಕೆಟ್ಟಿದ್ದರೆ - ಎಲ್ಲವುದಕ್ಕೂ ರಾಮಬಾಣ.

ಇನ್ನು ತುಂಬಾ ಗಂಟಲು ಕೆರೆತ ಇದ್ದವರು, ಮಜ್ಜಿಗೆ ತಂಪು ಎಂದಾದಲ್ಲಿ ಹೀಗೆ ಮಾಡಿ: - 

ಈರುಳ್ಳಿ+ಜೀರಿಗೆ+ಕಾಯಿತುರಿ ಬೀಸಿದ ನಂತರ ತುಸುವೇ ನೀರನ್ನು ಹಾಕಿ ಒಲೆಯಲ್ಲಿಟ್ಟು ಒಂದು ಗುಳ್ಳೆಬರುವವರೆಗೆ ಬಿಸಿಮಾಡಿ (ನೆನಪಿಡಿ.. ಕುದಿಸಬೇಡಿ!). ಗ್ಯಾಸ್ ನಂದಿಸಿ ಮಜ್ಜಿಗೆ ಬೆರೆಸಿ, ಒಗ್ಗರಿಸಿದರೆ ಗಂಟಲು ಕೆರೆತ, ನೆಗಡಿ ಸಾಕಷ್ಟು ಶಮನವಾಗುವುದು.

$$$$$$$$$$$$$$$$$

ಸಾಂಬ್ರಾಣಿ ಸೊಪ್ಪಿನ ತಂಬುಳಿಯೂ ಶೀತ, ಕೆಮ್ಮಿಗೆ ತುಂಬಾ ಪರಿಣಾಮಕಾರಿ. ಅದರಲ್ಲೂ ಮಕ್ಕಳಿಗೆ ಶೀತವಿದ್ದಾಗ ಇದನ್ನು ಉಣಿಸುವುದು ಉತ್ತಮ.

೫-೬ ಸಾಂಬ್ರಾಣಿ ಸೊಪ್ಪುಗಳನ್ನು ಚೂರುಮಾಡಿಟ್ಟುಕೊಳ್ಳಬೇಕು. ಈ ಚೂರುಗಳನ್ನು ೨ ಚಮಚ ಬಿಳೇ ಎಳ್ಳು +೧/೨ ಚಮಚ ಜೀರಿಗೆ + ಚಿಟಿಕೆ ಇಂಗು - ಇವಿಷ್ಟನ್ನು ೧ ಚಿಕ್ಕ ಚಮಚ ತುಪ್ಪದಲ್ಲಿ ಹುರಿದು, ೩-೪ ಚಮಚ ಕಾಯಿತುರಿಯೊಂದಿಗೆ ಬೀಸಿ, ಮೇಲೆ ಹೇಳಿರುವಂತೇ ಬಿಸಿಮಾಡಿ, ಮಜ್ಜಿಗೆ ಬೆರೆಸಿದರೆ ಶೀತಕ್ಕೆ ಚಳಿಹಿಡಿಯುವುದು :)

----------

(ವಿ.ಸೂ... ಮೊಸರನ್ನು ಇಷ್ಟಪಡುವವರು..  ಮಜ್ಜಿಗೆಯ ಬದಲು ಮೊಸರನ್ನೂ ಉಪಯೋಗಿಸಬಹುದು.... ೨-೩ ಸೌಟು ಮೊಸರನ್ನೇ ಮಿಕ್ಸಿಯಲ್ಲಿ ಹಾಕಿ ಒಮ್ಮೆ ತಿರುಗಿಸಿದರೆ ಅದು ತೆಳ್ಳಗಾಗುತ್ತದೆ.. ಅದಕ್ಕೆ ನೀರು ಸ್ವಲ್ಪ ಸೇರಿಸಿ ಬೀಸಿದ ಮಿಶ್ರಣಕ್ಕೆ ಹಾಕಿ ಹದಮಾಡಬಹುದು.)

-ತೇಜಸ್ವಿನಿ

5 comments:

  1. ಸಾಂಬ್ರಾಣಿ ಸೊಪ್ಪು ಅಂದ್ರೆ ದೊಡ್ಡಿ ಪತ್ರೆ ಸೊಪ್ಪಾ ?
    ಈರುಳ್ಳಿ ತಂಬ್ಳಿ ಎಂದೂ ಮಾಡಿಲ್ಲ ..ಮಾಡ್ತೇನೆ

    ReplyDelete
  2. ಸ್ವರ್ಣ,

    ನೀವು ಗೂಗಲ್‌ಗೆ ಹೋಗಿ "Sambar Soppu" ಅಂತ ಕೊಟ್ರೂ ಅದ್ರ ಚಿತ್ರಗಳು ಬರೊತ್ವೆ... ನೋಡಿ...:) ಇದಕ್ಕೆ ಬೇರೆನು ಹೇಳ್ತಾರೆ ಎಂದು ಗೊತ್ತಿಲ್ಲಾ.. ನಾವೆಲ್ಲಾ ಸಾಂಬಾರ್ ಸೊಪ್ಪು ಅಂತೀವಿ ಆಡು ಭಾಷೆಯಲ್ಲಿ.

    ಧನ್ಯವಾದಗಳು.

    ReplyDelete
  3. ಸ್ವರ್ಣ ಅವ್ರೆ,
    ಸಾಂಬಾರು ಸೊಪ್ಪು ಅಂದ್ರೆ ದೊಡ್ಡ ಪತ್ರೆ ಸೊಪ್ಪು... ಇದರ ತಂಬುಳಿ ತುಂಬಾನೇ ಚೆನ್ನಾಗಿರುತ್ತೆ.

    ReplyDelete
  4. ಸ್ವರ್ಣ ಅವ್ರೆ,
    ಸಾಂಬಾರು ಸೊಪ್ಪು ಅಂದ್ರೆ ದೊಡ್ಡ ಪತ್ರೆ ಸೊಪ್ಪು ಅಥವ ಸಾಂಬ್ರಾಣಿ ಸೊಪ್ಪು. ... ಇದರ ತಂಬುಳಿ ತುಂಬಾನೇ ಚೆನ್ನಾಗಿರುತ್ತೆ.
    ವೀಣಾ ಸುರೇಶ್

    ReplyDelete
  5. ಇವತ್ತು ನಾನು ಇದನ್ನ ಪ್ರಯತ್ನಿಸಿದೆ.ಬಹಳ ಚೆನ್ನಾಗಿದೆ ಎಂದು,ಎಲ್ಲರು ಹೇಳಿದರು.ಧನ್ಯವಾದ :)

    ReplyDelete