ನಮ್ಮಲ್ಲಿ ಖಾರದ ಕಡ್ಡಿಗೆ "ಕರೆ" ಎಂದು ಕರೆಯುತ್ತೇವೆ. ಖಾರದ ಕಡ್ಡಿಯ ತಯಾರಿಕೆಯಲ್ಲಿ ಹಲವಾರು ವಿಧಾನಗಳಿವೆ. ಸವತೆ ಕಾಯಿಯನ್ನು ಹಾಕಿಯೋ ಇಲ್ಲಾ ಹಾಗೇ ಸಾದ ಅಕ್ಕಿ ಹಿಟ್ಟಿನ್ನು ಬಳಸಿಯೋ ಕರೆಯನ್ನು ತಯಾರಿಸುವುದಿದೆ. ಆದರೆ ಸವತೆಕಾಯಿಯನ್ನು ಬಳಸಿದರೆ ಅದು ಎಣ್ಣೆಯನ್ನು ಜಾಸ್ತಿ ಹೀರುವುದರಿಂದ ಜಿಡ್ಡಿನಾಂಶ ತುಸು ಜಾಸ್ತಿಯಾಗಿರುತ್ತದೆ. ಹಾಗೂ ಈ ಖಾರದ ಕಡ್ಡಿ ಹೆಚ್ಚು ಕಾಲ ತಾಜಾ ಆಗಿ ಇರುವುದೂ ಕಡಿಮೆ.
ಇದೀಗ ತಿಂಗಳವರೆ ಸೀಸನ್. ಹಾಗಾಗಿ ನಾನು ತಿಂಗಳವರೆ ಹಾಗೂ ಅಕ್ಕಿ ಹಿಟ್ಟಿನ ಖಾರದ ಕಡ್ಡಿಯ ತಯಾರಿಯನ್ನು ಹೇಳುತ್ತಿದ್ದೇನೆ. ಈ ಕರೆ ತೆಂಗಿನೆಣ್ಣೆಯನ್ನು ಹೀರುವುದು ತೀರಾ ಕಡಿಮೆ. ಹಾಗಾಗಿ ಎಣ್ಣೆ ಪಸೆ ಹೆಚ್ಚಾಗದು. ಅಲ್ಲದೇ ಗಾಳಿಯಾಡದ ಡಬ್ಬದಲ್ಲಿಟ್ಟರೆ ಒಂದು ತಿಂಗಳಾದರೂ ತಾಜಾ ಆಗಿರುವುದು. ಅಲ್ಲದೇ ತಿನ್ನಲೂ ಬಲು ರುಚಿಕರ.
ತಿಂಗಳವರೆ ಹಾಗೂ ಅಕ್ಕಿ ಹಿಟ್ಟಿನ ಕರೆಯ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು ಇಂತಿವೆ :
* ತಿಂಗಳವರೆ - ೧/೪ ಕೆ.ಜಿ.
* ಅಕ್ಕಿ ಹಿಟ್ಟು - ೧ ಕೆ.ಜಿ.
* ಕಡಲೇ ಹಿಟ್ಟು - ೧೦೦ ಗ್ರಾಂ
* ಖಾರದ ಪುಡಿ - ಮೂರು ಚಮಚ (ಖಾರ ತುಸು ಜಾಸ್ತಿ ಬೇಕಿದ್ದವರು ಹೆಚ್ಚಿನ ಪ್ರಮಾಣದಲ್ಲೂ ಹಾಕಬಹುದು)
* ಇಂಗು - ಸುಮಾರು ೫ ಗ್ರಾಂನಷ್ಟು
* ಓಂ ಕಾಳು - ೧ ಚಮಚ
* ಉಪ್ಪು - ರುಚಿಗೆ ತಕ್ಕಷ್ಟು
* ಕರಿಯಲು ತೆಂಗಿನೆಣ್ಣೆ (ಬೇಕಿದ್ದರೆ ಬೇರೇ ಎಣ್ಣೆಯನ್ನೂ ಬಳಸಬಹುದು) - ೧/೨ ಲೀಟರ್(ಸುಮಾರು).
ಮಾಡುವ ವಿಧಾನ :
* ತಿಂಗಳವರೆಯನ್ನು ರಾತ್ರಿಯಿಡೀ ನೆನೆ ಹಾಕಿಟ್ಟು ಮರುದಿನ ಬೆಳಗ್ಗೆ ಕುಕ್ಕರಿನಲ್ಲಿಟ್ಟು ೫-೬ ವ್ಹಿಸಿಲ್ ತರಿಸಬೇಕು.
* ಅಕ್ಕಿ ಹಿಟ್ಟನ್ನು ಚೆನ್ನಾಗಿ ಪರಿಮಳ ಬರುವಷ್ಟು ಹುರಿದಿಟ್ಟುಕೊಳ್ಳಬೇಕು.
* ಬೇಯಿಸಿದ ತಿಂಗಳವರೆಯನ್ನು ಚೆನ್ನಾಗಿ ತಣಿಸಿದ ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
* ಬೀಸಿದ ತಿಂಗಳವರೆ ಹಾಗೂ ಅದರ ನೀರನ್ನು ಒಂದು ಬಾಣಲೆಗೆ ಇಲ್ಲಾ ಅಗಲವಾದ ಪಾತ್ರೆಯೊಳಗೆ ಹಾಕಿ, ಹುರಿದಿಟ್ಟಿದ್ದ ಅಕ್ಕಿ ಹಿಟ್ಟು, ಖಾರದ ಪುಡಿ, ಓಂಕಾಳು, ಕಡಲೇ ಹಿಟ್ಟು, ಇಂಗು ಎಲ್ಲವನ್ನೂ ಹಾಕಿ ನಾದಿ ಚೆನ್ನಾಗಿ ಕಲಕಬೇಕು. ಮಿಶ್ರಣವನ್ನು ಚಕ್ಕುಲಿ ಹಿಟ್ಟಿನ ಹದಕ್ಕೆ ತರಬೇಕು. ನಾದಲು ನೀರು ಕಡಿಮೆ ಎಂದೆಣಿಸಿದರೆ ತಣ್ಣೀರನ್ನು ಹಾಕಬಾರದು. ತುಸು ಬಿಸಿ ನೀರನ್ನು ಬೇಕಾದಷ್ಟೇ ಪ್ರಮಾಣದಲ್ಲಿ ಹಾಕಿ ಹದ ಮಾಡಬೇಕು.
* ನಂತರ ಬಾಣಲೆಯನ್ನಿ ಎಣ್ಣೆಯನ್ನು ಕಾಯಿಸಿಕೊಂಡು, ಚೆನ್ನಾಗಿ ಹದ ಮಾಡಿದ ಹಿಟ್ಟನ್ನು ಕರೆಯ(ಖಾರದ ಕಡ್ಡಿ) ಒತ್ತಿನಲ್ಲಿ ಒತ್ತಿ ಬಾಣಲೆಗೆ ಬಿಟ್ಟು ಗರಿಗರಿಯಾಗಿ ತೆಗೆದು ಗಾಳಿಯಾಡದ ಡಬ್ಬದಲ್ಲಿ ತುಂಬಿಡಬೇಕು.
ತಿಂಗಳವರೆ ಹಾಗೂ ಅಕ್ಕಿ ಹಿಟ್ಟಿನಿಂದ ತಯಾರಿಸುವ ಈ ಕರೆಯನ್ನು ಬಿಸಿ ಬಿಸಿ ಸಾರು ಹಾಗೂ ಸಾಂಬಾರಿನೊಟ್ಟಿಗೆ ತೆಗೆದುಕೊಂಡರೆ ಮತ್ತೂ ರುಚಿ. ಸಾಯಂಕಾಲದ ಕಾಫಿಯ ಜೊತೆಗೂ ಈ ಕುರು ಕುರು ತಿಂಡಿ ಉತ್ತಮ ಜೊತೆಯಾಗುವುದು.
[@ದಟ್ಸ್‌ಕನ್ನಡದಲ್ಲಿ ಪ್ರಕಟಿತ.]
Note :ತಿಂಗಳವರೆಯ ಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಬಹುದು.
http://www.google.co.in/imgres?imgurl=http://imagecache2.allposters.com/images/pic/STFPOD/176465~Still-Life-with-Various-Types-of-Beans-Posters.jpg&imgrefurl=http://www.allposters.com/-sp/Still-Life-with-Various-Types-of-Beans-Posters_i3290989_.htm&h=400&wԌ ?L
ಹುರುಳಿ ಕಾಯಿಯೇ ಬೇರೆ ತಿಂಗಳವರೆಯೇ ಬೇರೆ. ಇದೊಂದು ಬೀನ್ಸ್ ಜಾತಿಗೆ ಸೇರಿದ ಬೀಜ. ಸಾಮಾನ್ಯವಾಗಿ ಒಣಗಿದಾಗ ಕಂದು ಇಲ್ಲಾ ನಸು ಗುಲಾಬಿ ವರ್ಣದಲ್ಲಿರುತ್ತದೆ. ಅವರೆ ಕಾಳಿಗಿಂತಲೂ ದೊಡ್ಡದಿರುತ್ತದೆ. ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ "Pink Kidney Beans" ಅನ್ನುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ಕೆಳಗಿನ ಲಿಂಕ್‌ಗೆ ಭೇಟಿ ಕೊಡಿ. ಇದರಲ್ಲಿ ವಿವಿಧ ಜಾತಿಯ ಬೀನ್ಸ್ ಬೀಜಗಳ ಬಗ್ಗೆ ಮಾಹಿತಿಯಿದೆ.
http://www.101vegetarianrecipes.com/peas-beans-pulses-recipes/different-types-beans.php
-ತೇಜಸ್ವಿನಿ ಹೆಗಡೆ
eega avarekaayi tumba sigutte olle tindine tiLsiddeeri dhanyavadagaLu..
ReplyDeleteavare areyuvaaga swalp kottambari athaavaa pudina balasidare inneradu hosa ruchiyaaguttave. nammalli ivugala prayoga nadeyuttiruttade :-))
ReplyDelete