Thursday, September 22, 2011

ದಿಢೀರ್ ರವಾ ಮೊಸರು ಇಡ್ಲಿ


©: Tejaswini Hegde

ಸಿಹಿ ಇಡ್ಲಿ, ಚಪ್ಪೆ ಇಡ್ಲಿ, ಕೊಟ್ಟೆ ಇಡ್ಲಿ, ಮೂಡೆ (ದಕ್ಷಿಣ ಕನ್ನಡದ ಕಡೆಯ ವಿಶೇಷ ತಿನಿಸು), ಸವತೆ ಇಡ್ಲಿ, ಹಲಸಿನ ಹಣ್ಣಿನ ಇಡ್ಲಿ, ಉದ್ದು ರವಾ ಇಡ್ಲಿ, ಉದ್ದು ಅಕ್ಕಿತರಿ ಇಡ್ಲಿ - ಹೀಗೇ ನಾನಾ ತರಹದ ಇಡ್ಲಿಗಳಿವೆ. ಬಹುತೇಕೆ ಹೆಚ್ಚಿನ ಇಡ್ಲಿಗಳಲ್ಲಿ ಉದ್ದು ಪ್ರಧಾನ ವಸ್ತುವಾಗಿರುತ್ತದೆ. ಉದ್ದನ್ನು ಹಿಂದಿನ ದಿನವೇ ೨ ತಾಸಾದರೂ ನೆನೆಹಾಕಿಟ್ಟು, ರುಬ್ಬಿ, ಬುರುಗು ತರಿಸಿ ಅದಕ್ಕೆ ಅಕ್ಕಿತರಿಯನ್ನೋ ಇಲ್ಲಾ ರವೆಯನ್ನು ಹುರಿದೋ ಸೇರಿಸಿ ಮರುದಿವಸ ಹೊಯ್ಯುವುದು ಇಡ್ಲಿ ತಯಾರಿಕೆಯ ಸಾಂಪ್ರದಾಯಿಕ  ವಿಧಾನ ಎನ್ನಬಹುದು. 

ಆದರೆ ಒಮ್ಮೊಮ್ಮೆ ಉಪವಾಸ ವ್ರತ ದಿವಸಗಳಲ್ಲಿ ಉದ್ದಿನ ಜೊತೆ ಅಕ್ಕಿತರಿ ಬಳಸುವಂತಿರುವುದಿಲ್ಲ... ಮತ್ತೆ ಯಾವಾಗಲೋ ಉದ್ದನ್ನು ನೆನೆಹಾಕಲೇ ಮರೆತು ಬಿಡುತ್ತೇವೆ. ಇನ್ನು ಕೆಲವರಿಗೆ ರವೆ+ಉದ್ದಿನ ಇಡ್ಲಿ ಅಷ್ಟು ಸೇರಿಬರದು. (ಉದಾ:ನಾನೇ:)). ಹೀಗಿರುವಾಗ ಬರೀ ಅಕ್ಕಿತರಿಯನ್ನೋ ಇಲ್ಲಾ ಬರೀ ಉದ್ದನ್ನೋ ಹಾಕಿ ಮಾತ್ರ ಇಡ್ಲಿತಯಾರಿಸಲಾಗದು. ಹಲವರಿಗೆ ಉದ್ದು ಆರೋಗ್ಯಕ್ಕೆ ಸರಿ ಬರದು. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬೆಳ ಬೆಳಗ್ಗೆ ಉದ್ದಿನ ತಿಂಡಿಯನ್ನು ಸೇವಿಸಲು ಇಷ್ಟಪಡರು. ಹೀಗಿರುವಾಗ ರವಾ ಮೊಸರು ಇಡ್ಲಿ ಬಹು ಉಪಯೋಗಿ.

ಬೆಳಿಗ್ಗೆ ಎದ್ದ ಕೂಡಲೇ ಏನು ತಿಂಡಿ ಮಾಡಲಿ ಎಂದು ಚಿಂತಿಸುವವರಿಗೆ, ಮನೆಯಲ್ಲಿ ನೆಂಟರಿಷ್ಟರು ತುಂಬಿದ್ದಾಗ, ಉದ್ದು ನೆನೆಹಾಕಲು ಮರೆತು ಪೇಚಾಡುವ ಪ್ರಸಂಗ ಎದುರಾದಾಗ ಈ ದಿಢೀರ್ ಮೊಸರು ರವಾ ಇಡ್ಲಿ ಅತ್ಯುತ್ತಮ ತಿಂಡಿ. ತಯಾರಿಸುವುದೂ ಸುಲಭ, ರುಚಿಕರ ಹಾಗೂ ಆರೋಗ್ಯಕರ. ಆದರೆ ಇದನ್ನು ತಯಾರಿಸಲು ಪ್ರಮುಖವಾಗಿ ಸ್ವಲ್ಪ ಹೆಚ್ಚು ಮೊಸರು ಬೇಕಾಗುತ್ತದೆ. ಹೆಪ್ಪು ಹಾಕಿಡಲು ಮರೆತರೂ ಅಂಗಡಿಗಳಲ್ಲಿ ಮೊಸರು ಸಿಗುವುದರಿಂದ ತಯಾರಿಸಲು ಪರದಾಡಬೇಕೆಂದಿಲ್ಲ.

ಬೇಕಾಗುವ ಸಾಮಗ್ರಿಗಳು (೨೭-೩೦ ಇಡ್ಲಿಗಳಿಗೆ)

ಕಡಲೇ ಬೇಳೆ - ೨ ಚಮಚ
ಹಸಿಮೆಣಸು - ೧-೨
ಕುತ್ತೊಂಬರಿ ಸೊಪ್ಪು - ಒಂದು ಮುಷ್ಟಿ
ಸಾಸಿವೆ - ೧/೪ ಚಮಚ
ಕರಿಬೇವು - ೨-೩ ಎಸಳು (೧೦-೧೫ ಎಲೆ)
ತುಪ್ಪ ಅಥವಾ ತೆಂಗಿನೆಣ್ಣೆ - ೨-೩ ಚಮಚ 
ಕ್ಯಾರಟ್ - ೧ (ಚಿಕ್ಕ ಗಾತ್ರದ್ದದರೆ ೨)
ರವೆ - ೩ ಲೋಟ 
ಮೊಸರು - ೩ ಲೋಟ
ಬೇಕಿದ್ದಲ್ಲಿ ಚಿಟಿಕೆ ತಿನ್ನುವ ಸೋಡ (ಬೇಕಿಂಗ್ ಸೋಡ)

ಮಾಡುವ ವಿಧಾನ

*ಮೊದಲು ಕೊತ್ತುಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಂಡು, ಕ್ಯಾರೆಟ್ ಅನ್ನು ತುರಿದಿಟ್ಟುಕೊಳ್ಳಬೇಕು.

* ತುಪ್ಪ ಅಥವಾ ಅಡುಗೆ ಎಣ್ಣೆಯನ್ನು ಹಾಕಿ ಒಗ್ಗರಣೆಗೆ ಇಡಬೇಕು. ಸಾಸಿವೆ ಚಟಗುಟ್ಟಿದ ನಂತರ ಕಡಲೇಬೇಳೆ ಹಾಕಿ ಅದು ಕೆಂಪಾಗುವಷ್ಟು ಹುರಿಯಬೇಕು. ಅದಕ್ಕೆ ಹಸಿಮೆಣಸು, ಕರಿಬೇವು ಎಲೆಗಳನ್ನು ಹಾಕಿ ಅವು ಗರಿಯಾದ ನಂತರ ರವೆಯನ್ನು ಹಾಕಬೇಕು. ಉಪ್ಪಿಟ್ಟಿಗೆ ಹುರಿದಷ್ಟು ಹುರಿಯಬೇಕೆಂದಿಲ್ಲ. ರವೆ ಬಿಡಿ ಬಿಡಿ ಆಗುವಷ್ಟು, ತುಸು ಬಿಸಿಯಾಗಿ ಒಗ್ಗರಣೆಯೊಂದಿಗೆ ಬೆರೆಯುವಷ್ಟು ಅಂದರೆ ಸುಮಾರು ೨-೩ ನಿಮಿಷವಷ್ಟೇ ಹುರಿದರೆ ಸಾಕು. 
(ಸೂಚನೆ : ಹುರಿಯುವಾಗ ಮೇಲಿನ ಪದಾರ್ಥಗಳೊಡನೆ ಬೇಕಿದ್ದಲ್ಲಿ ಗೋಡಂಬಿ, ದ್ರಾಕ್ಷಿಗಳನ್ನೂ ಹಾಕಿ ಹುರಿಯಬಹುದು.)

*ಹುರಿದ ಮಿಶ್ರಣ ತಣಿದ ಮೇಲೆ ಅದಕ್ಕೆ ಮೊಸರನ್ನು ಹಾಕಿ ಗಟ್ಟಿಯಾಗಿ ಇಡ್ಲಿ ಹಿಟ್ಟಿನ ಹದಕ್ಕೇ ಕಲಸಬೇಕು. ನೀರು ಹಾಕದಿದ್ದರೆ ಉತ್ತಮ. ಒಂದೊಮ್ಮೆ ಮೊಸರು ಸ್ವಲ್ಪ ಕಡಿಮೆ ಬಿದ್ದಲ್ಲಿ ಅರ್ಧ ಲೋಟ ನೀರು ಹಾಕಬಹುದು. ಹಿಟ್ಟು ಮಾತ್ರ ತೆಳ್ಳಗಾಗಬಾರದು, ಇಡ್ಲಿ ಹಿಟ್ಟಿನ ಹದಕ್ಕೇ ಬರಬೇಕು.

* ಈ ಮಿಶ್ರಣಕ್ಕೆ ತುರಿದಿಟ್ಟ ಕ್ಯಾರೆಟ್ ಹಾಗೂ ಕುತ್ತೊಂಬರಿ ಸೊಪ್ಪನ್ನು ಹಾಕಿ, ಉಪ್ಪು ಸೇರಿಸಿ, ಬುರುಗು ಬರಲು ಬೇಕಿದ್ದಲ್ಲಿ ಚಿಟಿಕೆ ಬೇಕಿಂಗ್ ಸೋಡ ಹಾಕಿ ಕದಡಿ ೨ ನಿಮಿಷ ಹಾಗೇ ಬಿಡಬೇಕು. (ನೀವು ತಿನ್ನುವ ಸೋಡ ಬಳಸಿದರೆ, ಹಿಟ್ಟು ತಕ್ಷಣ ಬುರುಗು ಬಿಡತೊಡಗುತ್ತದೆ.) 

* ಇಡ್ಲಿ ಹಿಟ್ಟನ್ನು ಇಡ್ಲಿಪಾತ್ರೆಗೆ ಹೊಯ್ದು ಬೇಯಿಸಿದರೆ ಬಿಸಿ ಬಿಸಿ ಮೊಸರು ರವಾ ಇಡ್ಲಿ ತಿನ್ನಲು ತಯಾರು. ಸಾಂಬಾರ್ ಅಥವಾ ಸಾರಿಗಿಂತಲೂ ಕಾಯಿಚಟ್ನಿಯೊಂದಿಗೆ ಇದನ್ನು ಸೇವಿಸಲು ಬಲು ರುಚಿಕರ. 

ಕ್ಯಾರಟ್, ಕರಿಬೇವು, ಕೊತ್ತುಂಬರಿ ಸೊಪ್ಪು ಹಾಕುವುದರಿಂದ ಆರೋಗ್ಯಕ್ಕೂ ಉತ್ತಮವಾದ ತಿನಿಸು... ತಯಾರಿಸಲು ಬಲು ಸುಲಭ.

-ತೇಜಸ್ವಿನಿ ಹೆಗಡೆ.

7 comments:

  1. thank you.. I always used to get MTR mix to make rave idli.. I didnt know the procedure to prepare this mixture earlier.. Idli in the picture looks great :)

    ReplyDelete
  2. @Pala,
    Yes... but it's understood! :) ಬೇಕಾಗುವ ಸಾಮಗ್ರಿಗಳಲ್ಲಿ ಸೇರಿಸಿರದಿದ್ದರೂ, ಮಾಡುವ ವಿಧಾನದಲ್ಲಿ ಉಪ್ಪು ಹಾಕಿದ್ದೇನೆ :D. ಉಪ್ಪು ಜಾಸ್ತಿ ಹಾಕಬಾರದೆನ್ನುವುದು ಅಡುಗೆಮನೆಯ ಪ್ರಥಮ ಸೂತ್ರ ಅಲ್ಲವೇ? :)

    ಮೆಚ್ಚುಗೆಗೆ ಧನ್ಯವಾದಗಳು. ತಯಾರಿಸಿ, ತಿಂದು ಹೇಗಿದೆಯೆಂದು ಹೇಳಿ. ಮೇಲಿನ ಚಿತ್ರದಲ್ಲಿರುವ ಇಡ್ಲಿಯನ್ನು ತಯಾರಿಸಿದ್ದು ಸ್ವಯಂ, ಸಾಕ್ಷಾತ್ ನಾನೇ! :)

    ReplyDelete
  3. I have tried it for morning break-fast.. taste was good.. but was little hard.. I didnt add baking soda.. dhanyavada :)

    ReplyDelete
  4. Pala,

    ಇಡ್ಲಿ ಮೃದು ಆಗ್ಬೇಕು ಅಂದ್ರೆ ಸ್ವಲ್ಪ ಹುಳಿ ಬರಿಸಬೇಕು. ಒಂದು ಸೌಟು ಹುಳಿ ಮೊಸರನ್ನು ಹಾಕಿ ಕದಡಿ ೧೦ ನಿಮಿಷ ಇಟ್ಟು ಹೊಯ್ದರೂ ಚೆನ್ನಾಗಾಗುತ್ತದೆ. ಬೇಕಿಂಗ್ ಸೋಡ ಬಳಸಬೇಕೆಂದಿಲ್ಲ ಆಗ. :)

    ಮೆಚ್ಚಿದ್ದಕ್ಕೆ ಧನ್ಯವಾದ.

    ReplyDelete