Friday, August 31, 2018

ನುಗ್ಗೆ ಸೊಪ್ಪಿನ ತಂಬುಳಿ



ನಮ್ಮ ಸುತ್ತ ಮುತ್ತಲು ಬೆಳೆಯುವ, ನಾವು ಮನೆಯಲ್ಲೇ ಬೆಳೆಸಬಹುದಾದ ಅನೇಕ ಸೊಪ್ಪುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿರುತ್ತವೆ ಮತ್ತು ಅವುಗಳ ಪದಾರ್ಥಗಳನ್ನೂ ತಿನ್ನಲೂ ರುಚಿಕರವಾಗಿರುವುದು.

ನುಗ್ಗೆ ಸೊಪ್ಪು ಎಲ್ಲೆಡೆ ಸರ್ವೇಸಾಮಾನ್ಯವಾಗಿ ಸಿಗುವಂಥ ಬಹೋಪಯೋಗಿ ಸೊಪ್ಪು. ಹಲವು ವಿಟಮಿನ್ನುಗಳ ಆಗರವಿದು. ನರ ದೌರ್ಬಲ್ಯಕ್ಕೆ, ರಕ್ತ ಹೀನತೆಗೆ, ರಕ್ತ ಶುದ್ಧಿಗೆ, ಹಾಲೂಡಿಸುವ ತಾಯಂದಿರಿಗೆ, ಮಲಬದ್ಧತೆಗೆ, ಅಧಿಕ ರಕ್ತದೊತ್ತಡದ ನಿವಾರಣೆಗೆ ಹೀಗೆ ಹಲವು ರೀತಿಯ ದೈಹಿಕ ಸಮಸ್ಯೆಗಳಿಗೆ ರಾಮಬಾಣ ಈ ಸೊಪ್ಪು. ಇದರ ತಂಬುಳಿ, ಚಟ್ನೆ, ಸಾಂಬಾರು, ಪಲ್ಯ, ಬಜೆ ಎಲ್ಲವೂ ತಿನ್ನಲು ಚೆನ್ನಾಗಿರುತ್ತವೆ. ಪ್ರಸ್ತುತ ನಾನು ಇದರ ತಂಬುಳಿ ತಯಾರಿಸುವ ವಿಧಾನವನ್ನು ವಿವರಿಸುತ್ತಿದ್ದೇನೆ. ಸಾಂಬಾರಿನೊಳಗಿರುವ ಸೊಪ್ಪು ಹೆಚ್ಚು ಬೆಂದುಬಿಟ್ಟಿರುತ್ತದೆ ಮತ್ತು ನಾವು ಹೆಚ್ಚೆಂದರೆ ಒಂದೆರಡು ಸೌಟು ಸೇವಿಸಬಹುದೇನೋ. ಆದರೆ ತಂಬುಳಿಯಲ್ಲಿ ಇದರ ಅಂಶಯ ಬಹಳ ಅಧಿಕವಾಗಿರುತ್ತದೆ. ಅನ್ನದ ಜೊತೆ ಕಲಸಿ ತಿಂದರೂ ರುಚಿ, ಹಾಗೇ ಕುಡಿದರೂ ಚೆನ್ನಾಗಿರುತ್ತದೆ. ತಯಾರಿಸುವ ವಿಧಾನವೂ ಬಹಳ ಸುಲಭ ಹಾಗೂ ಸರಳ.

ಬೇಕಾಗುವ ಸಾಮಗ್ರಿಗಳು (ಮೂರ್ನಾಲ್ಕು ಜನರ ಅಳತೆಯಲ್ಲಿ)
೧. ನುಗ್ಗೆ ಸೊಪ್ಪು (ನಾಲ್ಕು ದೊಡ್ಡ ಮುಷ್ಟಿಯಷ್ಟು)
೨. ಬಿಳೇ ಎಳ್ಳು – ೧ ಚಮಚ
೩. ಜೀರಿಗೆ – ೧ ಚಮಚ
೪. ಕಾಳು ಮೆಣಸು – ೪-೫ ಕಾಳುಗಳು
೫. ಇಂಗು – ಚಿಟಿಕೆಯಷ್ಟು
೬. ತೆಂಗಿನೆಣ್ಣೆ (ಅಥವಾ ತುಪ್ಪವನ್ನೂ ಬಳಸಬಹುದು) – ೧-೨ ಚಮಚ (ಹುರಿಯಲು ಬೇಕಾಗುವಷ್ಟು ಮಾತ್ರ)
೭. ಕಡೆದ ಮಜ್ಜಿಗೆ – ೨ ದೊಡ್ಡ ಲೋಟ
೮. ತೆಂಗಿನ ತುರಿ – ಒಂದು ಮುಷ್ಟಿಯಷ್ಟು (ಬೀಸಲು ಬೇಕಾಗುವಷ್ಟು ಮಾತ್ರ)
೯. ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
*ಕಾದ ಎಣ್ಣೆಗೆ ಬಿಳೇ ಎಳ್ಳು, ಜೀರಿಗೆ, ಇಂಗು ಮತ್ತು ಕಾಳುಮೆಣಸುಗಳನ್ನು ಹಾಕಿ ಒಗ್ಗರಿಸಿಕೊಳ್ಳಿ.
*ಅವುಗಳು ಹುರಿದು ಚಟಗುಡುವಾಗ, ಮೊದಲೇ ತೊಳೆದಿಟ್ಟುಕೊಂಡಿರುವ ಸೊಪ್ಪನ್ನು ಹಿಂಡಿ ಈ ಒಗ್ಗರಣೆಗೆ ಹಾಕಿ ಚೆನ್ನಾಗಿ ಹುರಿಯಿರಿ (ಅದು ಬಾಡುವಷ್ಟು ಹೊತ್ತು).
*ಮಿಶ್ರಣ ಚೆನ್ನಾಗಿ ಹುರಿದು ಸೊಪ್ಪು ಬಾಡಿದ ನಂತರ, ತುಸು ತಣಿಯಲು ಬಿಟ್ಟು, ಕಾಯಿತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಿ.
*ನಿಮಗೆ ತಂಬುಳಿ ಕುಡಿಯಲು ಬೇಕಾಗುವಷ್ಟು ತೆಳ್ಳಗಿರಬೇಕೆಂದರೆ ಬೀಸಿದ ಮಿಶ್ರಣೆಗೆ ಮಜ್ಜಿಗೆಯ ಜೊತೆ ೧-೨ ಲೋಟ ನೀರನ್ನು ಸೇರಿಸಿಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕುಡಿಯಬಹುದು. ಇಲ್ಲಾ, ಬೀಸಿದ ಮಿಶ್ರಣಕ್ಕೆ ಮಜ್ಜಿಗೆ, ಒಂದು ಲೋಟ ನೀರು ಮತ್ತು ಉಪ್ಪು ಸೇರಿಸಿ ಹದಾ ಮಂದವಾಗಿಸಿಕೊಂಡು ಅನ್ನಕ್ಕೆ ಕಲಸಿಯೂ ತಿನ್ನಬಹುದು ಅಥವಾ ಹಾಗೇ ಕುಡಿಯಲೂಬಹುದು.
ಬಹಳ ರುಚಿಕರವಾಗಿರುವುದಂತೂ ಸತ್ಯ! ಮಾಡಿ ನೋಡಿ ಒಮ್ಮೆ.

~ತೇಜಸ್ವಿನಿ ಹೆಗಡೆ.

No comments:

Post a Comment