ಕೆಲವೊಮ್ಮೆ ಬೆಳಗಿನ ತಿಂಡಿಗೋ ಇಲ್ಲಾ ಸಾಯಂಕಲಕ್ಕೋ ಏನು ಮಾಡಬೇಕೆಂದೇ ತೋರುವುದಿಲ್ಲ. ಸಮಯದ ಅಭಾವ ಇದ್ದರಂತೂ ತುಂಬಾ ಗಡಿಬಿಡಿ ಆಗುವುದು ಸಹಜವೇ. ಏನೋ ಒಂದು ತಿಂಡಿ ಬೇಗನೆ ತಯಾರಿಸಬೇಕು ಎಂದೆನಿಸುತ್ತದೆ. ಜೊತೆಗೆ ಬಾಯಿಗೆ ರುಚಿಕರವಾಗಿಯೂ ಇದ್ದರೆ ಎಷ್ಟು ಚೆನ್ನಾ ಎಂದೂ ಎನಿಸುತ್ತದೆ. ಹಾಗಿದ್ದಲ್ಲಿ ಈ ದೋಸೆ ಒಂದು ಉತ್ತಮ ತಿಂಡಿ ಎನ್ನಬಹುದು. ಧಿಢೀರನೆ ಅತಿಥಿಗಳು ಬಂದಾಗಲೂ ಈ ದೋಸೆಯನ್ನು ಮಾಡಿ ಬಡಿಸಬಹುದು. ತುಂಬಾ ಸ್ವಾದಿಷ್ಟವಾಗಿರುತ್ತದೆ.
ರವೆಯನ್ನು ಇಡ್ಲಿ, ದೋಸೆ ಹಾಗೂ ಹಲ್ವಗಳ ತಯಾರಿಕೆಗಳಲ್ಲಿ ಮುಖ್ಯವಾಗಿ ಬಳಸುತ್ತಾರೆ. ಬಾಣಂತಿಯರಿಗೆ ರವೆ ಗಂಜಿಯನ್ನು ವಿಷೇಶವಾಗಿ ನೀಡುತ್ತಾರೆ. ರವೆ ಗಂಜಿ ತುಂಬಾ ಪೌಷ್ಠಿಕ. ಇದು ಎದೆಹಾಲು ಉತ್ಪತ್ತಿಗೆ ಹಾಗೂ ಹೆರಿಗೆಯ ನಂತರದ ಹೊಟ್ಟೆಯೊಳಗಿನ ಗಾಯ ಮಾಗುವುದಕ್ಕೂ(ಆಪೇರೇಷನ್ ಆಗಿದ್ದರೆ) ತುಂಬಾ ಸಹಕಾರಿಯಾಗಿದೆ. ರವೆಗಂಜಿಯನ್ನಲ್ಲದೇ ರವಾ ಶಿರವನ್ನೂ(ರವಾ ಕೇಸರಿ ಬಾತ್) ಮಾಡಿಕೊಡುತ್ತಾರೆ.
ಸ್ವಲ್ಪ ರವೆಗೆ ೨ ಚಮಚ ತುಪ್ಪವನ್ನು ಹಾಕಿ ಹುರಿದು ಅದಕ್ಕೆ ಬೇಕಿದ್ದರೆ ಸ್ವಲ್ಪ ಏಲಕ್ಕಿ ಪುಡಿ ಹಾಗೂ ರುಚಿಗೆ ಬೇಕಾದಷ್ಟು ಸಕ್ಕರೆಯನ್ನು ಸೇರಿಸಿ, ಒಂದು ಲೋಟ ಹಾಲನ್ನು ಹಾಕಿ ಕದಕಿದರೆ ರವಾಗಂಜಿ ತಯಾರು.
ರವಾಮಸಾಲ್‌ದೋಸೆಯನ್ನು ತಯಾರಿಸುವಾಗ ಸಣ್ಣರವೆಯನ್ನು ಬಳಸಿದರೆ ಉತ್ತಮ. ದೋಸೆ ಹೊಯ್ಯಲು ಸುಲಭವಾಗುವುದಲ್ಲದೇ ಮೃದುವಾಗಿಯೂ ಇರುತ್ತದೆ. ಕೆಳಗಿನಳತೆಯ ಸಾಮಗ್ರಿಗಳಿಂದ ಸುಮಾರು ೬-೮ ದೋಸೆಗಳನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು
* ಸಣ್ಣರವೆ - ಒಂದು ಲೋಟ(ದೊಡ್ಡ ಗಾತ್ರದ್ದು)
* ಶುಂಠಿ - ಒಂದು ಇಂಚು
* ಹಸಿಮೆಣಸು - ಖಾರಕ್ಕೆ ತಕ್ಕಂತೆ. ತುಂಬಾ ಖಾರವಿದ್ದರೆ ಒಂದೇ ಸಾಕು.
* ಕೊತ್ತಂಬರಿಸೊಪ್ಪು - ಒಂದು ಹಿಡಿ
* ಬೇವಿನ ಸೊಪ್ಪು - ಸುಮಾರು ಅರ್ಧ ಹಿಡಿಯಷ್ಟು
* ಕಾಯಿತುರಿ - ೧-೨ ಚಮಚ
* ಈರುಳ್ಳಿ - ೧ ಗಡ್ಡೆ (ದೊಡ್ಡ ಗಾತ್ರದ್ದಾದರೆ ಅರ್ಧ ಮಾತ್ರ ಸಾಕು)
* ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
* ಮೊದಲು ಸಣ್ಣರವೆಯನ್ನು ತೊಳೆದು ನೀರನ್ನು ಬಸಿದಿಟ್ಟುಕೊಳ್ಳಬೇಕು. ತುಸು ಹೊತ್ತಿನಲ್ಲಿಯೇ ಅದು ತುಂಬಾ ಮೃದುವಾಗುತ್ತದೆ.
* ಕೊತ್ತಂಬರಿ ಸೊಪ್ಪು, ಬೇವಿನ ಸೊಪ್ಪು, ಹಸಿಮೆಣಸು, ಶುಂಠಿ ಹಾಗೂ ಈರುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಬೇಕು.
* ಹೆಚ್ಚಿಟ್ಟ ಸಾಮಗ್ರಿಗಳನ್ನು ಕಾಯಿತುರಿಯೊಂದಿಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಬೇಕು.
* ರುಬ್ಬಿದ ಮಿಶ್ರಣವನ್ನು ರವೆಯೊಂದಿಗೆ ಸೇರಿಸಿ ಉಪ್ಪನ್ನು ಹಾಕಿ ಒಮ್ಮೆ ಮಿಕ್ಸರ್‌ಗೆ ಹಾಕಿ ರುಬ್ಬಬೇಕು.
* ಬೇಕಿದ್ದರೆ ಸ್ವಲ್ಪ ನೀರನ್ನು ಸೇರಿಸಿ ದೋಸೆಹಿಟ್ಟಿನ ಹದಕ್ಕೆ ತರಬೇಕು.
* ಬಾಣಲೆಯನ್ನು ಕಾಯಲಿಟ್ಟು ದೋಸೆಹಿಟ್ಟನ್ನು ತೆಳ್ಳಗೆ ಹೊಯ್ಯಬೇಕು.
* ಬಾಯಲ್ಲಿ ನೀರೂರಿಸುವ ಈ ದೋಸೆಯನ್ನು ಹಾಗೆಯೇ ತಿನ್ನಬಹುದು. ಜೊತೆಗೆ ಬೇರೆ ಪದಾರ್ಥವಾಗಲೀ, ಚಟ್ನಿಯಾಗಲೀ ಬೇಕೆಂದೆನಿಸುವುದಿಲ್ಲ.
[@ದಟ್ಸ್‌ಕನ್ನಡದಲ್ಲಿ ಬರುತ್ತಿದ್ದ ನನ್ನ "ಶಿರಸಿ ಭವನ" ಅಂಕಣದಲ್ಲಿ ಪ್ರಕಟಿತ.]
-ತೇಜಸ್ವಿನಿ ಹೆಗಡೆ
ee chaleeli bisi bisi dose nenapu baayalli neeroorisuttade...:)
ReplyDeleteಬಿಸಿ ಬಿಸಿ ದೋಸೆ ಗರಿ ಗರಿ ದೋಸೆ ಮಾಡಿಕೊಳ್ಳಲೇ ನಾನು..
ReplyDeleteಹಿಂದೆ ಎಂದೂ ತಿಂದೇ ಇಲ್ಲ ಮುಂದೇ ಬೇಜಾನ್ ತಿನ್ಬೇಕಲ್ಲಾ ...
ಬಿಸಿ ಬಿಸಿ ದೋಸೆ....
ಹಹಹಹ್ ಬಹಳ ಚನ್ನಾಗಿದೆ ತೇಜಸ್ವಿನಿ ಚನ್ನಾಗಿದೆ ರುಚಿ...ನಾನೇ ಮಾದ್ಬಿಟ್ಟು ತಿನ್ತಾಇದ್ದೀನಿ,,,
ಹೊಸರುಚಿ... ಚೆನ್ನಾಗಿದೆ.
ReplyDeleteನಾನು ರುಬ್ಬಿಕೊಳ್ಳದೇ ಹಾಗೆಯೇ ದಪ್ಪಕ್ಕೆ ದೋಸೆ(ರೊಟ್ಟಿ) ಮಾಡುತ್ತಿದ್ದೆ ಅದೂ ಚೆನ್ನಾಗಿರುತ್ತದೆ.
ಹೊಸ ರುಚಿ ರೆಸಿಪಿ ಚೆನ್ನಾಗಿದೆ. ದೋಸೆಯ ರುಚಿಯನ್ನು ಸವಿಯುವಂತಾಗಿದೆ...
ReplyDeleteತೇಜಸ್ವಿನಿ...
ReplyDeleteನಾನೂ ರುಬ್ಬದೇ.. ಹಾಗೇ ಮಾಡ್ತೀನಿ... ಗರಿಗರಿಯಾಗಿ ತುಂಬಾ ಚೆನ್ನಾಗಿರತ್ತೆ. ದೋಸೆ ಹಿಟ್ಟಿಗೆ ಸಾಸಿವೆ + ಕರಿಬೇವು + ಇಂಗು ಒಗ್ಗರಣೆ ಕೊಟ್ಟು ಮಾಡಿದರೆ ಇನ್ನೂ ಚೆನ್ನಾಗಿರುತ್ತೆ... :-)
ಶ್ಯಾಮಲ
try maadi nodteeni.. image nodid mele tinnuva aase aytu.. nimm manege barabahuda?
ReplyDeletesakkat taste tejakka igaste madi tindaytu :)
ReplyDelete;-)idu nanage gottu
ReplyDelete