Saturday, April 11, 2020

ರುಚಿಕರ ಹಾಗೂ ಆರೋಗ್ಯಕರ ಟೊಮೇಟೋ ಗೊಜ್ಜುಗಳು


ಈ ಲಾಕ್ ಡೌನ್ ಬಹಳ ಪಾಠ ಕಲಿಸಿದೆ. ಅವುಗಳಲ್ಲಿ ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆಮಾಡಿಕೊಳ್ಳುವುದೂ ಒಂದು. ಏರುತ್ತಿರುವ ಬೆಲೆ, ಆದಷ್ಟು ನಾವು ಹೊರಬೀಳದಂತೇ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿಯಿಂದಾಗಿ ತೆಂಗಿನಕಾಯಿ ಬಳಸದ, ಹೆಚ್ಚು ತರಕಾರಿ ಹಾಕದೇ ಮಾಡುವಂತಹ ಅನೇಕ ಪದಾರ್ಥಗಳ ಅನ್ವೇಷಣೆಗೂ ದಾರಿಯಾಗಿದೆ! ಪ್ರಸ್ತುತ ನಾನಿಲ್ಲಿ ದೋಸೆ, ಚಪಾತಿ, ಇಡ್ಲಿಗಲ್ಲದೇ, ಅನ್ನಕ್ಕೂ ಕಲಿಸಿ ತಿನ್ನಬಹುದಾದಂಥ ಬಲು ರುಚಿಕರ ಟೊಮೇಟೋ ಗೊಜ್ಜನ್ನು (ತೆಂಗಿನ ಕಾಯಿ ಬಳಸದೇ ಮಾಡುವಂಥದ್ದು) ತಯಾರಿಸುವ ಎರಡು ರೀತಿಯ ವಿಧಾನವನ್ನು ವಿವರಿಸಿದ್ದೇನೆ.
ಮನೆಯ ಸುತ್ತಮುತ್ತ ನುಗ್ಗೆಮರವಿದ್ದರೆ ಅದರ ಸೊಪ್ಪಿನಿಂದ, ಮನೆಯಂಗಳದಲ್ಲಿ ಗೋಳಿಸೊಪ್ಪು (ಗಿಡಬಸಳೆ) ಬೆಳೆದಿದ್ದರೆ ಅದರಿಂದಲೋ ತೆಂಗಿನಕಾಯಿಯನ್ನು ಹಾಕದೇ ದಪ್ಪ ಸಾಂಬಾರನ್ನೂ ಮಾಡಬಹುದಾಗಿದೆ. ಅದರ ರೆಸಿಪಿಯನ್ನು ಮತ್ತೊಮ್ಮೆ ಹೇಳುವೆ. ಸದ್ಯಕೆ ಈಗ ಟೊಮೇಟೋ ಹಣ್ಣಿನಿಂದ ತಯಾರಿಸುವ ಎರಡು ರೀತಿಯ ಗೊಜ್ಜಿನ ವಿವರ ನೀಡುತ್ತಿದ್ದೇನೆ. ಮಾಡಿ ನೋಡಿರಿ.. ಸವಿದು ತಿಳಿಸಿರಿ. J

(ಸೂಚನೆ : ನಾನಿಲ್ಲಿ ೮ ಜನರಿಗೆ ಬೇಕಾಗುವ ಪ್ರಮಾಣ ನೀಡಿರುವೆ)
ವಿಧಾನ ೧

ಬೇಕಾಗುವ ಸಾಮಗ್ರಿಗಳು :-
೧. ಟೋಮೇಟೋ ಹಣ್ಣು – ದೊಡ್ಡ ಗಾತ್ರದ್ದಾಗಿದ್ದರೆ ೪, ಚಿಕ್ಕದ್ದಾಗಿದ್ದರೆ ೬
೨. ನೆಲಗಡಲೆ – ೩ ಚಮಚ
೩. ಬಿಳೇ ಎಳ್ಳು – ೩ ಚಮಚ
೪. ಕಡಲೆಬೇಳೆ – ೨ ಚಮಚ
೫. ಕರಿಬೇವು – ೮ ರಿಂದ ೧೦ ಎಸಳು
೬. ಇಂಗು – ರುಚಿಗೆ ತಕ್ಕಷ್ಟು
೭. ಖಾರಕ್ಕೆ ತಕ್ಕಷ್ಟು – ಹಸಿಮೆಣಸು ಅಥವಾ ಕೆಂಪುಮೆಣಸು. (ಕೆಂಪು ಮೆಣಸು ಹೆಚ್ಚು ಒಳ್ಳೆಯದು)
೮. ಉಪ್ಪು, ಹುಳಿ – ರುಚಿಗೆ ತಕ್ಕಷ್ಟು
೯. ತೆಂಗಿನೆಣ್ಣೆ – ೪ ಚಮಚ (ನೀವು ಅಡುಗೆಗೆ ಬಳಸುವ ಯಾವುದೇ ಎಣ್ಣೆ ಆಗಬಹುದು. ತೆಂಗಿನೆಣ್ಣೆ ಆರೋಗ್ಯಕ್ಕೆ ಉತ್ತಮ.)
೧೦. ಒಗ್ಗರಣೆಗೆ - ಸಾಸಿವೆ, ಕರಿಬೇವು, ಉದ್ದಿನಬೇಳೆ

ಮಾಡುವ ವಿಧಾನ : -
*ಮೊದಲು ಟೊಮೇಟೋವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.
*ಬಾಣಲೆಗೆ ೨-೩ ಚಮಚ ಎಣ್ಣೆ ಹಾಕಿ ಅದು ತುಸು ಬಿಸಿಯಾಗಿದ್ದೇ ಅದಕ್ಕೆ ಎಳ್ಳು, ಉದ್ದಿನಬೇಳೆ, ಕಡಲೇಬೇಳೆ, ಶೇಂಗಾ, ಕರಿಬೇವು, ಮೆಣಸು, ಇಂಗು ಎಲ್ಲಾ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
*ಇದಕ್ಕೆ ಹೆಚ್ಚಿಟ್ಟುಕೊಂಡಿರುವ ಟೊಮೇಟೋವನ್ನು ಹಾಕಿ, ಉಪ್ಪು+ಹುಳಿಯ ಜೊತೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
*ಈ ಮಿಶ್ರಣ ತಣಿದ ನಂತರ ರುಬ್ಬಿಕೊಂಡು ಇದಕ್ಕೆ ಒಂದು ಅಥವಾ ಅರ್ಧ ಚಮಚ ಎಣ್ಣೆಯಲ್ಲಿ ಸಾಸಿವೆ, ಕಾಲು ಚಮಚ ಉದ್ದಿನಬೇಳೆ, ಒಂದೆರಡು ಎಸಳು ಕರಿಬೇವಿನಿಂದ ಒಗ್ಗರಣೆ ಹಾಕಿ. (ಕರಿಬೇವು ಕಡಿಮೆ ಇದ್ದರೆ ತುಸುವೇ ಬಳಸಬಹುದು. ಕಡಲೆ, ಉದ್ದಿನಬೇಳೆ, ಶೇಂಗಾ – ಇವೆಲ್ಲಾ ಹಾಕುವುದರಿಂದ ತೆಂಗಿನಕಾಯಿ ಕಾಕಬೇಕೆಂದಿಲ್ಲ. ಬಹಳ ರುಚಿಯಾಗಿರುತ್ತದೆ. ಬೇಕಿದ್ದಲ್ಲಿ ಮರುದಿವಸವೂ ಫ್ರಿಜ್ಜಿಂದ ತೆಗೆದು ತುಸು ಬಿಸಿಮಾಡಿ ಬಳಸಬಹುದು.)

ವಿಧಾನ ೨ : ಇದು ಮೊದಲಿನದ್ದಕ್ಕಿಂತ ಮತ್ತೂ ಸುಲಭ ಹಾಗೂ ಸರಳ.

ಬೇಕಾಗುವ ಸಾಮಗ್ರಿಗಳು :
೧. ಟೊಮೇಟೋ – ೪-೫
೨. ತೆಂಗಿನೆಣ್ಣೆ – ೩-೪ ಚಮಚ
೩. ಈರುಳ್ಳಿ – ಸಾಧಾರಣ ಗಾತ್ರದ್ದು ಒಂದು
೪. ಹಸಿಮೆಣಸು/ಕೆಂಪುಮೆಣಸು – ಖಾರಕ್ಕೆ ತಕ್ಕಷ್ಟು
೫. ಪುಟಾಣಿ ಬೇಳೆ – ಎರಡು ಮುಷ್ಟಿ
೬. ಉಪ್ಪು, ಹುಳಿ ಮತ್ತು ಇಂಗು
೭. ಒಗ್ಗರಣೆಗೆ : ಸಾಸಿವೆ, ಕರಿಬೇವು ಹಾಗೂ ಒಂದು ಒಣಮೆಸಿನ ಚೂರು

ಮಾಡುವ ವಿಧಾನ
*ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಮೊದಲು ಹೆಚ್ಚಿಟ್ಟುಕೊಂಡಿರುವ ಟೊಮೇಟೊವನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ (ಎಣ್ಣೆ ಇದ್ದಿರುತ್ತದೆ ಮೊದಲೇ ಹಾಕಿದ್ದು.. ಬೇಕಿದ್ದಲ್ಲಿ ಮತ್ತೆ ಸ್ವಲ್ಪ ಹಾಕಿಕೊಳ್ಳಿ) ಹೆಚ್ಚಿಟ್ಟುಕೊಂಡಿರುವ ಈರುಳ್ಳಿಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.
*ಅದೇ ಬಾಣಲೆಯಲ್ಲಿ ಇರುವ ಎಣ್ಣೆ ಪಸೆಯಲ್ಲೇ ಮೆಣಸನ್ನು ಹುರಿದಿಟ್ಟುಕೊಳ್ಳಿ.
*ಈಗ ಮೇಲೆ ಹೇಳಿರುವಂತೇ ಹುರಿದಿಟ್ಟುಕೊಂಡ ಎಲ್ಲಾ ಮಿಶ್ರಣಕ್ಕೆ (ತುಸು ತಣಿದ ನಂತರ) ಪುಟಾಣಿಬೇಳೆ, ಉಪ್ಪು, ಹುಳಿ, ಚಿಟಿಕೆ ಇಂಗು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
*ಈ ಮಿಶ್ರಣಕ್ಕೆ ಸಾಸಿವೆ, ಕರಿಬೇವು ಹಾಗೂ ಒಣಮೆಣಸಿನ ಚೂರುಹಾಕಿ ಒಗ್ಗರಿಸಿ.
ಇದನ್ನೂ ಮಾಡಿನೋಡಿ.. ಸವಿದು ಹೇಳಿ.

ಬದುಕಿಗಾಗಿ ತಿನ್ನುವತ್ತ ನಮ್ಮ ನೋಟ ಸಾಗಲಿ. ರುಚಿಕರ, ಆರೋಗ್ಯಕರ, ಸುಲಭ, ಸರಳ ಆಹಾರದ ಶೈಲಿಯಿಂದ ಸ್ವಸ್ಥರಾಗುತ್ತಾ ಸಾಗೋಣ.

#ಆರೋಗ್ಯವೇ_ಭಾಗ್ಯ
#ಲಾಕ್ಡೌನ್_ಕಾಲದ_ರೆಸಿಪಿಗಳು
#ಅಮ್ಮನ_ಅಡುಗೆ

~ತೇಜಸ್ವಿನಿ ಹೆಗಡೆ

Thursday, November 08, 2018

ಗೋವೆಕಾಯಿ ಕಡುಬು

ಕೃಪೆ: ಅಂತರ್ಜಾಲ

ಗೋವೆಕಾಯಿಗೆ ಚೀನಿಕಾಯಿ, ಸಿಹಿಗುಂಬಳ ಕಾಯಿ ಎಂಬಿತ್ಯಾದಿ ಹೆಸರುಗಳಿವೆ. ಗೋವೆಕಾಯಿಯಲ್ಲಿ ವಿಟಮಿನ್ ಎ ಬಹಳ ಹೆಚ್ಚಿರುತ್ತದೆ. ಅಲ್ಲದೇ, ಇದರೊಳಗಿರುವ ಪೊಟಾಶಿಯಮ್ ಮತ್ತು ಬೀಟಾ ಕೆರೋಟಿನ್ ಕಣ್ಣಿಗೆ, ಹೃದಯಕ್ಕೆ, ರಕ್ತದೊತ್ತಡಕ್ಕೆ, ಚರ್ಮದ ಹೊಳಪಿಗೆ ಹೀಗೆ ಗೋವೆಕಾಯಿ ಬಹು ಉಪಯೋಗಿಯಾಗಿದೆ. ದೀಪಾವಳಿಯ ದಿವಸ ಬಹುತೇಕ ಹವ್ಯಕರ ಮನೆಗಳಲ್ಲಿ ಇದರದ್ದೇ ಕಡುಬನ್ನು ಸಿಹಿ ತಿಂಡಿಯಾಗಿ ಮಾಡುತ್ತಾರೆ. ಇದನ್ನು ತಯಾರಿಸಲು ಬೇಕಾಗುವ ವಸ್ತುಗಳು ಬಹಳ ಕಡಿಮೆ. ಆದರೆ ಮಾಡುವ ಹದ ಚೆನ್ನಾಗಿ ಗೊತ್ತಿರಬೇಕಾಗುತ್ತದೆ. ಗೋವೆಕಾಯಿಯ ಕಡುಬಿಗೆ ಹಸುವಿನ ತುಪ್ಪ ಹಾಕಿ ತಿಂದರೆ ವಾಯು ಸಮಸ್ಯೆ ಆಗದು, ಹೊಟ್ಟೆಗೂ ತಂಪು, ಜೀರ್ಣವಾಗುವುದು ಸುಲಭವಾಗಿ. ಅಲ್ಲದೇ ಮೊಸರಿನ ಜೊತೆಗೂ ಸವಿಯಬಹುದು.. ಇದರ ಮಜವೇ ಬೇರೆ. ಸಿಹಿ ಪ್ರಿಯರು ಇದಕ್ಕೆ ಜೇನುತುಪ್ಪ, ತುಪ್ಪ, ಸಕ್ಕರೆ, ಬೆಲ್ಲ ಎಲ್ಲವನ್ನೂ ಸುರಿದುಕೊಂಡು ತಿನ್ನುವುದೂ ಇದೆ. ಈಗ ಇದನ್ನು ತಯಾರಿಸುವ ವಿಧಾನವನ್ನು ನೋಡೋಣ. ನೀವೂ ಸಿಹಿಗಡುಬನ್ನು ತಯಾರಿಸಿಕೊಂಡು ಮೆದ್ದು ಹೇಗಾಗುವುದು ಎಂಬುದನ್ನೂ ಪ್ರತಿಕ್ರಿಯೆಯಲ್ಲಿ ತಿಳಿಸಿರಿ


**********************
ಗೋವೆಕಾಯಿ ಕಡುಬು
ಬೇಕಾಗುವ ಸಾಮಗ್ರಿಗಳು
(ಸಾಧಾರಣ ದೊಡ್ಡ ಗಾತ್ರದ ಐದು ಕಡುಬಿನ ಪ್ರಮಾಣಕ್ಕೆ)
·        ಅಕ್ಕಿ – ೧ ಲೋಟ
·        ಚೀನಿಕಾಯಿ ಅಥವಾ ಗೋವೆಕಾಯಿ ಹೋಳುಗಳು – ಎರಡೂವರೆ ಲೋಟ
·        ಬೆಲ್ಲ – ಊರಿನ ಹದಾ ಗಟ್ಟಿ ಬೆಲ್ಲವಾದರೆ ಒಂದೂಕಾಲು ಲೋಟ. ಅಂಗಡಿಯ ಅಚ್ಚುಬೆಲ್ಲವಾದರೆ, ಅದನ್ನು ಕುಟ್ಟಿ ಪುಡಿಮಾಡಿಕೊಂಡು ಒಂದೂವರೆ ಲೋಟ ಹಾಕಬೇಕು.
·        ಕಾಯಿ ತುರಿ – ೧/೨ ಭಾಗ
·        ಏಲಕ್ಕಿ – ಪರಿಮಳಕ್ಕೆ ತಕ್ಕಂತೆ
·        ಬಾಳೆ ಎಲೆಗಳು – ಉದ್ದ ಗಾತ್ರ ಬಾಳೆಯೆಲೆ ೩ (ಒಂದು ಬಾಳೆಯೆಲೆಯಲ್ಲಿ ಎರಡು ಕಡುಬನ್ನು ಹಚ್ಚಬಹುದು ಇಲ್ಲಾ ಅದನ್ನು ತುಂಡು ಮಾಡಿಕೊಂಡು ಬೇರೆಬೇರೆಯಾಗೂ ಹಚ್ಚಬಹುದು.)

ಮಾಡುವ ವಿಧಾನ
೧. ಮೊದಲು ಅಕ್ಕಿಯನ್ನು ೪ ಗಂಟೆ ನೆನೆಹಾಕಬೇಕು.
೨. ನೆನೆದ ಅಕ್ಕಿಯನ್ನು ಮಂದವಾಗಿ ಅಂದರೆ ಜಾಸ್ತಿ ನೀರು ಹಾಕದೆ ಗಟ್ಟಿಯಾಗಿ ಮತ್ತು ನುಣ್ಣಗೆ ಕಡೆದಿಟ್ಟುಕೊಳ್ಳಬೇಕು. ಅಕ್ಕಿಯನ್ನು ಕಡೆಯುವಾಗಲೇ ಏಲಕ್ಕಿಯನ್ನೂ ಅದಕ್ಕೇ ಹಾಕಿಬಿಡುವುದು.
೩. ಗೋವೆಕಾಯಿಯನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳುವುದು.
೪. ಬೆಲ್ಲವನು ದಪ್ಪ ತಳದ ಪಾತ್ರೆಗೆ ಹಾಕಿ ಕುದಿಸುವುದು.
೫. ಬೆಲ್ಲ ಕುದಿ ಬರುತ್ತಿರುವಂತೇ, ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಗೋವೆಕಾಯಿಯ ಹೋಳು ಮತ್ತು ಅರ್ಧಗಡಿ ತೆಂಗಿನ ಕಾಯಿ ತುರಿಯನ್ನು ಹಾಕಿ ಹತ್ತು ನಿಮಿಷ ಕುದಿಸುವುದು.
೬. ಈ ಮಿಶ್ರಣಕ್ಕೀಗ ಬೀಸಿಟ್ಟುಕೊಂಡಿರುವ ಗಟ್ಟಿ ಅಕ್ಕಿ ಹಿಟ್ಟನ್ನು ಒಂದು ಕೈಯಿಂದ ಹಾಕುತ್ತಾ ಮತ್ತೊಂದು ಕೈಯಲ್ಲಿ ತೊಳೆಸುತ್ತಲೇ ಇರಬೇಕು. ಪೂರ್ತಿ ಅಕ್ಕಿಹಿಟ್ಟನ್ನು ಹಾಕಿ ಕೊಂಡು ಆಮೇಲೆ ಅದನ್ನು ತೊಳೆಸಲು ಹೋದರೆ ಅದು ಗಟ್ಟಿಯಾಗಿಬಿಡುವುದು. ಮೊದಮೊದಲು ಇದು ಕಷ್ಟವಾದರೆ, ಸಹಾಯಕ್ಕೊಬ್ಬರು ಬಳಿ ಇದ್ದರೆ, ಒಬ್ಬರು ಹಿಟ್ಟನ್ನು ಸುರಿಯುತ್ತಾ ಹೋದರೆ ಮತ್ತೊಬ್ಬರು ಬಿಡದೇ ತೊಳೆಸುತ್ತಾ ಹೋಗುವುದು ಒಳ್ಳೆಯದು. ಹೀಗೆ ತೊಳೆಸುತ್ತಾ ಹೋದಂತೆ ಮಿಶ್ರಣ ಮಣ್ಣಿಯ ಹದಕ್ಕೆ ಬಂದು ಮುದ್ದೆಯಾಗುವುದು. ಆಗ ಒಲೆಯನ್ನಾರಿಸಿಬಿಡುವುದು.
೭. ಬಾಳೆ ಎಲೆಗಳನ್ನು ಒಲೆಯಲ್ಲಿ ತುಸು ಬಾಡಿಸಿಟ್ಟುಕೊಳ್ಳುವುದು.
೮. ತುಸು ತಣಿದ ಮೇಲೆ ಮುದ್ದೆಯನ್ನು ಕೈಯಲ್ಲಿ ತೆಗೆದುಕೊಂಡು ತುಸು ಬಾಡಿಸಿಟ್ಟುಕೊಂಡಿರುವ ಬಾಳೆ ಎಲೆಯ ಮೇಲೆ ಬೇಕಾದ ಆಕಾರಕ್ಕೆ ಹಚ್ಚಿ, ಅದನ್ನು ನಾಲ್ಕೂ ಬದಿಯಿಂದ ಮಡಚುವುದು.
೯. ಇದನ್ನು ಇಡ್ಳಿ ದಳ್ಳೆಯಲ್ಲಿಟ್ಟು ಬೇಯಿಸುವುದು. ಇದು ಬೇಯಲು ಸುಮಾರು ಒಂದು ತಾಸು ಬೇಕಾಗುವುದು.
೧೦. ಹದವಾಗಿ ಬೆಂದ ಬೆಲ್ಲದ ಗೋವೆಕಾಯಿ ಸಿಹಿಗಡುಬನ್ನು ತುಪ್ಪದ ಜೊತೆಗೆ ಅಥವಾ ಮೊಸರಿನ ಜೊತೆಗೆ ಮೆಲ್ಲಬಹುದು. ಕೆಲವರು ಇದಕ್ಕೆ ಜೇನುತುಪ್ಪ, ಬೆಲ್ಲ, ತುಪ್ಪ ಎಲ್ಲವನ್ನೂ ಹಾಕಿಕೊಂಡು ತಿನ್ನುವುದೂ ಇದೆ.

ರೆಸಿಪಿ ಕೃಪೆ : ನನ್ನ ಅಮ್ಮ ಶ್ರೀಮತಿ ಜಯಲಕ್ಷ್ಮೀ ಭಟ್

~ತೇಜಸ್ವಿನಿ ಹೆಗಡೆ

Friday, August 31, 2018

ನುಗ್ಗೆ ಸೊಪ್ಪಿನ ತಂಬುಳಿನಮ್ಮ ಸುತ್ತ ಮುತ್ತಲು ಬೆಳೆಯುವ, ನಾವು ಮನೆಯಲ್ಲೇ ಬೆಳೆಸಬಹುದಾದ ಅನೇಕ ಸೊಪ್ಪುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿರುತ್ತವೆ ಮತ್ತು ಅವುಗಳ ಪದಾರ್ಥಗಳನ್ನೂ ತಿನ್ನಲೂ ರುಚಿಕರವಾಗಿರುವುದು.

ನುಗ್ಗೆ ಸೊಪ್ಪು ಎಲ್ಲೆಡೆ ಸರ್ವೇಸಾಮಾನ್ಯವಾಗಿ ಸಿಗುವಂಥ ಬಹೋಪಯೋಗಿ ಸೊಪ್ಪು. ಹಲವು ವಿಟಮಿನ್ನುಗಳ ಆಗರವಿದು. ನರ ದೌರ್ಬಲ್ಯಕ್ಕೆ, ರಕ್ತ ಹೀನತೆಗೆ, ರಕ್ತ ಶುದ್ಧಿಗೆ, ಹಾಲೂಡಿಸುವ ತಾಯಂದಿರಿಗೆ, ಮಲಬದ್ಧತೆಗೆ, ಅಧಿಕ ರಕ್ತದೊತ್ತಡದ ನಿವಾರಣೆಗೆ ಹೀಗೆ ಹಲವು ರೀತಿಯ ದೈಹಿಕ ಸಮಸ್ಯೆಗಳಿಗೆ ರಾಮಬಾಣ ಈ ಸೊಪ್ಪು. ಇದರ ತಂಬುಳಿ, ಚಟ್ನೆ, ಸಾಂಬಾರು, ಪಲ್ಯ, ಬಜೆ ಎಲ್ಲವೂ ತಿನ್ನಲು ಚೆನ್ನಾಗಿರುತ್ತವೆ. ಪ್ರಸ್ತುತ ನಾನು ಇದರ ತಂಬುಳಿ ತಯಾರಿಸುವ ವಿಧಾನವನ್ನು ವಿವರಿಸುತ್ತಿದ್ದೇನೆ. ಸಾಂಬಾರಿನೊಳಗಿರುವ ಸೊಪ್ಪು ಹೆಚ್ಚು ಬೆಂದುಬಿಟ್ಟಿರುತ್ತದೆ ಮತ್ತು ನಾವು ಹೆಚ್ಚೆಂದರೆ ಒಂದೆರಡು ಸೌಟು ಸೇವಿಸಬಹುದೇನೋ. ಆದರೆ ತಂಬುಳಿಯಲ್ಲಿ ಇದರ ಅಂಶಯ ಬಹಳ ಅಧಿಕವಾಗಿರುತ್ತದೆ. ಅನ್ನದ ಜೊತೆ ಕಲಸಿ ತಿಂದರೂ ರುಚಿ, ಹಾಗೇ ಕುಡಿದರೂ ಚೆನ್ನಾಗಿರುತ್ತದೆ. ತಯಾರಿಸುವ ವಿಧಾನವೂ ಬಹಳ ಸುಲಭ ಹಾಗೂ ಸರಳ.

ಬೇಕಾಗುವ ಸಾಮಗ್ರಿಗಳು (ಮೂರ್ನಾಲ್ಕು ಜನರ ಅಳತೆಯಲ್ಲಿ)
೧. ನುಗ್ಗೆ ಸೊಪ್ಪು (ನಾಲ್ಕು ದೊಡ್ಡ ಮುಷ್ಟಿಯಷ್ಟು)
೨. ಬಿಳೇ ಎಳ್ಳು – ೧ ಚಮಚ
೩. ಜೀರಿಗೆ – ೧ ಚಮಚ
೪. ಕಾಳು ಮೆಣಸು – ೪-೫ ಕಾಳುಗಳು
೫. ಇಂಗು – ಚಿಟಿಕೆಯಷ್ಟು
೬. ತೆಂಗಿನೆಣ್ಣೆ (ಅಥವಾ ತುಪ್ಪವನ್ನೂ ಬಳಸಬಹುದು) – ೧-೨ ಚಮಚ (ಹುರಿಯಲು ಬೇಕಾಗುವಷ್ಟು ಮಾತ್ರ)
೭. ಕಡೆದ ಮಜ್ಜಿಗೆ – ೨ ದೊಡ್ಡ ಲೋಟ
೮. ತೆಂಗಿನ ತುರಿ – ಒಂದು ಮುಷ್ಟಿಯಷ್ಟು (ಬೀಸಲು ಬೇಕಾಗುವಷ್ಟು ಮಾತ್ರ)
೯. ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
*ಕಾದ ಎಣ್ಣೆಗೆ ಬಿಳೇ ಎಳ್ಳು, ಜೀರಿಗೆ, ಇಂಗು ಮತ್ತು ಕಾಳುಮೆಣಸುಗಳನ್ನು ಹಾಕಿ ಒಗ್ಗರಿಸಿಕೊಳ್ಳಿ.
*ಅವುಗಳು ಹುರಿದು ಚಟಗುಡುವಾಗ, ಮೊದಲೇ ತೊಳೆದಿಟ್ಟುಕೊಂಡಿರುವ ಸೊಪ್ಪನ್ನು ಹಿಂಡಿ ಈ ಒಗ್ಗರಣೆಗೆ ಹಾಕಿ ಚೆನ್ನಾಗಿ ಹುರಿಯಿರಿ (ಅದು ಬಾಡುವಷ್ಟು ಹೊತ್ತು).
*ಮಿಶ್ರಣ ಚೆನ್ನಾಗಿ ಹುರಿದು ಸೊಪ್ಪು ಬಾಡಿದ ನಂತರ, ತುಸು ತಣಿಯಲು ಬಿಟ್ಟು, ಕಾಯಿತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಿ.
*ನಿಮಗೆ ತಂಬುಳಿ ಕುಡಿಯಲು ಬೇಕಾಗುವಷ್ಟು ತೆಳ್ಳಗಿರಬೇಕೆಂದರೆ ಬೀಸಿದ ಮಿಶ್ರಣೆಗೆ ಮಜ್ಜಿಗೆಯ ಜೊತೆ ೧-೨ ಲೋಟ ನೀರನ್ನು ಸೇರಿಸಿಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕುಡಿಯಬಹುದು. ಇಲ್ಲಾ, ಬೀಸಿದ ಮಿಶ್ರಣಕ್ಕೆ ಮಜ್ಜಿಗೆ, ಒಂದು ಲೋಟ ನೀರು ಮತ್ತು ಉಪ್ಪು ಸೇರಿಸಿ ಹದಾ ಮಂದವಾಗಿಸಿಕೊಂಡು ಅನ್ನಕ್ಕೆ ಕಲಸಿಯೂ ತಿನ್ನಬಹುದು ಅಥವಾ ಹಾಗೇ ಕುಡಿಯಲೂಬಹುದು.
ಬಹಳ ರುಚಿಕರವಾಗಿರುವುದಂತೂ ಸತ್ಯ! ಮಾಡಿ ನೋಡಿ ಒಮ್ಮೆ.

~ತೇಜಸ್ವಿನಿ ಹೆಗಡೆ.

Saturday, February 24, 2018

ಚೀನಿಕಾಯಿ (ಸಿಹಿ ಕುಂಬಳಕಾಯಿ) ಕೊದ್ದೆಲು

Sweet Pumpkin ಅನ್ನು ನಾವು ಚೀನಿಕಾಯಿ ಎಂದು ಕರೆಯುತ್ತೇವೆ. ಇದಕ್ಕೆ ಸಿಹಿ ಕುಂಬಳ ಎಂದೂ ಹೇಳುತ್ತಾರೆ. ಮಲೆನಾಡಿನಲ್ಲಿ ದೀಪಾವಳಿಯ ದಿವಸ ಇದರ ಕಡುಬು ಮಾಡದ ಮನೆಯೇ ಇಲ್ಲ ಎನ್ನಬಹುದು. ನೋಡಲು ಕಿತ್ತಳೆ/ಕಡು ಹಸಿರು ಬಣ್ಣದಿಂದ ಕೂಡಿರುವ ಈ ಕಾಯಿ ನೋಡಲೆಷ್ಟು ಸುಂದರವೋ ಅಷ್ಟೇ ಆರೋಗ್ಯಕ್ಕೂ ಹಿತಕರ. ಇದರೊಳಗಿರುವ ಪೊಟಾಶಿಯಮ್ ಮತ್ತು ಬೀಟಾ ಕೆರೋಟಿನ್ ಕಣ್ಣಿಗೆ, ಹೃದಯಕ್ಕೆ, ರಕ್ತದೊತ್ತಡಕ್ಕೆ ಚರ್ಮದ ಹೊಳಪಿಗೆ ಹೀಗೆ ಹಲವು ರೀತಿಯಲ್ಲಿ ಇದು ಬಹಳ ಉಪಯೋಗಿ ಎಂದು ಹೇಳುತ್ತಾರೆ.  ಬೇಕಾಗುವ ಸಾಮಗ್ರಿಗಳು (೪-೫ ಜನರ ಅಳತೆಯಲ್ಲಿ)

* ಚೀನಿಕಾಯಿ – ಸಣ್ಣ ಗಾತ್ರದ್ದಾರೆ ಪೂರ್ತಿ ಬೇಕು, ದೊಡ್ಡದಾದರೆ ಅರ್ಧ ಸಾಕು.
* ಕೆಂಪು ಮೆಣಸು ಖಾರಕ್ಕೆ ತಕ್ಕಂತೆ
* ಮೆಂತೆ 1 1/2 ಚಮಚ
* ಉದ್ದಿನ ಬೇಳೆ – 2 ಚಮಚ
* ಕೊತ್ತಂಬರಿ  - 2 ಚಮಚ
* ಜೀರಿಗೆ – 1/4 ಚಮಚ
* ಕರಿಬೇವು – 15-20 ಎಲೆಗಳು
* ಎಣ್ಣೆ – ಹುರಿಯಲು ಬೇಕಾಗುವಷ್ಟು
* ಕಾಯಿ ತುರಿ – ಅರ್ಧ ಕಡಿ (ಚಿಕ್ಕ ಕಾಯಿಯಾಯದರೆ ಪೂರ್ತಿ ಹಾಕಿ) 
* ಬೆಲ್ಲ, ಉಪ್ಪು, ಹುಳಿ – ರುಚಿಗೆ ತಕ್ಕಷ್ಟು
* ಒಗ್ಗರಣೆಗೆ ಸಾಸಿವೆ ಹಾಗೂ ಒಂದೆರಡು ಎಸಳು ಕರಿಬೇವು.

ತಯಾರಿಸುವ ವಿಧಾನ

~ ಮೊದಲು ಚೀನಿಕಾಯನ್ನು ಹೋಳು ಮಾಡಿಕೊಂಡು ಅದಕ್ಕೆ ಉಪ್ಪು+ಬೆಲ್ಲ+ಹುಳಿ ಹಾಕಿ ಹದವಾಗಿ ಬೇಯಿಸಿಕೊಳ್ಳಿ. ಒಂದೊಮ್ಮೆ ಇಲ್ಲಿ ಹುಳಿ, ಬೆಲ್ಲ ಮರೆತು ಹೋದರೂ ಬೀಸುವಾಗ ಅಥವಾ ಗೊಡಗುಡಿಸುವಾಗ ಹಾಕಿಕೊಳ್ಳಬಹುದು. ಚೀನಿಕಾಯಿ ಸಿಹಿಯೇ ಇರುವುದರಿಂದ ಬೆಲ್ಲ ಜಾಸ್ತಿ ಹಾಕಬೇಕೆಂದಿಲ್ಲ. ರುಚಿಗೆ ತಕ್ಕಷ್ಟು ಸಾಕಾಗುತ್ತದೆ.
~  ಕೆಂಪು ಮೆಣಸು + ಮೆಂತೆ + ಕೊತ್ತಂಬರಿ ಬೀಜ + ಜೀರಿಗೆ + ಉದ್ದಿನ ಬೇಳೆ + ಕರಿಬೇವಿನ ಎಲೆಗಳು ಇವೆಲ್ಲವನ್ನೂ ಎಣ್ಣೆಯೊಂದಿಗೆ ಹುರಿದುಕೊಳ್ಳಿ.
~ ಹುರಿದ ಮಿಶ್ರಣಕ್ಕೆ ಕಾಯಿತುರಿಗಳನ್ನು ಹಾಕಿ ತರಿತರಿಯಾಗಿ ಬೀಸಿಕೊಳ್ಳಿ (ತುಂಬಾ ನುಣ್ಣಗಾಗದಿದ್ದರೆ ಒಳ್ಳೆಯದು)
~ ಬೀಸಿದ ಮಿಶ್ರಣವನ್ನು ಬೇಯಿಸಿದ ಹೋಳಿಗೆ ಹಾಕಿ, ಉಪ್ಪು+ಹುಳಿ+ಸಿಹಿಯನ್ನು ಹದಮಾಡಿಕೊಂಡು ಚೆನ್ನಾಗಿ ಕುದಿಸಿ. ಇದು ಮಂದವಾಗಿರಬೇಕು. ಕುದಿಸುವಾಗ ಜಾಸ್ತಿ ನೀರು ಹಾಕಬಾರದು.
~ ಗೊಡಗುಡಿಸಿದ ನಂತರ ಸಾಸಿವೆ+ಒಂದೆರಡು ಎಸಳು ಕರಿಬೇವಿನ ಒಗ್ಗರಣೆ ಹಾಕಿ ಮುಚ್ಚಿಬಿಡಿ.

ಬಿಸಿ ಬಿಸಿ ಕೊದ್ದೆಲನ್ನು ಸವಿದ ಮೇಲೆ ಬೇಳೆ ಹಾಕಿದ ಸಾಂಬರ್ ತುಸು ಸಮಯ ಬೇಡವೇ ಬೇಡವೆಂದೆನಿಸಿಬಿಡುವುದಂತೂ ಖಾತ್ರಿ! ಹೆಚ್ಚಾಗಿ ಕುಚ್ಚಲಕ್ಕಿ (ಬಾಯ್ಲ್ಡ್ ರೈಸ್)ಯ ಜೊತೆಗೆ ಇದರ ಸವಿ ಇನ್ನೂ ಹೆಚ್ಚು ಅನ್ನುತ್ತಾರೆ ಹಲವರು. ಆದರೆ ವೈಟ್ ರೈಸ್ ಆದರೂ ಸೇವಿಸಲು ಬಹಳ ರುಚಿಯಾಗಿರುತ್ತದೆ.

ಸೂಚನೆ :-

ಇದೇ ರೀತಿ ಬಸಳೆ, ಬಣ್ಣದ ಸವತೆ, ಬಟಾಟೆ, ಬದನೆಕಾಯಿ – ಈ ತರಕಾರಿಗಳ ಕೊದ್ದೆಲನ್ನೂ ತಯಾರಿಸಬಹುದು. ಬಸಳೆ ಕೊದ್ದಲು ಮಾಡುವುದಾದರೆ ಮೆಂತೆಯ ಪ್ರಮಾಣ ಕಡಿಮೆ ಮಾಡಿ, ಸಾಸಿವೆಯನ್ನು ಒಂದೂವರೆ ಚಮಚ ಹಾಕಬೇಕು. ಹಾಗೇಯೇ ಬಟಾಟೆಯಂಥ ಗೆಡ್ಡೆಗೆಣಸಿನ ಕೊದ್ದೆಲು ತಯಾರಿಸುವಾಗ ಇಂಗನ್ನು ಹಾಕಬೇಕು. 

~ತೇಜಸ್ವಿನಿ ಹೆಗಡೆ

Wednesday, February 15, 2017

ಕಡಲೇ ಹಿಟ್ಟು ಮತ್ತು ಬೆಲ್ಲದ ಲಡ್ಡು

ಸಕ್ಕರೆ ಬಾಯಿಗೆ ಸಿಹಿ, ಹೊಟ್ಟೆಗೆ ವಿಷ. ಸಕ್ಕರೆಯನ್ನು ಆದಷ್ಟು ಕಡಿಮೆ ತಿನ್ನಿ.. ತಿನ್ನದೇ ಇದ್ದರೂ ನಷ್ಟವೇನಿಲ್ಲ ಎಂದೇ ಹೇಳುತ್ತಾರೆ ವೈದ್ಯರು. ಆದರೆ ಬಹುತೇಕ ಸಿಹಿ ತಿಂಡಿಗಳಿಗೆ ಸಕ್ಕರೆಯನ್ನು ಹಾಕೇ ಹಾಕುತ್ತೇವೆ. ಅದರ ಬದಲು ಬೆಲ್ಲವನ್ನು ಉಪಯೋಗಿಸಿ ಮಾಡಿದರೆ ಬಾಯಿಗೂ ರುಚಿ, ದೇಹಕ್ಕೂ ಹಿತ. ಕಡಲೇ ಹಿಟ್ಟಿನ ಲಾಡನ್ನು ಸಕ್ಕರೆ ಪಾಕದಲ್ಲಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ಬೆಲ್ಲವನ್ನು ಬಳಸಿ ಮಾಡಿದರೂ ಬಹು ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು. (ಸಾಧಾರಣ ಗಾತ್ರದ ೧೫ ಲಾಡಿಗೆ)

೧. ಕಡಲೇಹಿಟ್ಟು : ೧ ಲೋಟ
೨. ಬೆಲ್ಲ : ೧/೨ ಕಪ್ಪು (ತುಂಬಾ ನೀರಿನಂತಿದ್ದರೆ ತುಸು ಕಡಿಮೆ ಹಾಕಿ.. ನಿಮ್ಮ ಸಿಹಿಗೆ ತಕ್ಕಷ್ಟು)
೩. ಕಾಯಿತುರಿ : ೧/೨ ಕಪ್ಪು
೪. ತುಪ್ಪ - ೪ ಚಮಚ
೫. ಏಲಕ್ಕಿ ಪುಡಿ
೬. ಡ್ರೈಫ್ರುಟ್ಸ್ - ಬಾದಾಮಿ, ಗೋಡಂಬಿ, ಪಿಸ್ತಾ - ೧/೪ ಕಪ್
ಬೇಕಿದ್ದರೆ ಕಡಲೇ ಬೀಜವನ್ನು ಹುರ್ದಿಉ ತರಿ ತರಿಯಾಗಿ ಹುಡಿಮಾಡಿಟ್ಟುಕೊಂಡು, ಡ್ರೈಫ್ರೂಟ್ಸ್ ಬದಲಿಗೆ ಬಳಸಬಹುದು.

ಮಾಡುವ ವಿಧಾನ
೧. ಮೊದಲು ಕಡಲೇ ಹಿಟ್ಟಿಗೆ ತುಪ್ಪ ಬೆರಸಿ ಚೆನ್ನಾಗಿ ಘಮ್ಮೆನ್ನುವ ಪರಿಮಳ ಬರುವವರೆಗೆ, ಹಿಟ್ಟು ತುಸು ಕೆಂಪಾಗುವವರೆಗೆ ಹುರಿಯಬೇಕು. ಹುರಿದ ಮೇಲೆ ಗ್ಯಾಸ್ ಆಫ್ ಮಾಡಿ ಪಕ್ಕದಲ್ಲಿಟ್ಟುಕೊಳ್ಳಿ.

೨. ಬೆಲ್ಲಕ್ಕೆ ಕಾಯಿತುರಿ ಹಾಕಿಕೊಂಡು ಕುದಿಸಿಕೊಳ್ಳಿ. (ಪಾಕವಾಗ ಬೇಕೆಂದಿಲ್ಲ)

೩. ಕುದಿಬಂದ
ಬೆಲ್ಲಕ್ಕೆ ಏಲಕ್ಕಿ ಹುಡಿ, ಡ್ರೈಫ್ರುಟ್ಸ್ ಹುಡಿ/ಕಡಲೇ ಬೀಜದ ಹುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ತೊಳಸಿ, ಗ್ಯಾಸ್ ಆಫ್ ಮಾಡಿ.

೪. ಮೇಲಿನ ಮಿಶ್ರಣಕ್ಕೆ ಹುರಿದಿಟ್ಟುಕೊಂಡಿರುವ ಕಡಲೇ ಹಿಟ್ಟಿನ್ನು ಸೇರಿಸಿ ಚೆನ್ನಾಗಿ ತಿರುಗಿಸಿ, ತುಸು ಬಿಸಿ ಇರುವಾಗಲೇ ಉಂಡೆ ಕಟ್ಟಿ.
ಬೇಕಿದ್ದಲ್ಲಿ ತುಪ್ಪ ಸವರಿದ ಬಟ್ಟಲಿಗೆ ಹೊಯ್ದು, ಕೊಯ್ದು ಹಲ್ವದಂತೆಯೂ ತಿನ್ನಬಹುದು.

~ತೇಜಸ್ವಿನಿ ಹೆಗಡೆ.

Wednesday, February 24, 2016

ತರ ತರ ವಿಧ ವಿಧ ತರಕಾರಿ ಹಶಿಗಳು..

ನಮ್ಮಲ್ಲಿ ಅಂದರೆ ಮಲೆನಾಡಿನಲ್ಲಿ ತಂಬುಳಿಯಷ್ಟೇ ಪ್ರಸಿದ್ಧ ಪ್ರಚಲಿತ ಹಶಿಗಳು. ಹಶಿಗೆ ನೀವು ಒಂದರ್ಥದಲ್ಲಿ ಸಾಲಡ್ ಅಂತಾನೋ ಇಲ್ಲಾ ಮೊಸರು ಬಜ್ಜಿ ಅಂತಾನೂ ಕರೆಯಬಹುದು. (ಇನ್ಯಾವ್ಯಾವ ಹೆಸರುಗಳಿವೆ ಗೊತ್ತಿಲ್ಲ.). ಇಲ್ಲಿ ನಾನು ಬಾಳೆಕಾಯಿ, ಸವತೆಕಾಯಿ, ಬದನೆಕಾಯಿ, ಬಟಾಟೆ, ಹಾಗಲಕಾಯಿ, ಮೆಂತೆಸೊಪ್ಪು, ಬೀಟ್ರೂಟು - ಈ ಕಾಯಿಪಲ್ಲೆಗಳ ಹಶಿಯ ತಯಾರಿಕಾ ವಿಧಾನವನ್ನು ಹೇಳುತ್ತಿದ್ದೇನೆ. ಇವೆಲ್ಲಾ ತಯಾರಿಸಲು ಬಲು ಸುಲಭ, ಸರಳ, ತುಂಬಾ ರುಚಿಕರ, ಆರೋಗ್ಯಕ್ಕೂ ಹಿತಕರ. ಮಾಡಲು ಬೇಕಾಗುವ ಸಾಮಗ್ರಿಗಳೂ ಅತ್ಯಲ್ಪ. ನೀವೂ ಮಾಡಿ, ತಿಂದು, ಹೇಗಿತ್ತು ಎಂದು ಹೇಳಿದರೆ ಹೇಳಿಕೊಟ್ಟ ನನಗೆ ಗುರು ದಕ್ಷಿಣೆ ಸಂದಾಯ ;)

ಹಶಿಗಳ ಪಟ್ಟಿ ತುಸು ಉದ್ದವಿರುವುದರಿಂದ ಇದನ್ನು ಭಾಗ ಒಂದು ಹಾಗೂ ಎರಡರಲ್ಲಿ ವಿಂಗಡಿಸಿದ್ದೇನೆ.

ಭಾಗ -೧

ಸೂಚನೆ: ೧) ಇಲ್ಲಿ ೪-೫ ಜನರಿಗೆ ಸಾಕಾಗುವಷ್ಟು ಪ್ರಮಾಣವನ್ನು ಕೊಡಲಾಗಿದೆ.
 ೨) ಇಲ್ಲಿ ಹೇಳಿರುವ ಎಲ್ಲಾ ಹಶಿಗಳಿಗೂ ಸ್ವಲ್ಪ (ಒಂದು ಮುಷ್ಟಿಯಷ್ಟು) ಕಾಯಿಯನ್ನು ರುಬ್ಬಿ ಹಾಕುತ್ತೇವೆ. ಆದರೆ ಅದು ಅತ್ಯವಶ್ಯಕ ಅಲ್ಲ. ತೆಂಗಿನ ಕಾಯಿ ಇಲ್ಲದೇ ಬರೀ ಮೊಸರಿನಲ್ಲಿ ಮಾಡಿದರೂ ಬಲು ರುಚಿಯಾಗಿರುತ್ತದೆ. ಕೆಲವೊಮ್ಮೆ ಮೊಸರು ಇಲ್ಲದಿದ್ದಾಗ ಬರೀ ಅರ್ಧ ಕಡಿ ಕಾಯಿಯನ್ನೇ ಬೀಸಿ ಹಾಕುವುದೂ ಇದೆ. ಸಾಮಾನ್ಯವಾಗಿ ಮೊಸರು + ತುಸು ಕಾಯಿ ಇದ್ದರೆ ಚೆನ್ನ.  ಅವರವರ ರುಚಿಗೆ ಬಿಟ್ಟಿದ್ದು. ಪ್ರಸ್ತುತ ಇಲ್ಲಿ ತೆಂಗಿನ ತುರಿ ನಾನು ಬಳಸಿಲ್ಲ. ನೀವು ಬೇಕಿದ್ದರೆ ತೆಂಗಿನ ತುರಿಯನ್ನೂ ಬೀಸಿ ಮೊಸರಿಗೆ ಮಿಶ್ರಮಾಡಬಹುದು ಇಲ್ಲಾ ಮೊಸರು ತೀರಾ ಕಡಿಮೆ ಇದ್ದಲ್ಲಿ, ತೆಂಗಿನ ತುರಿಯನ್ನೇ ಜಾಸ್ತಿ ರುಬ್ಬಿ ತೆಂಗಿನ ಹಾಲನ್ನು ಜಾಸ್ತಿ ಹಾಕಬಹುದು. ತೆಂಗಿನ ಹಾಲು ಹಾಕಿದರೆ ಬೇರೆಯೇ ರುಚಿ ಸಿಗುತ್ತದೆ. ಅದೂ ಬಲು ಚೆನ್ನಾಗಿಯೇ ಇರುತ್ತದೆ.

೧) ಬಾಳೆಕಾಯಿ ಹಶಿ


ಬೇಕಾಗುವ ಸಾಮಗ್ರಿಗಳು :-

* ಎರಡು ಮಧ್ಯಮ ಗಾತ್ರದ ಬಾಳೇಕಾಯಿ (ತೀರಾ ದೊಡ್ಡದಿದ್ದರೆ ಒಂದೇ ಸಾಕು ನಾಲ್ಕು ಜನರಿಗೆ)
* ಈರುಳ್ಳಿ - ದೊಡ್ಡದಾದರೆ ಒಂದು, ಚಿಕ್ಕದಿದ್ದಲ್ಲಿ ಎರಡು
* ರುಚಿಗೆ ತಕ್ಕಷ್ಟು ಉಪ್ಪು
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿ ಮೆಣಸು ಅಥವಾ ಒಣ ಕೆಂಪು ಮೆಣಸು (ಖಾರಕ್ಕೆ ತಕ್ಕಂತೇ)
* ದಪ್ಪ ಮೊಸರು - ೪-೫ ಸೌಟು
* ತುಸು ನೀರು (ಬೇಕಿದ್ದಲ್ಲಿ)

ಮಾಡುವ ವಿಧಾನ

* ಮೊದಲು ಬಾಳೇಕಾಯಿಗಳ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ
* ಅದಕ್ಕೆ ತುಸು ಉಪ್ಪು ಹಾಕಿ ಬೇಯುವಷ್ಟು ನೀರು ಸುರಿದು ಗ್ಯಾಸಿನಲ್ಲಿ ಬೇಯಿಸಿಕೊಳ್ಳಿ. ಬಾಳೆಕಾಯಿ ಬಹು ಬೇಗನೆ ಐದು ನಿಮಿಷದೊಳಗೆ ಬೆಂದು ಹೋಗುವುದು.
* ಬೆಂದ ಬಾಳೆಕಾಯಿಯನ್ನು ತಣಿಯಲು ಬಿಡಿ. ಅದು ತಣಿದ ಮೇಲೆ ಬೇಕಿದ್ದರೆ ರುಬ್ಬಿದ ಕಾಯಿ ಹಾಲು + ಮೊಸರು ಸೇರಿಸಿ. ಇಲ್ಲಾ ಹಾಗೇ ಮೊಸರನ್ನು ಹಾಕಿ. ಕಾಯಿ ಹಾಲು ಹಾಕುವುದಿದ್ದರೆ ಮೊಸರಿನ ಪ್ರಮಾಣ ಕಡಿಮೆ ಮಾಡಿ.
* ಉಪ್ಪಿನ ಹದ ನೋಡಿ, ಬೇಕಿದ್ದಲ್ಲಿ ತುಸು ಸೇರಿಸಿಕೊಳ್ಳಿ. ಈ ಮಿಶ್ರಣಕ್ಕೆ ಈರುಳ್ಳಿಗಳನ್ನು ಚಿಕ್ಕದಾಗಿ  ಹೆಚ್ಚಿ ಹಾಕಿ.
* ತದನಂತರ ಮೇಲೆ ಹೇಳಿದ ಪದಾರ್ಥಗಳಿಂದ ಒಗ್ಗರಣೆ ಕೊಟ್ಟು ಮುಚ್ಚಿಡಿ. ಖಾರ ಪ್ರಿಯರಾಗಿದ್ದರೆ ಹಸಿಮೆಣಸು ಅಥವಾ ಒಣಮೆಣಸನ್ನು ಹೆಚ್ಚು ಬಳಸಬಹುದು. ಇನ್ನು ಹಶಿ ತೀರಾ ದಪ್ಪಗಿದೆ ಎಂದೆನಿಸಿದರೆ ತುಸು ನೀರನ್ನು ಬೆರೆಸಬಹುದು.

ಬಿಸಿ ಬಿಸಿ ಅನ್ನಕ್ಕೆ ಗಟ್ಟಿಯಾಗಿ ಹಶಿಯನ್ನು ಕಲಸಿ ತಿಂದರೆ ಬೇರೇನೂ ಪದಾರ್ಥ ಬೇಕಾಗದು.

~~~~~

೨) ಸವತೆಕಾಯಿ ಹಶಿ


ಬೇಕಾಗುವ ಸಾಮಗ್ರಿಗಳು :-

* ಎರಡು ಮಧ್ಯಮ ಗಾತ್ರದ ಸವತೆಕಾಯಿ (ತೀರಾ ಚಿಕ್ಕದಿದ್ದಲ್ಲಿ ಮೂರೂ ಹಾಕಬಹುದು.)
*  ರುಚಿಗೆ ತಕ್ಕಷ್ಟು ಉಪ್ಪು
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿ ಮೆಣಸು ಅಥವಾ ಒಣ ಕೆಂಪು ಮೆಣಸು (ಖಾರಕ್ಕೆ ತಕ್ಕಂತೇ), ಚಿಟಿಕೆ ಅರಿಶಿನ.
* ದಪ್ಪ ಮೊಸರು - ೪-೫ ಸೌಟು

ಮಾಡುವ ವಿಧಾನ

* ಇದು ಮತ್ತೂ ಸರಳವಾಗಿದೆ. ಮೊದಲು ಸವತೆಯಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಸಿಪ್ಪೆ ಬೇಡದಿದ್ದರೆ, ಅದನ್ನು ಮೇಲಿಂದ ಚೂರು ತೆಗೆದುಕೊಳ್ಳಬಹುದು. ಸವತೆಯ ತುತ್ತ ತುದಿಯನ್ನು ಸ್ವಲ್ಪ ತೆಗೆದು ರುಚಿ ನೋಡಿಕೊಳ್ಳಿ. ಒಮ್ಮೊಮ್ಮೆ ಸವತೆಕಾಯಿ ಬಲು ಕಹಿಯಾಗಿರುತ್ತದೆ. ಕಹಿಯಿಲ್ಲದಿದ್ದಲ್ಲಿ ಚಿಕ್ಕದಾಗಿ ಹೆಚ್ಚಿಕೊಳ್ಳಿ.
* ಬಾಣಲೆಗೆ ಎಣ್ಣೆ ಹಾಕಿ ಮೇಲೆ ಹೇಳಿದ ಪದಾರ್ಥಗಳಿಂದ ಒಗ್ಗರಣೆ ಹಾಕಿಕೊಳ್ಳಿ.
* ಇನ್ನೇನು ಒಗ್ಗರಣೆ ಬೆಂದಿತು ಎನ್ನುವಾಗ ಚಿಟಿಕೆ ಅರಿಶಿನ ಹಾಕಿ, ಹೆಚ್ಚಿದ ಸವತೆಯನ್ನೂ ಹಾಕಿ ಚೆನ್ನಾಗಿ ಒಮ್ಮೆ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ ಬಿಡಿ. ಒಂದೊಮ್ಮೆ ನಿಮಗೋ, ನಿಮ್ಮ ಮಕ್ಕಳಿಗೋ ಶೀತವಿದ್ದಲ್ಲಿ, ತುಸು ಹೊತ್ತು ಹೆಚ್ಚು ಸವತೆಯನು ಬಿಸಿಯಲ್ಲೇ ಬಾಡಿಸಿದರೆ, ಅದರ ಶೀತದ ಅಂಶ ಹೋಗಿ ಹೆಚ್ಚು ತೊಂದರೆ ಆಗದು. ಇಲ್ಲದಿದ್ದರೆ ಹೆಚ್ಚು ಬಾಡಿಸಬೇಕೆಂದಿಲ್ಲ.
* ಒಗ್ಗರಿಸಿದ ಸವತೆ ಮಿಶ್ರಣ ಸಂಪೂರ್ಣ ತಂಪಾದ ಮೇಲೆ ಅದಕ್ಕೆ ಮೊಸರನ್ನು ಹಾಕಿ, ಉಪ್ಪು ಬೇಕಿದ್ದಲ್ಲಿ ಸೇರಿಸಿ ಊಟದ ಜೊತೆ ಸವಿಯಿರಿ. (ಇಲ್ಲೂ ಕಾಯಿ ಹಾಲು ಬೇಕಿದ್ದಲ್ಲಿ ಹಾಕಿಕೊಳ್ಳಬಹುದು.)
ಸವತೆಯಲೇ ನೀರಿನಂಶ ಧಾರಾಳವಿರುವುದರಿಂದ ಇದಕ್ಕೆ ಮತ್ತೆ ನೀರು ಸೇರಿಸುವ ಅಗತ್ಯವಿರುವುದಿಲ್ಲ.

~~~~

೩) ಬದನೆಕಾಯಿ ಹಶಿ


 ಬೇಕಾಗುವ ಸಾಮಗ್ರಿಗಳು :-

* ಎರಡು ಮಧ್ಯಮ ಗಾತ್ರದ ಬದನೆಕಾಯಿ (ತೀರಾ ದೊಡ್ಡದಿದ್ದರೆ ಒಂದೇ ಸಾಕು.. ತುಂಬಾ ಚಿಕ್ಕದಿದ್ದರೆ ನಾಲ್ಕೈದು ಬೇಕು)
* ಈರುಳ್ಳಿ - ತುಂಬಾ ದೊಡ್ಡದಾದರೆ ಒಂದು, ಚಿಕ್ಕದಿದ್ದಲ್ಲಿ ಎರಡು
* ರುಚಿಗೆ ತಕ್ಕಷ್ಟು ಉಪ್ಪು
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿ ಮೆಣಸು ಅಥವಾ ಒಣ ಕೆಂಪು ಮೆಣಸು (ಖಾರಕ್ಕೆ ತಕ್ಕಂತೇ), ಚಿಟಿಗೆ ಅರಿಶಿನ
* ದಪ್ಪ ಮೊಸರು - ೪-೫ ಸೌಟು
* ತುಸು ನೀರು (ಬೇಕಿದ್ದಲ್ಲಿ)

ತಯಾರಿಸುವ ವಿಧಾನ

ಬದನೆಕಾಯಿ ಹಶಿಯನು ನಾವು ಎರಡು ವಿಧದಲ್ಲಿ ಮಾಡುತ್ತೇವೆ.

ವಿಧಾನ ೧ :-

* ಬದನೆಕಾಯಿಯನ್ನು ತೊಳೆದು, ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹೆಚ್ಚಿಕೊಂಡ ಬದನೆಕಾಯಿಯನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿಟ್ಟಿರಿ. ಹೀಗೆ ಮಾಡುವುದರಿಂದ ಬದನೇಕಾಯಿ ಕಪ್ಪಾಗುವುದನ್ನು ತಡೆಯಬಹುದು ಮತ್ತು ಅದರ ಚೊಗರಿನ ರುಚಿಯೂ ಮಾಯವಾಗುವುದು.
* ನೀರಿನಲ್ಲಿ ನೆನೆಸಿಟ್ಟಿ ಬದನೆ ಚೂರುಗಳನ್ನು ಹಿಂಡಿ ತೆಗೆದು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. (ನೆನೆಸಿಟ್ಟ ನೀರನ್ನು ಚೆಲ್ಲಬೇಕು.) ಅದಕ್ಕೆ ಬೇಯಲಷ್ಟೇ ಸಾಕಾಗುವಷ್ಟು ನೀರನ್ನು ಸೇರಿಸಿ, ಇದಕ್ಕೆ ತುಸು ಉಪ್ಪು ಹಾಕಿ ಗ್ಯಾಸಿನಲ್ಲಿ ಬೇಯಿಸಿಕೊಳ್ಳಿ.
* ಬೇಯಿಸಿಕೊಂಡ ಮಿಶ್ರಣವು ತಣಿದ ಮೇಲೆ ಅದಕ್ಕೆ ಕಾಯಿ ಹಾಲು (ಬೇಕಿದ್ದರೆ), ಮೊಸರು ಹಾಗೂ ಈರುಳ್ಳಿ ಹೆಚ್ಚಿ ಹಾಕಿ ಚೆನ್ನಾಗಿ ಕಲಸಿ.
* ಈ ಮಿಶ್ರಣಕ್ಕೆ ಮೇಲೆ ಹೇಳಿದ ಪದಾರ್ಥಗಳಿಂದ ಒಗ್ಗರಣೆ ಕೊಟ್ಟರೆ ರುಚಿ ಶುಚಿಯಾದ ಹಶಿ ರೆಡಿ.

ವಿಧಾನ - ೨

* ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಹೆಚ್ಚಿಟ್ಟಿದ್ದಕ್ಕೆ ತುಸು ಉಪ್ಪು ಹಾಗೂ ಅರಿಶಿನ ಹಾಕಿ ತುಸು ಹೊತ್ತು ಕಲಸಿಡಿ. (ನೀರು ಹಾಕಬೇಡಿ. ಉಪ್ಪು ಕರಗಿ ನೀರಾಗಿ ಚೊಗರನ್ನು ತೆಗೆಯುವುದರಿಂದ, ನೀರು ಅನಗತ್ಯ. ಅಲ್ಲದೇ ತದನಂತರ ಹುರಿಯಬೇಕಾಗಿರುವುದರಿಂದ ನೀರಿನಂಶವಿರಬಾರದು)
* ಬಾಣಲೆಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಸಾಸಿವೆ, ಹಸಿಮೆಣಸು ಅಥವಾ ಒಣಮೆಣಸು, ಇಂಗು ಹಾಕಿ ಒಗ್ಗರಿಸಿಕೊಳ್ಳಿ. (ಈ ಒಗ್ಗರಣೆಗೆ ಅರಿಶಿನ ಬೇಡ.. ಮೊದಲೇ ಮೇಲೆ ಹಾಕಿರುವುದರಿಂದ)
* ಒಗ್ಗರಣೆ ಬೆಂದಂತೇ ಉಪ್ಪು+ಅರಿಶಿನ ಹಾಕಿಟ್ಟ ಬದನೆಕಾಯಿ ಚೂರುಗಳನ್ನು ಹಿಂಡಿ ಒಗ್ಗರಣೆಗೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. (ಇಲ್ಲಿ ಹುರಿಯುವುದು ಇರುವುದರಿಂದ ಒಗ್ಗರಣೆಗೆ ತುಸು ಜಾಸ್ತಿ ಎಣ್ಣೆ ಬೇಕಾಗುವುದು. ನೆನಪಿರಲಿ.)
* ಬದನೆಕಾಯಿ ಚೂರುಗಳು ಒಗ್ಗರಣೆಯಲ್ಲೇ ಹುರಿದು ಬೆಂದ ಮೇಲೆ ಸಂಪೂರ್ಣ ತಣಿಯಲು ಬಿಡಿ.
* ಈ ಮಿಶ್ರಣಕ್ಕೆ ಮೊಸರು, ಈರುಳ್ಳಿ, ಬೇಕಿದ್ದರೆ ತೆಂಗಿನ ತುರಿ ಬೀಸಿದ ಕಣಕು ಹಾಕಿ, ಉಪ್ಪು ಬೇಕಿದ್ದಲ್ಲಿ ಅದನ್ನೂ ಸೇರಿಸಿ, ದಪ್ಪಗಾಗಿದ್ದಲ್ಲಿ ನೀರನ್ನೂ ಹಾಕಿಕೊಂಡು ಚೆನ್ನಾಗಿ ಕಲಸಿ. ಬಿಸಿ ಬಿಸಿ ಅನ್ನಕ್ಕೆ ಹತ್ತಕೆ (ಗಟ್ಟಿಯಾಗಿ) ಕಲಸಿ ತಿಂದರೆ ಕೈ ಚಪ್ಪರಿಸುವುದು. ಖಾರ ಬೇಕಾದವರು ತುಸು ಹೆಚ್ಚು ಮೆಣಸನ್ನು ಒಗ್ಗರಣೆಗೆ ಸೇರಿಸಿಕೊಳ್ಳಬಹುದು.

ಸೂಚನೆ :-  ಈ ಮೇಲಿನ ಎರಡು ವಿಧಾನಗಳಲ್ಲದೇ, ಇನ್ನೂ ಒಂದು ವಿಧಾನವಿದೆ. ಬದನೇಕಾಯಿ ಉದ್ದ ಗಾತ್ರದಲ್ಲಿದ್ದರೆ, ಗ್ಯಾಸಿನಲ್ಲಿಟ್ಟು ಬೇಯಿಸಿಕೊಳ್ಳುವುದು. (ಬೇಯಿಸಲಿಡುವ ಮುನ್ನ ಅದಕ್ಕೆ ನಾಲ್ಕೈದು ಕಡೆ ತೂತು ಮಾಡುವುದು. ಇದರಿಂದ ಅದು ಚೆನ್ನಾಗಿ ಬೇಯುವುದು). ಬದನೆಕಾಯಿ ಚೆನ್ನಾಗಿ ಬೆಂದ ಮೇಲೆ ಅದರ ಸಿಪ್ಪೆ ಸುಲಿದು ಸೌಟಲ್ಲಿ ಅದನ್ನು ಕೊಚ್ಚಿ, ಪೇಸ್ಟ್ ತರಹ ಮಾಡಿ, ಆ ಮಿಶ್ರಣಕ್ಕೆ ಈರುಳ್ಳಿ, ಮೊಸರು, ಉಪ್ಪು ಹಾಕಿ ಮೇಲಿನ ಒಗ್ಗರಣೆ ಸಾಮಗ್ರಿಗಳಿಂದ ಒಗ್ಗರಿಸಿದರೆ ಇದು ಬೇರೆಯೇ ಒಂದು ಟೇಸ್ಟ್ ನೀಡುವುದು. ಸುಟ್ಟ ಬದನೆಕಾಯಿ ಹಶಿ ಎಂದೇ ಪ್ರಸಿದ್ಧಿಯೂ ಇದೆ :)

ನೆನಪಿರಲಿ :- ಪ್ರತಿಯೊಂದು ಹಶಿಗೂ ಅದನ್ನು ಹುರಿದೋ ಇಲ್ಲಾ ಬೇಯಿಸಿಯೋ ಮಾಡುವಾಗ, ಅದು ಸಂಪೂರ್ಣ ತಣಿದ ವಿನಃ ಮೊಸರು+ಕಾಯಿ ಸೇರಿಸಬೇಡಿ. ಬಿಸಿ ಇರುವಾಗಲೇ ಸೇರಿಸಿದರೆ ತುಸು ಅಡ್ಡ ವಾಸನೆ ಹೊಂದಿ ಕೆಡುವ ಸಂಭವ ಹೆಚ್ಚಾಗುವುದು.

ಸರಿ.. ಈಗ ಇವಿಷ್ಟು ಹಶಿಯನ್ನು ಈ ವಾರದಲ್ಲಿ ಮಾಡಿ ತಿಂದು ತೇಗಿ, ರಿಸಲ್ಟ್ ನನಗೆ ಕೊಟ್ಟ ಮೇಲೆ ಭಾಗ -೨ ನ್ನು ರಿಲೀಸ್ ಮಾಡಲಾಗುವುದು. :)

ಚಿತ್ರಗಳ ಕೃಪೆ : ಗೂಗಲಣ್ಣ.

~ತೇಜಸ್ವಿನಿ ಹೆಗಡೆ


Tuesday, June 30, 2015

ರುಚಿಕರ ಹಾಗೂ ಆರೋಗ್ಯಕರವಾದ ಗೋಧಿ ಹಪ್ಪಳ


ಇದು ನನ್ನಮ್ಮನ ಸ್ಪೆಷಲ್ ರೆಸೆಪಿ :) ಮೈದಾ ಹಿಟ್ಟು ಯಾವುದೇ ಕಾರಣಕ್ಕೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಹಪ್ಪಳಕ್ಕೆ ಉದ್ದೂ ಬೇಕಾಗಿಲ್ಲ. ಹಾಗಾಗಿ ತಯಾರಿಸಲೂ ಸುಲಭ, ಆರೋಗ್ಯಕ್ಕೂ ಹಿತರ, ತಿನ್ನಲೂ ಬಲು ರಿಚಿಕರವಾದ ಹಪ್ಪಳವಿದು. ಇಷ್ಟವಾದವರು, ಹಪ್ಪಳ ತಯಾರಿಸಿ ತಿಂದು ನಿಮ್ಮ ಅನುಭವವನ್ನು ಹಂಚಿಕೊಂಡರೆ ನನಗೂ ಬಲು ಸಂತಸವಾಗುವುದು :)

Copyright - Tejaswini Hegde

ಬೇಕಾಗುವ ಸಾಮಗ್ರಿಗಳು

೧) ಗೋಧಿ ಹಿಟ್ಟು - (ನಾನು ಬಳಸಿದ್ದು ಆಶೀರ್ವಾದ್ ಗೋಧಿ ಹಿಟ್ಟು.. ಲೂಸ್ ಪ್ಯಾಕೆಟ್ ಆಗಿದ್ರೆ ಏನಾದ್ರೂ ಬೆರಕೆ ಮಾಡಿರುವ ಸಾಧ್ಯತೆ ಇರುವುದರಿಂದ ಹೇಗಾಗುವುದೋ ತಿಳಿಯದು.). ೧/೨ ಕೆ.ಜಿ.
೨) ಜೀರಿಗೆ - ದೊಡ್ಡ ಚಮಚವಾದರೆ ೧ ಚಮಚ. ಟೀ ಸ್ಪೂನ್ ಆದರೆ ೨ ಚಮಚ
೩) ಓಂ ಕಾಳು - ೧/೨ ಚಮಚ.
[ಒಂದೊಮ್ಮೆ ಜೀರಿಗೆ ಇಷ್ಟ ಪಡದವರು ಕೇವಲ ಓಂ ಕಾಳು ಮಾತ್ರ ಉಪಯೋಗಿಸುವಂತಿದ್ದರೆ ದೊಡ್ಡ ಚಮಚವಾದರೆ ೧ ಚಮಚ ಇಲ್ಲಾ ಟೀ ಸ್ಪೂನ್ ಆದರೆ ೨ ಚಮಚ ಉಪಯೋಗಿಸಿ.)
೪) ಅಚ್ಚ ಖಾರದ ಪುಡಿ - ಖಾರಕ್ಕೆ ತಕ್ಕಷ್ಟು
೫) ಉಪ್ಪು- ರುಚಿಗೆ ತಕ್ಕಷ್ಟು
೭) ಸಕ್ಕರೆ (ಬೇಕಿದ್ದರ ಮಾತ್ರ) - ೧/೨-೧ ಟೀ ಸ್ಪೂನ್.
೬) ನೀರು - ಹಿಟ್ಟನ್ನು ಕಲಸುವಾಗ ಅದು ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ಗಂಟು ಗಂಟಾಗದಂತೇ ಆ ಹದದಲ್ಲಿ ಕಲಸುವಷ್ಟು ನೀರು ಹಾಕಿಕೊಳ್ಳಿ. ಸ್ವಲ್ಪ ಸ್ವಲ್ಪ ಸೇರಿಸುತ್ತಾ ಹೋಗಬೇಕು.
೭) ಕೊಬ್ಬರಿ ಎಣ್ಣೆ ಅಥವಾ ಯಾವುದೇ ಅಡುಗೆ ಎಣ್ಣೆ - ಕೈಗಳಿಗೆ ಸವರಿಕೊಳ್ಳುವಷ್ಟು.

ಮಾಡುವ ವಿಧಾನ

* ಮೊದಲಿಗೆ ಒಂದು ಅಗಲವಾದ ಬಾಣಲೆಯಾಕಾರದ ಪಾತ್ರೆಯೊಳಗೆ ಗೋಧಿ ಹಿಟ್ಟನ್ನು ಹಾಕಿಕೊಳ್ಳಿ. ಇದಕ್ಕೆ ಖಾರದ ಪುಡಿ, ಉಪ್ಪು, ಓಂಕಾಳು, ಜೀರಿಗೆ (ಜೀರಿಗೆ ಬೇಡದವರು ಮೇಲೆ ಹೇಳಿರುವಂತೇ ಬರಿಯ ಓಂಕಾಳು ಸೇರಿಸಬಹುದು.), ಸಕ್ಕರೆ - ಇವುಗಳನ್ನೆಲ್ಲಾ ಸೇರಿಸಿ.

* ಈ ಮಿಶ್ರಣಕ್ಕೆ ಮೇಲೆ ಹೇಳಿರುವಂತೇ ಸ್ವಲ್ಪ ಸ್ವಲ್ಪವೇ ನೀರುನ್ನಾ ಸೇರಿಸುತ್ತಾ, ಗಂಟು ಗಂಟಾಗದಂತೇ ಕದಡುತ್ತಾ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ತನ್ನಿ.

* ಚೆನ್ನಾಗಿ ಕದಡಿರುವ ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹೊಯ್ದು, ಇಡ್ಲಿ ದಳ್ಳೆಯಲ್ಲಿಟ್ಟು ೨೦-೩೦ ನಿಮಿಷಗಳವರೆಗೆ ಬೇಯಿಸಿ.

* ಚೆನ್ನಾಗಿ ಬೆಂದ ಹಿಟ್ಟನ್ನು, ನಾವು ಕೈಯಾಡಿಸುವಷ್ಟು ಬಿಸಿ ಇರುವಾಗಲೇ ಸ್ವಲ್ಪ ಸ್ವಲ್ಪ ದಳ್ಳೆಯಿಂದ ತೆಗೆದು (ಒಂದೇ ಸಲ ಎಲ್ಲಾ ಹಿಟ್ಟನ್ನು ಹೊರ ತೆಗೆದಿಟ್ಟುಕೊಂಡರೆ, ಗಾಳಿಯಾಡಿ ಹಿಟ್ಟು ತಣ್ಣಗಾಗಿ, ಗಟ್ಟಿಯಾಗಿ ಬಿಡುತ್ತದೆ.) ಚೆನ್ನಾಗಿ ನಾದಿಕೊಳ್ಳಬೇಕು.

Copyright - Tejaswini Hegde
* ಕೈಗಳಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನೋ ಇಲ್ಲಾ ನೀವು ಬಳಸುವ ಯಾವುದೇ ಅಡುಗೆಯ ಎಣ್ಣೆಯನ್ನೂ ತುಸು ಸವರಿಕೊಳ್ಳಿ. ನಾದಿದ ಹಿಟ್ಟನ್ನು ಪುರಿ/ಚಪಾತಿ ಹಿಟ್ಟಿನ ಉಂಡೆಯಂತೇ ಸಣ್ಣ ಉಂಡೆಗಳನ್ನಾಗಿಸಿ, ಪುರಿಗೆ ಲಟ್ಟಿಸುವಷ್ಟು ದೊಡ್ಡದಾಗಿ ಲಟ್ಟಿಸಿ. (ಚಿತ್ರದಲ್ಲಿ ತೋರಿಸಿದಷ್ಟು ಗಾತ್ರದಲ್ಲಿ)

* ಈ ಲಟ್ಟಿಸಿದ ಹಪ್ಪಳಗಳನ್ನು ೨-೩ ಬಿಸಿಲಿಗೆ ಇಟ್ಟರೆ ಸಾಕಾಗುವುದು. ಚೆನ್ನಾದ ಬಿಸಿಲು ೨ ಸಿಕ್ಕರೂ ಸಾಕಾಗುತ್ತದೆ. ಮೊದಲ ದಿನವೇ ಅದು ಗರಿ ಗರಿಯಾಗಿ ಬಿಟ್ಟಿರುತ್ತದೆ (ಬಿಸಿಲು ೨-೩ ಗಂಟೆ ಸಿಕ್ಕರೂ..!).

* ಗರಿ ಗರಿಯಾದ ಹಪ್ಪಳಗಳನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. ಮಳೆಗಾಲದಲ್ಲೋ ಇಲ್ಲಾ ಚಳಿಗಾಲದಲ್ಲೋ ಒಂದೊಂದೇ ಹಪ್ಪಳಗಳನ್ನು ಸುಟ್ಟು ಇಲ್ಲಾ ಕರಿದು ತಿಂದರೆ ಅದರ ಮಜವೇ ಬೇರೆ.

~ತೇಜಸ್ವಿನಿ ಹೆಗಡೆ.