Thursday, November 08, 2018

ಗೋವೆಕಾಯಿ ಕಡುಬು

ಕೃಪೆ: ಅಂತರ್ಜಾಲ

ಗೋವೆಕಾಯಿಗೆ ಚೀನಿಕಾಯಿ, ಸಿಹಿಗುಂಬಳ ಕಾಯಿ ಎಂಬಿತ್ಯಾದಿ ಹೆಸರುಗಳಿವೆ. ಗೋವೆಕಾಯಿಯಲ್ಲಿ ವಿಟಮಿನ್ ಎ ಬಹಳ ಹೆಚ್ಚಿರುತ್ತದೆ. ಅಲ್ಲದೇ, ಇದರೊಳಗಿರುವ ಪೊಟಾಶಿಯಮ್ ಮತ್ತು ಬೀಟಾ ಕೆರೋಟಿನ್ ಕಣ್ಣಿಗೆ, ಹೃದಯಕ್ಕೆ, ರಕ್ತದೊತ್ತಡಕ್ಕೆ, ಚರ್ಮದ ಹೊಳಪಿಗೆ ಹೀಗೆ ಗೋವೆಕಾಯಿ ಬಹು ಉಪಯೋಗಿಯಾಗಿದೆ. ದೀಪಾವಳಿಯ ದಿವಸ ಬಹುತೇಕ ಹವ್ಯಕರ ಮನೆಗಳಲ್ಲಿ ಇದರದ್ದೇ ಕಡುಬನ್ನು ಸಿಹಿ ತಿಂಡಿಯಾಗಿ ಮಾಡುತ್ತಾರೆ. ಇದನ್ನು ತಯಾರಿಸಲು ಬೇಕಾಗುವ ವಸ್ತುಗಳು ಬಹಳ ಕಡಿಮೆ. ಆದರೆ ಮಾಡುವ ಹದ ಚೆನ್ನಾಗಿ ಗೊತ್ತಿರಬೇಕಾಗುತ್ತದೆ. ಗೋವೆಕಾಯಿಯ ಕಡುಬಿಗೆ ಹಸುವಿನ ತುಪ್ಪ ಹಾಕಿ ತಿಂದರೆ ವಾಯು ಸಮಸ್ಯೆ ಆಗದು, ಹೊಟ್ಟೆಗೂ ತಂಪು, ಜೀರ್ಣವಾಗುವುದು ಸುಲಭವಾಗಿ. ಅಲ್ಲದೇ ಮೊಸರಿನ ಜೊತೆಗೂ ಸವಿಯಬಹುದು.. ಇದರ ಮಜವೇ ಬೇರೆ. ಸಿಹಿ ಪ್ರಿಯರು ಇದಕ್ಕೆ ಜೇನುತುಪ್ಪ, ತುಪ್ಪ, ಸಕ್ಕರೆ, ಬೆಲ್ಲ ಎಲ್ಲವನ್ನೂ ಸುರಿದುಕೊಂಡು ತಿನ್ನುವುದೂ ಇದೆ. ಈಗ ಇದನ್ನು ತಯಾರಿಸುವ ವಿಧಾನವನ್ನು ನೋಡೋಣ. ನೀವೂ ಸಿಹಿಗಡುಬನ್ನು ತಯಾರಿಸಿಕೊಂಡು ಮೆದ್ದು ಹೇಗಾಗುವುದು ಎಂಬುದನ್ನೂ ಪ್ರತಿಕ್ರಿಯೆಯಲ್ಲಿ ತಿಳಿಸಿರಿ


**********************
ಗೋವೆಕಾಯಿ ಕಡುಬು
ಬೇಕಾಗುವ ಸಾಮಗ್ರಿಗಳು
(ಸಾಧಾರಣ ದೊಡ್ಡ ಗಾತ್ರದ ಐದು ಕಡುಬಿನ ಪ್ರಮಾಣಕ್ಕೆ)
·        ಅಕ್ಕಿ – ೧ ಲೋಟ
·        ಚೀನಿಕಾಯಿ ಅಥವಾ ಗೋವೆಕಾಯಿ ಹೋಳುಗಳು – ಎರಡೂವರೆ ಲೋಟ
·        ಬೆಲ್ಲ – ಊರಿನ ಹದಾ ಗಟ್ಟಿ ಬೆಲ್ಲವಾದರೆ ಒಂದೂಕಾಲು ಲೋಟ. ಅಂಗಡಿಯ ಅಚ್ಚುಬೆಲ್ಲವಾದರೆ, ಅದನ್ನು ಕುಟ್ಟಿ ಪುಡಿಮಾಡಿಕೊಂಡು ಒಂದೂವರೆ ಲೋಟ ಹಾಕಬೇಕು.
·        ಕಾಯಿ ತುರಿ – ೧/೨ ಭಾಗ
·        ಏಲಕ್ಕಿ – ಪರಿಮಳಕ್ಕೆ ತಕ್ಕಂತೆ
·        ಬಾಳೆ ಎಲೆಗಳು – ಉದ್ದ ಗಾತ್ರ ಬಾಳೆಯೆಲೆ ೩ (ಒಂದು ಬಾಳೆಯೆಲೆಯಲ್ಲಿ ಎರಡು ಕಡುಬನ್ನು ಹಚ್ಚಬಹುದು ಇಲ್ಲಾ ಅದನ್ನು ತುಂಡು ಮಾಡಿಕೊಂಡು ಬೇರೆಬೇರೆಯಾಗೂ ಹಚ್ಚಬಹುದು.)

ಮಾಡುವ ವಿಧಾನ
೧. ಮೊದಲು ಅಕ್ಕಿಯನ್ನು ೪ ಗಂಟೆ ನೆನೆಹಾಕಬೇಕು.
೨. ನೆನೆದ ಅಕ್ಕಿಯನ್ನು ಮಂದವಾಗಿ ಅಂದರೆ ಜಾಸ್ತಿ ನೀರು ಹಾಕದೆ ಗಟ್ಟಿಯಾಗಿ ಮತ್ತು ನುಣ್ಣಗೆ ಕಡೆದಿಟ್ಟುಕೊಳ್ಳಬೇಕು. ಅಕ್ಕಿಯನ್ನು ಕಡೆಯುವಾಗಲೇ ಏಲಕ್ಕಿಯನ್ನೂ ಅದಕ್ಕೇ ಹಾಕಿಬಿಡುವುದು.
೩. ಗೋವೆಕಾಯಿಯನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳುವುದು.
೪. ಬೆಲ್ಲವನು ದಪ್ಪ ತಳದ ಪಾತ್ರೆಗೆ ಹಾಕಿ ಕುದಿಸುವುದು.
೫. ಬೆಲ್ಲ ಕುದಿ ಬರುತ್ತಿರುವಂತೇ, ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಗೋವೆಕಾಯಿಯ ಹೋಳು ಮತ್ತು ಅರ್ಧಗಡಿ ತೆಂಗಿನ ಕಾಯಿ ತುರಿಯನ್ನು ಹಾಕಿ ಹತ್ತು ನಿಮಿಷ ಕುದಿಸುವುದು.
೬. ಈ ಮಿಶ್ರಣಕ್ಕೀಗ ಬೀಸಿಟ್ಟುಕೊಂಡಿರುವ ಗಟ್ಟಿ ಅಕ್ಕಿ ಹಿಟ್ಟನ್ನು ಒಂದು ಕೈಯಿಂದ ಹಾಕುತ್ತಾ ಮತ್ತೊಂದು ಕೈಯಲ್ಲಿ ತೊಳೆಸುತ್ತಲೇ ಇರಬೇಕು. ಪೂರ್ತಿ ಅಕ್ಕಿಹಿಟ್ಟನ್ನು ಹಾಕಿ ಕೊಂಡು ಆಮೇಲೆ ಅದನ್ನು ತೊಳೆಸಲು ಹೋದರೆ ಅದು ಗಟ್ಟಿಯಾಗಿಬಿಡುವುದು. ಮೊದಮೊದಲು ಇದು ಕಷ್ಟವಾದರೆ, ಸಹಾಯಕ್ಕೊಬ್ಬರು ಬಳಿ ಇದ್ದರೆ, ಒಬ್ಬರು ಹಿಟ್ಟನ್ನು ಸುರಿಯುತ್ತಾ ಹೋದರೆ ಮತ್ತೊಬ್ಬರು ಬಿಡದೇ ತೊಳೆಸುತ್ತಾ ಹೋಗುವುದು ಒಳ್ಳೆಯದು. ಹೀಗೆ ತೊಳೆಸುತ್ತಾ ಹೋದಂತೆ ಮಿಶ್ರಣ ಮಣ್ಣಿಯ ಹದಕ್ಕೆ ಬಂದು ಮುದ್ದೆಯಾಗುವುದು. ಆಗ ಒಲೆಯನ್ನಾರಿಸಿಬಿಡುವುದು.
೭. ಬಾಳೆ ಎಲೆಗಳನ್ನು ಒಲೆಯಲ್ಲಿ ತುಸು ಬಾಡಿಸಿಟ್ಟುಕೊಳ್ಳುವುದು.
೮. ತುಸು ತಣಿದ ಮೇಲೆ ಮುದ್ದೆಯನ್ನು ಕೈಯಲ್ಲಿ ತೆಗೆದುಕೊಂಡು ತುಸು ಬಾಡಿಸಿಟ್ಟುಕೊಂಡಿರುವ ಬಾಳೆ ಎಲೆಯ ಮೇಲೆ ಬೇಕಾದ ಆಕಾರಕ್ಕೆ ಹಚ್ಚಿ, ಅದನ್ನು ನಾಲ್ಕೂ ಬದಿಯಿಂದ ಮಡಚುವುದು.
೯. ಇದನ್ನು ಇಡ್ಳಿ ದಳ್ಳೆಯಲ್ಲಿಟ್ಟು ಬೇಯಿಸುವುದು. ಇದು ಬೇಯಲು ಸುಮಾರು ಒಂದು ತಾಸು ಬೇಕಾಗುವುದು.
೧೦. ಹದವಾಗಿ ಬೆಂದ ಬೆಲ್ಲದ ಗೋವೆಕಾಯಿ ಸಿಹಿಗಡುಬನ್ನು ತುಪ್ಪದ ಜೊತೆಗೆ ಅಥವಾ ಮೊಸರಿನ ಜೊತೆಗೆ ಮೆಲ್ಲಬಹುದು. ಕೆಲವರು ಇದಕ್ಕೆ ಜೇನುತುಪ್ಪ, ಬೆಲ್ಲ, ತುಪ್ಪ ಎಲ್ಲವನ್ನೂ ಹಾಕಿಕೊಂಡು ತಿನ್ನುವುದೂ ಇದೆ.

ರೆಸಿಪಿ ಕೃಪೆ : ನನ್ನ ಅಮ್ಮ ಶ್ರೀಮತಿ ಜಯಲಕ್ಷ್ಮೀ ಭಟ್

~ತೇಜಸ್ವಿನಿ ಹೆಗಡೆ

Friday, August 31, 2018

ನುಗ್ಗೆ ಸೊಪ್ಪಿನ ತಂಬುಳಿ



ನಮ್ಮ ಸುತ್ತ ಮುತ್ತಲು ಬೆಳೆಯುವ, ನಾವು ಮನೆಯಲ್ಲೇ ಬೆಳೆಸಬಹುದಾದ ಅನೇಕ ಸೊಪ್ಪುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿರುತ್ತವೆ ಮತ್ತು ಅವುಗಳ ಪದಾರ್ಥಗಳನ್ನೂ ತಿನ್ನಲೂ ರುಚಿಕರವಾಗಿರುವುದು.

ನುಗ್ಗೆ ಸೊಪ್ಪು ಎಲ್ಲೆಡೆ ಸರ್ವೇಸಾಮಾನ್ಯವಾಗಿ ಸಿಗುವಂಥ ಬಹೋಪಯೋಗಿ ಸೊಪ್ಪು. ಹಲವು ವಿಟಮಿನ್ನುಗಳ ಆಗರವಿದು. ನರ ದೌರ್ಬಲ್ಯಕ್ಕೆ, ರಕ್ತ ಹೀನತೆಗೆ, ರಕ್ತ ಶುದ್ಧಿಗೆ, ಹಾಲೂಡಿಸುವ ತಾಯಂದಿರಿಗೆ, ಮಲಬದ್ಧತೆಗೆ, ಅಧಿಕ ರಕ್ತದೊತ್ತಡದ ನಿವಾರಣೆಗೆ ಹೀಗೆ ಹಲವು ರೀತಿಯ ದೈಹಿಕ ಸಮಸ್ಯೆಗಳಿಗೆ ರಾಮಬಾಣ ಈ ಸೊಪ್ಪು. ಇದರ ತಂಬುಳಿ, ಚಟ್ನೆ, ಸಾಂಬಾರು, ಪಲ್ಯ, ಬಜೆ ಎಲ್ಲವೂ ತಿನ್ನಲು ಚೆನ್ನಾಗಿರುತ್ತವೆ. ಪ್ರಸ್ತುತ ನಾನು ಇದರ ತಂಬುಳಿ ತಯಾರಿಸುವ ವಿಧಾನವನ್ನು ವಿವರಿಸುತ್ತಿದ್ದೇನೆ. ಸಾಂಬಾರಿನೊಳಗಿರುವ ಸೊಪ್ಪು ಹೆಚ್ಚು ಬೆಂದುಬಿಟ್ಟಿರುತ್ತದೆ ಮತ್ತು ನಾವು ಹೆಚ್ಚೆಂದರೆ ಒಂದೆರಡು ಸೌಟು ಸೇವಿಸಬಹುದೇನೋ. ಆದರೆ ತಂಬುಳಿಯಲ್ಲಿ ಇದರ ಅಂಶಯ ಬಹಳ ಅಧಿಕವಾಗಿರುತ್ತದೆ. ಅನ್ನದ ಜೊತೆ ಕಲಸಿ ತಿಂದರೂ ರುಚಿ, ಹಾಗೇ ಕುಡಿದರೂ ಚೆನ್ನಾಗಿರುತ್ತದೆ. ತಯಾರಿಸುವ ವಿಧಾನವೂ ಬಹಳ ಸುಲಭ ಹಾಗೂ ಸರಳ.

ಬೇಕಾಗುವ ಸಾಮಗ್ರಿಗಳು (ಮೂರ್ನಾಲ್ಕು ಜನರ ಅಳತೆಯಲ್ಲಿ)
೧. ನುಗ್ಗೆ ಸೊಪ್ಪು (ನಾಲ್ಕು ದೊಡ್ಡ ಮುಷ್ಟಿಯಷ್ಟು)
೨. ಬಿಳೇ ಎಳ್ಳು – ೧ ಚಮಚ
೩. ಜೀರಿಗೆ – ೧ ಚಮಚ
೪. ಕಾಳು ಮೆಣಸು – ೪-೫ ಕಾಳುಗಳು
೫. ಇಂಗು – ಚಿಟಿಕೆಯಷ್ಟು
೬. ತೆಂಗಿನೆಣ್ಣೆ (ಅಥವಾ ತುಪ್ಪವನ್ನೂ ಬಳಸಬಹುದು) – ೧-೨ ಚಮಚ (ಹುರಿಯಲು ಬೇಕಾಗುವಷ್ಟು ಮಾತ್ರ)
೭. ಕಡೆದ ಮಜ್ಜಿಗೆ – ೨ ದೊಡ್ಡ ಲೋಟ
೮. ತೆಂಗಿನ ತುರಿ – ಒಂದು ಮುಷ್ಟಿಯಷ್ಟು (ಬೀಸಲು ಬೇಕಾಗುವಷ್ಟು ಮಾತ್ರ)
೯. ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
*ಕಾದ ಎಣ್ಣೆಗೆ ಬಿಳೇ ಎಳ್ಳು, ಜೀರಿಗೆ, ಇಂಗು ಮತ್ತು ಕಾಳುಮೆಣಸುಗಳನ್ನು ಹಾಕಿ ಒಗ್ಗರಿಸಿಕೊಳ್ಳಿ.
*ಅವುಗಳು ಹುರಿದು ಚಟಗುಡುವಾಗ, ಮೊದಲೇ ತೊಳೆದಿಟ್ಟುಕೊಂಡಿರುವ ಸೊಪ್ಪನ್ನು ಹಿಂಡಿ ಈ ಒಗ್ಗರಣೆಗೆ ಹಾಕಿ ಚೆನ್ನಾಗಿ ಹುರಿಯಿರಿ (ಅದು ಬಾಡುವಷ್ಟು ಹೊತ್ತು).
*ಮಿಶ್ರಣ ಚೆನ್ನಾಗಿ ಹುರಿದು ಸೊಪ್ಪು ಬಾಡಿದ ನಂತರ, ತುಸು ತಣಿಯಲು ಬಿಟ್ಟು, ಕಾಯಿತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಿ.
*ನಿಮಗೆ ತಂಬುಳಿ ಕುಡಿಯಲು ಬೇಕಾಗುವಷ್ಟು ತೆಳ್ಳಗಿರಬೇಕೆಂದರೆ ಬೀಸಿದ ಮಿಶ್ರಣೆಗೆ ಮಜ್ಜಿಗೆಯ ಜೊತೆ ೧-೨ ಲೋಟ ನೀರನ್ನು ಸೇರಿಸಿಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕುಡಿಯಬಹುದು. ಇಲ್ಲಾ, ಬೀಸಿದ ಮಿಶ್ರಣಕ್ಕೆ ಮಜ್ಜಿಗೆ, ಒಂದು ಲೋಟ ನೀರು ಮತ್ತು ಉಪ್ಪು ಸೇರಿಸಿ ಹದಾ ಮಂದವಾಗಿಸಿಕೊಂಡು ಅನ್ನಕ್ಕೆ ಕಲಸಿಯೂ ತಿನ್ನಬಹುದು ಅಥವಾ ಹಾಗೇ ಕುಡಿಯಲೂಬಹುದು.
ಬಹಳ ರುಚಿಕರವಾಗಿರುವುದಂತೂ ಸತ್ಯ! ಮಾಡಿ ನೋಡಿ ಒಮ್ಮೆ.

~ತೇಜಸ್ವಿನಿ ಹೆಗಡೆ.

Saturday, February 24, 2018

ಚೀನಿಕಾಯಿ (ಸಿಹಿ ಕುಂಬಳಕಾಯಿ) ಕೊದ್ದೆಲು

Sweet Pumpkin ಅನ್ನು ನಾವು ಚೀನಿಕಾಯಿ ಎಂದು ಕರೆಯುತ್ತೇವೆ. ಇದಕ್ಕೆ ಸಿಹಿ ಕುಂಬಳ ಎಂದೂ ಹೇಳುತ್ತಾರೆ. ಮಲೆನಾಡಿನಲ್ಲಿ ದೀಪಾವಳಿಯ ದಿವಸ ಇದರ ಕಡುಬು ಮಾಡದ ಮನೆಯೇ ಇಲ್ಲ ಎನ್ನಬಹುದು. ನೋಡಲು ಕಿತ್ತಳೆ/ಕಡು ಹಸಿರು ಬಣ್ಣದಿಂದ ಕೂಡಿರುವ ಈ ಕಾಯಿ ನೋಡಲೆಷ್ಟು ಸುಂದರವೋ ಅಷ್ಟೇ ಆರೋಗ್ಯಕ್ಕೂ ಹಿತಕರ. ಇದರೊಳಗಿರುವ ಪೊಟಾಶಿಯಮ್ ಮತ್ತು ಬೀಟಾ ಕೆರೋಟಿನ್ ಕಣ್ಣಿಗೆ, ಹೃದಯಕ್ಕೆ, ರಕ್ತದೊತ್ತಡಕ್ಕೆ ಚರ್ಮದ ಹೊಳಪಿಗೆ ಹೀಗೆ ಹಲವು ರೀತಿಯಲ್ಲಿ ಇದು ಬಹಳ ಉಪಯೋಗಿ ಎಂದು ಹೇಳುತ್ತಾರೆ.  



ಬೇಕಾಗುವ ಸಾಮಗ್ರಿಗಳು (೪-೫ ಜನರ ಅಳತೆಯಲ್ಲಿ)

* ಚೀನಿಕಾಯಿ – ಸಣ್ಣ ಗಾತ್ರದ್ದಾರೆ ಪೂರ್ತಿ ಬೇಕು, ದೊಡ್ಡದಾದರೆ ಅರ್ಧ ಸಾಕು.
* ಕೆಂಪು ಮೆಣಸು ಖಾರಕ್ಕೆ ತಕ್ಕಂತೆ
* ಮೆಂತೆ 1 1/2 ಚಮಚ
* ಉದ್ದಿನ ಬೇಳೆ – 2 ಚಮಚ
* ಕೊತ್ತಂಬರಿ  - 2 ಚಮಚ
* ಜೀರಿಗೆ – 1/4 ಚಮಚ
* ಕರಿಬೇವು – 15-20 ಎಲೆಗಳು
* ಎಣ್ಣೆ – ಹುರಿಯಲು ಬೇಕಾಗುವಷ್ಟು
* ಕಾಯಿ ತುರಿ – ಅರ್ಧ ಕಡಿ (ಚಿಕ್ಕ ಕಾಯಿಯಾಯದರೆ ಪೂರ್ತಿ ಹಾಕಿ) 
* ಬೆಲ್ಲ, ಉಪ್ಪು, ಹುಳಿ – ರುಚಿಗೆ ತಕ್ಕಷ್ಟು
* ಒಗ್ಗರಣೆಗೆ ಸಾಸಿವೆ ಹಾಗೂ ಒಂದೆರಡು ಎಸಳು ಕರಿಬೇವು.

**ಗಮನಿಸಿ: ಇಲ್ಲಿ ಚಮಚ ಎಂದರೆ ದೊಡ್ಡ ಗಾತ್ರದಲ್ಲಿ... ಟೇಬಲ್ ಸ್ಪೂನ್. ದೊಡ್ಡ ಚಮದಲ್ಲಿ ಮೆಂತೆ ತೆಗೆದುಕೊಂಡರೆ ತುಸು ಕಹಿ ಬರಬಹುದು.

ತಯಾರಿಸುವ ವಿಧಾನ

~ ಮೊದಲು ಚೀನಿಕಾಯನ್ನು ಹೋಳು ಮಾಡಿಕೊಂಡು ಅದಕ್ಕೆ ಉಪ್ಪು+ಬೆಲ್ಲ+ಹುಳಿ ಹಾಕಿ ಹದವಾಗಿ ಬೇಯಿಸಿಕೊಳ್ಳಿ. ಒಂದೊಮ್ಮೆ ಇಲ್ಲಿ ಹುಳಿ, ಬೆಲ್ಲ ಮರೆತು ಹೋದರೂ ಬೀಸುವಾಗ ಅಥವಾ ಗೊಡಗುಡಿಸುವಾಗ ಹಾಕಿಕೊಳ್ಳಬಹುದು. ಚೀನಿಕಾಯಿ ಸಿಹಿಯೇ ಇರುವುದರಿಂದ ಬೆಲ್ಲ ಜಾಸ್ತಿ ಹಾಕಬೇಕೆಂದಿಲ್ಲ. ರುಚಿಗೆ ತಕ್ಕಷ್ಟು ಸಾಕಾಗುತ್ತದೆ.
~  ಕೆಂಪು ಮೆಣಸು + ಮೆಂತೆ + ಕೊತ್ತಂಬರಿ ಬೀಜ + ಜೀರಿಗೆ + ಉದ್ದಿನ ಬೇಳೆ + ಕರಿಬೇವಿನ ಎಲೆಗಳು ಇವೆಲ್ಲವನ್ನೂ ಎಣ್ಣೆಯೊಂದಿಗೆ ಹುರಿದುಕೊಳ್ಳಿ.
~ ಹುರಿದ ಮಿಶ್ರಣಕ್ಕೆ ಕಾಯಿತುರಿಗಳನ್ನು ಹಾಕಿ ತರಿತರಿಯಾಗಿ ಬೀಸಿಕೊಳ್ಳಿ (ತುಂಬಾ ನುಣ್ಣಗಾಗದಿದ್ದರೆ ಒಳ್ಳೆಯದು)
~ ಬೀಸಿದ ಮಿಶ್ರಣವನ್ನು ಬೇಯಿಸಿದ ಹೋಳಿಗೆ ಹಾಕಿ, ಉಪ್ಪು+ಹುಳಿ+ಸಿಹಿಯನ್ನು ಹದಮಾಡಿಕೊಂಡು ಚೆನ್ನಾಗಿ ಕುದಿಸಿ. ಇದು ಮಂದವಾಗಿರಬೇಕು. ಕುದಿಸುವಾಗ ಜಾಸ್ತಿ ನೀರು ಹಾಕಬಾರದು.
~ ಗೊಡಗುಡಿಸಿದ ನಂತರ ಸಾಸಿವೆ+ಒಂದೆರಡು ಎಸಳು ಕರಿಬೇವಿನ ಒಗ್ಗರಣೆ ಹಾಕಿ ಮುಚ್ಚಿಬಿಡಿ.

ಬಿಸಿ ಬಿಸಿ ಕೊದ್ದೆಲನ್ನು ಸವಿದ ಮೇಲೆ ಬೇಳೆ ಹಾಕಿದ ಸಾಂಬರ್ ತುಸು ಸಮಯ ಬೇಡವೇ ಬೇಡವೆಂದೆನಿಸಿಬಿಡುವುದಂತೂ ಖಾತ್ರಿ! ಹೆಚ್ಚಾಗಿ ಕುಚ್ಚಲಕ್ಕಿ (ಬಾಯ್ಲ್ಡ್ ರೈಸ್)ಯ ಜೊತೆಗೆ ಇದರ ಸವಿ ಇನ್ನೂ ಹೆಚ್ಚು ಅನ್ನುತ್ತಾರೆ ಹಲವರು. ಆದರೆ ವೈಟ್ ರೈಸ್ ಆದರೂ ಸೇವಿಸಲು ಬಹಳ ರುಚಿಯಾಗಿರುತ್ತದೆ.

ಸೂಚನೆ :-

ಇದೇ ರೀತಿ ಬಸಳೆ, ಬಣ್ಣದ ಸವತೆ, ಬಟಾಟೆ, ಬದನೆಕಾಯಿ – ಈ ತರಕಾರಿಗಳ ಕೊದ್ದೆಲನ್ನೂ ತಯಾರಿಸಬಹುದು. ಬಸಳೆ ಕೊದ್ದಲು ಮಾಡುವುದಾದರೆ ಮೆಂತೆಯ ಪ್ರಮಾಣ ಕಡಿಮೆ ಮಾಡಿ, ಸಾಸಿವೆಯನ್ನು ಒಂದೂವರೆ ಚಮಚ ಹಾಕಬೇಕು. ಹಾಗೇಯೇ ಬಟಾಟೆಯಂಥ ಗೆಡ್ಡೆಗೆಣಸಿನ ಕೊದ್ದೆಲು ತಯಾರಿಸುವಾಗ ಇಂಗನ್ನು ಹಾಕಬೇಕು. 

~ತೇಜಸ್ವಿನಿ ಹೆಗಡೆ