Friday, October 04, 2013

ಬಟಾಟೆ ಖಾರಾ ತಾಳಿ

ಒಮ್ಮೊಮ್ಮೆ ಏನೂ ಮಾಡ್ಕೊಳೋದೇ ಬೇಡ ಅನ್ಸಿಬಿಡೊತ್ತೆ.... ಸುಮ್ಮನೇ ಕೂತು ಓದೋದೋ.. ಬಟ್ಟೆ ಮಡಚೋದೋ ಮಾಡ್ತಾ ಕುಂತ್ರೆ ತಿನ್ನೋದೂ ಬ್ಯಾಡ, ತಿನಿಸು ಮಾಡೋದೂ ಬ್ಯಾಡ ಅನ್ನಿಸಿ ಬಿಡೋತ್ತೆ ಅಲ್ವಾ? ಆದ್ರೆ ಹೊಟ್ಟೆ ಅನ್ನೋದು ಇದನ್ನೆಲ್ಲಾ ಕೇಳೋದೇ ಇಲ್ಲಾ. ಆವಾಗ ಮನೇಲಿ ಮೊಸರು ಇದ್ರೆ ಅನ್ನ ಒಂದು ಮಾಡ್ಕೊಳ್ಳಿ. ಆಮೇಲೆ ಬಟಾಟೆ ಇದ್ರೆ ಅದ್ರ "ಖಾರಾ ತಾಳಿ" ಒಂದು ಮಾಡಿಕೊಂಡ್ರೆ ಊಟದಿಂದ ಏಳಬೇಕೆಂದೇ ಅನಿಸುವುದಿಲ್ಲ. ಅನ್ನ ಕೂಗಿದ್ಮೇಲೆ ನೀವು ಮಾಡೋಕೆ ಹೊರಟ್ರೆ, ವಿಸಿಲ್ ತೆಗ್ಯೋದ್ರೊಳ್ಗೆ ಖಾರಾ ತಾಳಿ ರೆಡಿ ಆಗಿರೊತ್ತೆ. :)
Courtesy : Internet

ಬಟಾಟೆ ಖಾರಾ ತಾಳಿಗೆ ಬೇಕಾಗುವ ಸಾಮಾಗ್ರಿಗಳು :

೨ ಮಧ್ಯಮ ಗಾತ್ರದ ಬಟಾಟೆ
ರವೆ - ೨ ದೊಡ್ಡ ಚಮಚ.
ಮೆಣಸಿನ ಹುಡಿ - ಖಾರಕ್ಕೆ ತಕ್ಕ
ಉಪ್ಪು - ರುಚಿಗೆ ತಕ್ಕ
ತೆಂಗಿನೆಣ್ಣೆ

ಮಾಡುವ ವಿಧಾನ

೧. ಮೊದಲು ಬಟಾಟೆಯನ್ನು ತೊಳೆದು, ಸಿಪ್ಪೆ ತೆಗೆದು ಆದಷ್ಟು ತೆಳುವಾಗಿ ತಾಳಿ ಮಾಡಿಟ್ಟುಕೊಳ್ಳಿ.
೨. ಒಂದು ಬಟ್ಟಲಿಗೆ ರವೆ, ಉಪ್ಪು, ಖಾರ ಹಾಕಿ ಮಿಶ್ರಣ ಮಾಡಿ (ನೀರು ಹಾಕದೇ...) ಹುಡಿ ಮಿಶ್ರಣದ ಉಪ್ಪು, ಖಾರ ಸರಿಯಾಗಿದೆಯೇ ಎಂದು ನೋಡಿಕೊಳ್ಳಿ.
೩. ಮಾಡಿಟ್ಟ ಬಟಾಟೆ ತಾಳಿಗಳನ್ನು ಹುಡಿಯ ಮಿಶ್ರಣಕ್ಕೆ ಹುದುಗಿಸಿ, ತಾಳಿಯ ಎರೆಡೂ ಬದಿ ಹುಡಿ ಅಂಟಿಕೊಳ್ಳುವಂತೆ ಮಾಡಿ.
೪. ದೋಸೆ ಕಾವಲಿ ಇಟ್ಟು, ಹುಡಿ ಅಂಟಿದ ಬಟಾಟೆ ತಾಳಿಗಳನ್ನು ಬಿಸಿಯಾದ ಬಂಡಿಯ ಮೇಲಿಟ್ಟು ಎರಡೂ ಬದಿ ಎರಡೆರಡು ಹನಿ ಎಣ್ಣೆ ಬಿಟ್ಟು, ಹಾಗೇ ಮುಚ್ಚಿ ಬೇಯಿಸಿ.

ಬಿಸಿ ಬಿಸಿ ಖಾರ ತಾಳಿಯನ್ನು ಮೊಸರಿನೊಂದಿಗೆ ಸವಿಯುವ ಮಜ, ತಿಂದವರಿಗೆ ಮಾತ್ರ ಗೊತ್ತು. ಉಪ್ಪು, ಖಾರದ ಜೊತೆ ರವೆಯ ರುಚಿಯ ಸ್ವಾದವೇ ಬೇರೆ. ಬೆಂದ ನಂತರ ಖಾರಾ ತಾಳಿಗಳ ಘಮ್ಮನೆ ಕಂಪು ಹಸಿವಿಲ್ಲದವರ ಹಸಿವನ್ನೂ ಬಡಿದೆಬ್ಬಿಸಿದ್ದರೆ ಹೇಳಿ.

ಮಾಡಿ ನೋಡಿ... ನೋಡಿ ಹೇಳಿ :)

-ತೇಜಸ್ವಿನಿ.

Wednesday, August 21, 2013

ರುಚಿಕರ ಮತ್ತು ಆರೋಗ್ಯಕರ ಗೋಧಿ ಹಲ್ವ

ಗೋಧಿ ಹಲ್ವ ಆರೋಗ್ಯಕ್ಕೂ ಒಳ್ಳೆಯದು. ಬಾಯಿಗೂ ರುಚಿಕರ. ಮಾಡಲೂ ಸುಲಭ ಸರಳ. ಥಟ್ ಎಂದು ೧೫ ನಿಮಿಷದೊಳಗೆ ಒಂದು ಲೋಟ ಗೋಧಿ ಹಿಟ್ಟಿನ ಹಲ್ವವನ್ನು ತಯಾರಿಸಬಹುದು. ಬಿಲ್ಲೆಯಾಕಾರದಲ್ಲಿ ಕೊರೆದಿಟ್ಟುಕೊಂಡು, ಗಾಳಿಯಾಡದ ಡಬ್ಬದಲ್ಲಿಟ್ಟರೆ ೫-೬ ದಿನಗಳವರೆಗೂ ಚೆನ್ನಾಗಿರುತ್ತದೆ. ಇದನ್ನು ತಯಾರಿಸಲು ಬೇಕಾದ ಸಾಮಗ್ರಿಗಳೂ ಅತ್ಯಲ್ಪ. ಪಾಕವೊಂದು ಸರಿಯಾಗಿ ಆದರೆ ಮತ್ತೆಲ್ಲಾ ಅತಿ ಸುಲಭ.

ಬೇಕಾಗುವ ಸಾಮಗ್ರಿಗಳು 
Copy Right - Tejaswini 


ಗೋಧಿ ಹಿಟ್ಟು - ೧ ಲೋಟ
ತುಪ್ಪ - ೧/೪ ಲೋಟ
ಸಕ್ಕರೆ - ೧ ಲೋಟ
ನೀರು - ೧/೪ ಲೋಟ
ಏಲಕ್ಕಿ - ೬-೭ (ಪುಡಿ ಮಾಡಿಟ್ಟುಕೊಳ್ಳಬೇಕು.)
ಗೋಡಂಬಿ, ಧ್ರಾಕ್ಷಿ - ಬೇಕಾದ್ದಷ್ಟು. [ಹುರಿದೋ ಇಲ್ಲಾ ಹಾಗೆಯೋ ಹಾಕಿಕೊಳ್ಳಬಹುದು. ]
ಲವಂಗ - ೨ (ಇದನ್ನೂ ಏಲಕ್ಕಿಯ ಜೊತೆ ಪುಡಿಮಾಡಿಟ್ಟುಕೊಳ್ಳಬೇಕು.)

ಮಾಡುವ ವಿಧಾನ

* ಮೊದಲು ಗೋಧಿ ಹಿಟ್ಟನ್ನು ತುಪ್ಪದಲ್ಲಿ ಘಮ್ಮೆನ್ನುವಷ್ಟು ಚೆನ್ನಾಗಿ ಹುರಿದಿಟ್ಟುಕೊಳ್ಳಿ.

* ಇದಕ್ಕೆ ಹುಡಿಮಾಡಿಟ್ಟುಕೊಂಡ ಲವಂಗ, ಏಲಕ್ಕಿಪುಡಿಯನ್ನು ಹಾಕಿ ಒಮ್ಮೆ ತಿರುವಿ.

* ಸಕ್ಕರೆ + ತುಸು ನೀರನ್ನು ಒಲೆಯಲ್ಲಿಟ್ಟು ಸಣ್ಣ ಉರಿಯಲ್ಲಿ ಪಾಕಕ್ಕೆ ಇಡಿ. ಸಣ್ಣ ಒಲೆಯಲ್ಲೇ ಇಡಬೇಕು.. ಇಲ್ಲದಿದ್ದರೆ ಪಾಕ ಹೆಚ್ಚಾಗಬಹುದು. ಆಗಾಗ ಕಡದುತ್ತಿದ್ದು ಒಂದು ಹಂತದಲ್ಲಿ ಸಕ್ಕರೆ ಕರಗಿ ಕುದಿಯ ತೊಡಗುತ್ತದೆ (೩-೪ ನಿಮಿಷದೊಳಗೇ). ಆಗ ಪಾಕವಾಯಿತೆಂದು ನೋಡಲು ಒಂದು ಬಟ್ಟಲಲ್ಲಿ ನೀರು ತೆಗೆದುಕೊಂಡು ಅದಕ್ಕಿ ಒಂದು ಹನಿ ಪಾಕದ ರಸವನ್ನು ಹಾಕಿ. ಹಾಕಿದ ಹನಿ ಪಾಕವಾಗಿರದಿದ್ದರೆ ನೀರಿನಲ್ಲಿ ಹರಡಿ ಹೋಗುತ್ತದೆ. ಪಾಕವಾಗಿದ್ದರೆ ನೀರಿನ ತಳ ಸೇರಿ ಮುದ್ದೆಯಾಗುತ್ತದೆ.

* ಪಾಕವಾದ ಮೇಲೇ ತಕ್ಷಣ ಒಲೆ ಆರಿಸಿ. ಪಾಕವನ್ನು ತಕ್ಷಣ ಹುರಿದ ಗೋಧಿ ಹಿಟ್ಟಿನ ಮಿಶ್ರಣಕ್ಕೆ ಸುರಿದು ಚೆನ್ನಾಗಿ ತಿರುಗಿಸಿಕೊಳ್ಳಿ. ಸರಿಯಾಗಿ ಹದವಾದ ಕೂಡಲೇ ಮೊದಲೇ ತುಪ್ಪವನ್ನು ಒರೆಸಿಟ್ಟುಕೊಂಡಿದ್ದ ಬಟ್ಟಲಿಗೆ ಹೊಯ್ದು ಚೂರಿ, ಅಥವಾ ಚಮಚದಲ್ಲಿ ಬಿಲ್ಲೆಯಾಕಾರದಲ್ಲಿ ಕೊರೆದುಕೊಳ್ಳಿ. ಆರಿದ ಮೇಲೆ ಅದನ್ನು ತೆಗೆದು ಡಬ್ಬದಲ್ಲಿ ತುಂಬಿಸಿ.

ನೆನಪಿಡಿ. 
ಗೋಡಂಬಿ ಧ್ರಾಕ್ಷಿಯನ್ನು ಮೊದಲೇ ಹುರಿದ ಮಿಶ್ರಣಕ್ಕೆ ಹಾಕಬಹುದು, ಇಲ್ಲಾ ಪಾಕವನ್ನು ಹಾಕಿ ತಿರುವುವಾಗಲೂ ಹಾಕಬಹುದು.

ಸಕ್ಕರೆ ಪಾಕವಾದ ತಕ್ಷಣ ಗೋಧಿ ಹಿಟ್ಟಿಗೆ ಹಾಕಿ ಚೆನ್ನಾಗಿ ಕಲಸಬೇಕು. ತುಸು ತಡವಾದರೂ ಪಾಕ ಗಟ್ಟಿಯಾಗಿ ಮತ್ತೆ ಕರಗಿಸಬೇಕಾಗುತ್ತದೆ!

ಒಂದೊಮ್ಮೆ ಪಾಕ ಹೆಚ್ಚಾಗಿದ್ದರೆ ಚಮಚದಲ್ಲೇ ತಿಂದು ಬಿಡಿ :) ಹೇಗೆ ತಿಂದರೂ ರುಚಿ ಮಾತ್ರ ಒಂದೇ ತರಹ ಇದ್ದಿರುತ್ತದೆ.

ಈ ತಿನಿಸನ್ನು ಮಾಡಿದರೆ, ತಿಂದು ರುಚಿಯೆನಿಸಿದರೆ ನನ್ನೊಂದಿಗೆ ಸಿಹಿಯ ರುಚಿಯನ್ನೂ ಹಂಚಿಕೊಳ್ಳಿ :)

-ತೇಜಸ್ವಿನಿ.

Wednesday, August 14, 2013

ಜಿಟಿ ಜಿಟಿ ಮಳೆಗೆ ಹಸಿ ಬಿಸಿ ಈರುಳ್ಳಿ ಹಾಗೂ ಸಾಂಬ್ರಾಣಿ ಸೊಪ್ಪಿನ ತಂಬುಳಿಗಳು....

ಇನ್ನೇನು ಮಳೆ ಧೊಪ್ಪನೆ ಬೀಳೋ ತರಹ ಕಪ್ಪುಗಟ್ಟಿದೆ....  ಹೊರ ಬೀಸುವ ಮಳೆಯ ಚಳಿಗಾಳಿಯ ಜೊತೆ ಒಳಗೆ ಸುಟಿ ಸುಟಿ ಈರುಳ್ಳಿ ತಂಬುಳಿ ಇದ್ದುಬಿಟ್ಟರೆ....... ಸ್ವರ್ಗಕ್ಕೆ ಎರಡೇಗೇಣು ನೋಡಿ :)

ಮಧ್ಯಮಗಾತ್ರದ ಒಂದು ಪುಟ್ಟ ಈರುಳ್ಳಿ+ ಅರ್ಧ ಚಮಚ ಜೀರಿಗೆಯನ್ನು ೩=೪ ಚಮಚ ಕಾಯಿತುರಿಯೊಂದಿಗೆ ಹಸೀ ಬೀಸಿಕೊಳ್ಳಿ. ಇದಕ್ಕೆ ೨-೩ ಸೌಟು (ಬೇಕಿದ್ದರೆ ಎರಡು ಸೌಟು ಜಾಸ್ತಿ...:)) ಮಜ್ಜಿಗೆಯನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಬೆರಸಿ. ದಪ್ಪಗಾಗಬೇಕೆಂದರೆ ಕಾಯಿತುರಿಯನ್ನೋ ಇಲ್ಲಾ ಮಜ್ಜಿಗೆಯನ್ನೋ ಜಾಸ್ತಿ ಹಾಕಬಹುದು. ತೆಳ್ಳಗೆ ಬೇಕೆನ್ನುವವರು ಸ್ವಲ್ಪ ನೀರನ್ನು ಬೆರೆಸಬಹುದು.

ತದನಂತರ ೧/೪ ಚಮಚ್ಚ ಸಾಸಿವೆ+ಒಂದು ಕಡ್ಡಿಮೆಣಸಿನ ಚೂರನ್ನು ಹಾಕಿ ತುಪ್ಪದಲ್ಲಿಯೋ ಇಲ್ಲಾ ಎಣ್ಣೆಯಲ್ಲಿಯೋ (೧/೨ ಚಮಚವೂ ಬೇಡ.. ಸಾಸಿವೆ ಚಟಗುಡುವಷ್ಟು ಹಾಕಿದರೆ ಸಾಕು..) ಒಗ್ಗರಿಸಿದರೆ ೫ ನಿಮಿಷದೊಳಗೆ ರುಚಿ ರುಚಿ, ಆರೋಗ್ಯಕರ ಈರುಳ್ಳಿ ತಂಬ್ಳಿ ರೆಡಿ :)

ಇದು ಶೀತ, ಕಫ, ಕೆಮ್ಮು, ಸ್ವಾದ ಕೆಟ್ಟಿದ್ದರೆ - ಎಲ್ಲವುದಕ್ಕೂ ರಾಮಬಾಣ.

ಇನ್ನು ತುಂಬಾ ಗಂಟಲು ಕೆರೆತ ಇದ್ದವರು, ಮಜ್ಜಿಗೆ ತಂಪು ಎಂದಾದಲ್ಲಿ ಹೀಗೆ ಮಾಡಿ: - 

ಈರುಳ್ಳಿ+ಜೀರಿಗೆ+ಕಾಯಿತುರಿ ಬೀಸಿದ ನಂತರ ತುಸುವೇ ನೀರನ್ನು ಹಾಕಿ ಒಲೆಯಲ್ಲಿಟ್ಟು ಒಂದು ಗುಳ್ಳೆಬರುವವರೆಗೆ ಬಿಸಿಮಾಡಿ (ನೆನಪಿಡಿ.. ಕುದಿಸಬೇಡಿ!). ಗ್ಯಾಸ್ ನಂದಿಸಿ ಮಜ್ಜಿಗೆ ಬೆರೆಸಿ, ಒಗ್ಗರಿಸಿದರೆ ಗಂಟಲು ಕೆರೆತ, ನೆಗಡಿ ಸಾಕಷ್ಟು ಶಮನವಾಗುವುದು.

$$$$$$$$$$$$$$$$$

ಸಾಂಬ್ರಾಣಿ ಸೊಪ್ಪಿನ ತಂಬುಳಿಯೂ ಶೀತ, ಕೆಮ್ಮಿಗೆ ತುಂಬಾ ಪರಿಣಾಮಕಾರಿ. ಅದರಲ್ಲೂ ಮಕ್ಕಳಿಗೆ ಶೀತವಿದ್ದಾಗ ಇದನ್ನು ಉಣಿಸುವುದು ಉತ್ತಮ.

೫-೬ ಸಾಂಬ್ರಾಣಿ ಸೊಪ್ಪುಗಳನ್ನು ಚೂರುಮಾಡಿಟ್ಟುಕೊಳ್ಳಬೇಕು. ಈ ಚೂರುಗಳನ್ನು ೨ ಚಮಚ ಬಿಳೇ ಎಳ್ಳು +೧/೨ ಚಮಚ ಜೀರಿಗೆ + ಚಿಟಿಕೆ ಇಂಗು - ಇವಿಷ್ಟನ್ನು ೧ ಚಿಕ್ಕ ಚಮಚ ತುಪ್ಪದಲ್ಲಿ ಹುರಿದು, ೩-೪ ಚಮಚ ಕಾಯಿತುರಿಯೊಂದಿಗೆ ಬೀಸಿ, ಮೇಲೆ ಹೇಳಿರುವಂತೇ ಬಿಸಿಮಾಡಿ, ಮಜ್ಜಿಗೆ ಬೆರೆಸಿದರೆ ಶೀತಕ್ಕೆ ಚಳಿಹಿಡಿಯುವುದು :)

----------

(ವಿ.ಸೂ... ಮೊಸರನ್ನು ಇಷ್ಟಪಡುವವರು..  ಮಜ್ಜಿಗೆಯ ಬದಲು ಮೊಸರನ್ನೂ ಉಪಯೋಗಿಸಬಹುದು.... ೨-೩ ಸೌಟು ಮೊಸರನ್ನೇ ಮಿಕ್ಸಿಯಲ್ಲಿ ಹಾಕಿ ಒಮ್ಮೆ ತಿರುಗಿಸಿದರೆ ಅದು ತೆಳ್ಳಗಾಗುತ್ತದೆ.. ಅದಕ್ಕೆ ನೀರು ಸ್ವಲ್ಪ ಸೇರಿಸಿ ಬೀಸಿದ ಮಿಶ್ರಣಕ್ಕೆ ಹಾಕಿ ಹದಮಾಡಬಹುದು.)

-ತೇಜಸ್ವಿನಿ

Thursday, March 14, 2013

ಬಿಸಿ ಬಿಸಿ ಬೇಸಿಗೆಗೆ ತಂಪು ತಂಪು ವಿವಿಧ ತಂಬುಳಿಗಳು...


ಬೇಸಿಗೆಯ ಧಗೆಯ ಅನುಭವ ಎಲ್ಲೆಡೆ ಈಗಾಗಲೇ ಶುರುವಾಗಿದೆ.. ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಮೋಡಗಟ್ಟಿದ ವಾತಾವರಣ ಒಳ-ಹೊರಗೆ ತಾಪ ಹೆಚ್ಚಿಸುತ್ತಿದೆ. ದೇಹದ ಉಷ್ಣತೆಯ ಹೆಚ್ಚಳದಿಂದಾಗಿ ಹತ್ತು ಹಲವು ಸಮಸ್ಯೆಗಳು ತಲೆದೋರುವುದು ಸಹಜ. ಹೀಗಿರುವಾಗ ತೆಳ್ಳಗೆ, ತಂಪಾಗಿರುವ ಪದಾರ್ಥವನ್ನು ಸೇವಿಸುವ ಮನಸ್ಸಾಗುವುದು. ನಮ್ಮಲ್ಲಿ ಅಂದರೆ ಹವ್ಯಕರಲ್ಲಿ ವಿವಿಧ ರೀತಿಯ ತಂಬುಳಿಗಳನ್ನು ಮಾಡುತ್ತಾರೆ. ಇವುಗಳನ್ನು ಹಾಗೇ ತಂಫು ಪಾನೀಯದಂತೆಯೋ ಇಲ್ಲಾ ಸೂಪ್‌ನಂತೆಯೋ ಕುಡಿಯಬಹುದು ಇಲ್ಲವೇ ಅನ್ನಕ್ಕೆ ಕಲಸಿ ತಿನ್ನಬಹುದು.

Copy Right : Tejaswini Hegde
ತಂಬುಳಿಗಳ ಉಪಯೋಗಗಳು : - 

೧. ದೇಹದ ಉಷ್ಣತೆಯು ಹೆಚ್ಚಾಗದಂತೇ ತಡೆಯುತ್ತವೆ... ಬಾಯಿ ಹುಣ್ಣು, ಕಣ್ಣುರಿ, ತಲೆ ಸಿಡಿತ, ಹೊಟ್ಟೆಯುರಿ, ಮಲಬದ್ಧತೆ, ಪಿತ್ಥ, ಗಾಸ್ಟ್ರಿಕ್ ಇಂತಹ ರೋಗಗಳಿಂದ ನಮ್ಮನ್ನು ದೂರವಿಡುತ್ತವೆ.

೨. ಕಣ್ಣಿಗೆ, ಉದರಕ್ಕೆ ತಂಪಲ್ಲದೇ ನೆತ್ತಿಗೂ ತಂಪು ತರುತ್ತವೆ. ಎದೆಯುರಿ ಹೆಚ್ಚಾಗಿದ್ದರೆ, ಈ ತಂಬುಳಿಗಳನ್ನು ಮಾಡಿ ಕುಡಿದರೆ ಬಹು ಬೇಗ ಶಮನವಾಗುತ್ತದೆ.

೩. ಆಯಾಸ ಹೆಚ್ಚಾದಾಗ, ಬಾಯಿರುಚಿ ಕೆಟ್ಟಿದೆ ಎಂದೆನಿಸಿದಾಗಲೂ ಇವು ಸಹಕಾರಿಯಾಗಿವೆ.

ಒಟ್ಟಿನಲ್ಲಿ ಬಹೋಪಯೋಗಿ ತಂಬುಳಿಗಳ ಸೇವನೆಯಿಂದ ಆರೋಗ್ಯವು ಸುಧಾರಿಸುವುದಲ್ಲದೇ ಸದೃಢವಾಗಿರುವುದು.


ಮಾಡಲು ಸುಲಭ, ಸರಳ, ಬೇಕಾಗುವ ಪದಾರ್ಥಗಳೂ ಅತ್ಯಂತ ಕಡಿಮೆ. ಆರೋಗ್ಯಕ್ಕೆ ಹಿತಕರ, ಬಾಯಿಗೂ ರುಚಿಕರ ತಂಬುಳಿಗಳನ್ನು ತಯಾರಿಸುವ ವಿಧಾನವೂ ಹೆಚ್ಚು ಕಡಿಮೆ ಒಂದೇ ರೀತಿಯದ್ದಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು - (೩-೪ ಜನರಿಗೆ) :-

ಒಂದು ಕಟ್ಟು ಮೆಂತೆ ಸೊಪ್ಪು/ ಪಾಲಕ್ ಸೊಪ್ಪು/ಅತ್ತಿ ಕುಡಿ (ಯಾವುದಾದರೂ ಒಂದು ಸಾಮಗ್ರಿ)

ಜೀರಿಗೆ - ೧ ಚಮಚ (ಟೇಬಲ್ ಸ್ಪೂನ್)
ಬಿಳೇ ಎಳ್ಳು - ೧/೨ ಚಮಚ
ಇಂಗು - ಒಂದೆರಡು ಕಾಳು...(ಪುಡಿಯಾಗಿದ್ದರೆ ಚಿಟಿಕೆ)
ತುಪ್ಪ ಅಥವಾ ಎಣ್ಣೆ - ೧ - ೨ ಚಮಚ. (ತುಪ್ಪದಲ್ಲಿ ಮಾಡಿದರೆ ಮತ್ತೂ ರುಚಿಕರ ಹಾಗೂ ಆರೋಗ್ಯಕ್ಕೂ ಉತ್ತಮ.)
ತೆಂಗಿನ ತುರಿ - ೪ ಚಮಚ
ಮಜ್ಜಿಗೆ ಅಥವಾ ಮೊಸರು  - ೩-೪ ಸೌಟು.
ಉಪ್ಪು - ರುಚಿಗೆ ತಕ್ಕಷ್ಟು.
ಬೆಲ್ಲ - 1-2 ಚಮಚ
------

ಮೆಂತೆಸೊಪ್ಪಿನ ತಂಬುಳಿ ಮಾಡುವ ವಿಧಾನ : ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಕತ್ತರಿಸಬೇಕು.

ಮೆಂತೆಸೊಪ್ಪಿನ ತಂಬುಳಿ ಮಾಡುವ ಮೊದಲುಸೊಪ್ಪನ್ನು ತೊಳೆದಮೇಲೆ ಹೆಚ್ಚಿ, ಸ್ವಲ್ಪ ಉಪ್ಪು ತಿಕ್ಕಿ ೧೦ ನಿಮಿಷ ಇಟ್ಟುಕೊಂಡಿರಬೇಕಾಗುತ್ತದೆ. (ಇದರಿಂದ ಕಹಿಯಂಶ ಕಡಿಮೆಯಾಗಿ ತಿನ್ನಲು ರುಚಿಕರವಾಗಿರುತ್ತದೆ. ಕಹಿ ಅಂಶ ಇಷ್ಟಪಡುವವರು ಹಾಗೇ ಮಾಡಿಕೊಳ್ಳಬಹುದು.)

ಬಾಣಲೆಗೆ ತುಪ್ಪ ಅಥವಾ ಎಣ್ಣೆ ಹಾಕಿ ಜೀರಿಗೆ + ಬಿಳೇ ಎಳ್ಳು +(ಈ ತಂಬುಳಿಗೆ ಬೇಕಿದ್ದರೆ ಮಾತ್ರ ಹಾಕಬಹುದು) ಚಿಟಿಕೆ ಇಂಗು - ಇವುಗಳನ್ನು ಹಾಗಿ ಒಗ್ಗರಿಸಿಕೊಂಡು, ಉಪ್ಪು ತಿಕ್ಕಿಟ್ಟಿದ್ದ ಮೆಂತೆ ಸೊಪ್ಪನ್ನು ಹಿಂಡಿ ಹಾಕಿ ಹುರಿಯಬೇಕು. ಕಹಿ ಬಿಟ್ಟಿರುವ ರಸವನ್ನು ಹಿಂಡಿ ಹಾಕುವುದರಿಂದ ತಿನ್ನುವಾಗ ಕಹಿಯೆನಿಸುವುದಿಲ್ಲ.

ಬಹು ಬೇಗ ಹುರಿದು ಬರುವ ಸೊಪ್ಪನ್ನು ತಣಿಯಲಿಡಬೇಕು. ನೆನಪಿಡಿ ಯಾವುದೇ ಸೊಪ್ಪಿರಲಿ.. ಹುರಿದು ಮಾಡುವಂಥದ್ದಾಗಿದ್ದರೆ, ಸಂಪೂರ್ಣ ತಣಿದ ಮೇಲೆ ಕಾಯಿಹಾಕಿ ರುಬ್ಬಬೇಕು.. ಬಿಸಿ ಇರುವಾಗಲೇ ರುಬ್ಬಿದರೆ ಕಸರು(ಕಮಟು) ವಾಸನೆ ಬರುತ್ತದೆ.

ತಣಿದ ಮೇಲೆ ಕಾಯಿತುರಿಯೊಂದಿಗೆ ನುಣ್ಣಗೆ ರುಬ್ಬಿ, ಮಜ್ಜಿಗೆ + ಉಪ್ಪು ಹಾಕಿ, ತೆಳ್ಳಗೆ ಬೇಕಿದ್ದರೆ ತುಸು ನೀರನ್ನೋ ಇಲ್ಲಾ ಮತ್ತೊಂದು ಸೌಟು ಮಜ್ಜಿಗೆಯನ್ನೋ ಹಾಕಿದರೆ ರುಚಿಕರ ಮೆಂತೆ ತಂಬುಳಿ ರೆಡಿ. ಸಿಹಿಯನ್ನು ಇಷ್ಟಪಡುವವರು... ಕಹಿಯೆನಿಸುವವರು... ಸ್ವಲ್ಪ ಬೆಲ್ಲವನ್ನು ಹಾಕಿ ಕರಗಿಸಿಕೊಳ್ಳಬಹುದು. ಮತ್ತಷ್ಟು ರುಚಿಕರವಾಗುತ್ತದೆ.

ವಿ.ಸೂ : - ೧. ಸೊಪ್ಪನ್ನು ತುಂಬಾ ಹೊತ್ತು ಉಪ್ಪಲ್ಲಿ ಹಾಕಿಡಬೇಡಿ.. ಅದರ ಕಹಿಯಂಶ ಸಂಪೂರ್ಣ ಹೋಗಿ, ಅದರೊಳಗಿನ ಉತ್ತಮ ಸತ್ವವೆಲ್ಲಾ ಉಪ್ಪಲ್ಲಿ ಕರಗಿಹೋಗಬಹುದು! 

೨. ಮಜ್ಜಿಗೆಯ ಬದಲು ಮೊಸರನ್ನೂ ಉಪಯೋಗಿಸಬಹುದು.... ೨-೩ ಸೌಟು ಮೊಸರನ್ನೇ ಮಿಕ್ಸಿಯಲ್ಲಿ ಹಾಕಿ ಒಮ್ಮೆ ತಿರುಗಿಸಿದರೆ ಅದು ತೆಳ್ಳಗಾಗುತ್ತದೆ.. ಅದಕ್ಕೆ ನೀರು ಸ್ವಲ್ಪ ಸೇರಿಸಿ ಬೀಸಿದ ಮಿಶ್ರಣಕ್ಕೆ ಹಾಕಿ ಹದಮಾಡಬಹುದು.


ಪಾಲಾಕ್ ಸೊಪ್ಪಿನ ತಂಬುಳಿ

ಮೇಲೆ ಹೇಳಿದ ಸಾಮಾಗ್ರಿಗಳನ್ನೇ ಉಪಯೋಗಿಸಿ ಒಗ್ಗರಿಸಿಕೊಂಡು, ಹೆಚ್ಚಿಟ್ಟಿದ್ದ ಸೊಪ್ಪನ್ನೂ ಹಾಕಿ ಹುರಿದು, ತಣಿದ ನಂತರ ಕಾಯಿಯೊಂದಿಗೆ ಬೀಸಿ, ಉಪ್ಪು ಮಜ್ಜಿಗೆ ಬೆರೆಸಿದರೆ ಆಯಿತು. ಈ ತಂಬುಳಿಗೆ ಇಂಗು ಹಾಕಿದರೆ ಮತ್ತೂ ರುಚಿಕರ. ಹಾಗಾಗಿ ತಪ್ಪದೇ ಒಗ್ಗರಣೆಗೆ ಹಾಕಿ. ಬೆಲ್ಲವನ್ನು ಹಾಕಬಾರದು.

ಅತ್ತಿಕುಡಿ ತಂಬುಳಿ

ಅತ್ತಿ ಕುಡಿಯ ಹಸಿರಾದ ಚಿಗುರೆಲೆಗಳು - ೧೦-೧೫ (ಬಲಿತ ದೊಡ್ಡ ಎಲೆಗಳಲ್ಲಾ!)... ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಂಡು ಮೇಲೆ ಪಾಲಾಕ್ ಸೊಪ್ಪಿನ ತಂಬುಳಿಯ ವಿಧಾನದಂತೇ ಮಾಡಿಕೊಳ್ಳುವುದು. ಆಮೇಲೆ ಸ್ವಲ್ಪ ಬೆಲ್ಲವನ್ನೂ ಸೇರಿಸಬೇಕು.


ಇದೇ ರೀತಿ ನೆಲನೆಲ್ಲಿತಂಬುಳಿಯನ್ನೂ ಮಾಡುತ್ತಾರೆ..ಆದರೆ ಇದಕ್ಕೆ ಕರಿಮೆಣಸಿನ ಕಾಳುಗಳನ್ನು ಸೇರಿಸುತ್ತಾರಷ್ಟೇ.. ಇದನ್ನು ಮಾಡುವ ವಿಧಾನವನ್ನು ಮೊದಲೇ ವಿವರಿಸಿದ್ದು.. ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ - "ನೆಲನೆಲ್ಲಿ"
ಹುರಿಯದೇ ಹಸಿಯಾಗಿ ಬೀಸಿ ಮಾಡುವ ತಂಬುಳಿಗಳು - 

ಲೆಮನ್ ಗ್ರಾಸ್ ಅಥವಾ ಮಜ್ಜಿಗೆ ಹುಲ್ಲಿನ ತಂಬುಳಿ :- 
೩-೪ ಮಜ್ಜಿಗೆ ಹುಲ್ಲನ್ನು ಕತ್ತರಿಸಿಟ್ಟುಕೊಂಡು ಅದಕ್ಕೆ ಹೆಬ್ಬೆರಳಿನ ಗಾತ್ರದ ಶುಂಠಿಯನ್ನು ಹೆಚ್ಚು ಹಾಕಿ, ಕಾಯಿತುರಿಯೊಂದಿಗೆ (೪-೫ ಚಮಚ) ಹಸಿಯಾಗಿ ಬೀಸಬೇಕು. ತದನಂತರ ಚೆನ್ನಾಗಿ ಸೋಸಿ ಅದರ ರಸವನ್ನಷ್ಟೇ ಹಿಂಡಿ ತೆಗೆದು, ಮಜ್ಜಿಗೆಯನ್ನೋ ಇಲ್ಲಾ ಮೇಲೆ ಹೇಳಿದಂತೇ (ಮೆಂತೆಸೊಪ್ಪಿನ ತಂಬುಳಿಗೆ..) ಮೊಸರನ್ನೋ ಸೇರಿಸಿ, ಉಪ್ಪು ಹಾಕಿದರೆ ಬಲುರುಚಿಕರ, ಆರೋಗ್ಯಕರ ಲೆಮನ್ ಗ್ರಾಸ್ ತಂಬುಳಿ ರೆಡಿ!

ಇದೇ ರೀತಿ ಕೊತ್ತುಂಬರಿ ಸೊಪ್ಪಿನ ತಂಬುಳಿಯನ್ನೂ ಮಾಡುತ್ತಾರೆ. : -
ಒಂದು ಪುಷ್ಠಿ ಕೊತ್ತುಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಅದಕ್ಕೆ ಹೆಬ್ಬೆರಳಿನ ಗಾತ್ರದ ಶುಂಠಿ ಸೇರಿಸಿ ಕಾಯಿಯೊಂದಿಗೆ ಹಸಿಯಾಗಿ ಬೀಸಬೇಕು. ಇದು ನುಣ್ಣಗೆ ಬೀಸಲು ಸಾಧ್ಯವಿರುವುದರಿಂದ ಸೋಸುವ ತಾಪತ್ರವಿಲ್ಲ. ಹಾಗೇ ಬೀಸಿದ ಮಿಶ್ರಣಕ್ಕೆ ಮಜ್ಜಿಗೆ+ಉಪ್ಪು ಬೇಕಿದ್ದರೆ ನೀರು ಹಾಕಿ ಹದಮಾಡಿಕೊಳ್ಳುವುದು. ಈ ತಂಬುಳಿಗೆ ಬೆಲ್ಲ ಹಾಕಲೇಬಾರದು! ರುಚಿಗೆಡುತ್ತದೆ.

---------

ಕರಿಬೇವಿನ ತಂಬುಳಿ, ಈರುಳ್ಳಿ ತಂಬುಳಿ, ವಿಟಮಿನ್ ಎಲೆಯ ತಂಬುಳಿ, ಎಲವರಿಗೆ ಕುಡಿಯ ತಂಬುಳಿ - ಹೀಗೆ ಹತ್ತು ಹಲವುಬಗೆಯ ತಂಬುಳಿಗಳಿವೆ... ಆಸಕ್ತರು ನನ್ನನ್ನು ಮೈಲ್ ಮೂಲಕ ಸಂಪರ್ಕಿಸಬಹುದು :).

-ತೇಜಸ್ವಿನಿ ಹೆಗಡೆ.