Tuesday, December 28, 2010

ಕೊರೆವ ಚಳಿಗೆ ಸಾಥ್ ನೀಡುವ ಅಪ್ಪೆಮಿಡಿ ಬೆಳ್ಳುಳ್ಳಿ ಚಟ್ನಿ


ಇದನ್ನು ಅಪ್ಪಟ ಉತ್ತರಕನ್ನಡದ ಚಟ್ನಿಯೆನ್ನಬಹುದು. ನಮ್ಮಲ್ಲಿ ಅಂದರೆ ಶಿರಸಿಯಕಡೆ ಉಪ್ಪಿನಲ್ಲಿ ಹಾಕಿದ ಮಾವಿನಮಿಡಿಗೆ ಅಪ್ಪೆಮಿಡಿ ಎನ್ನುತ್ತೇವೆ. ಇದನ್ನು ವಿಶೇಷವಾಗಿ ಬಾಣಂತಿಯರಿಗಾಗಿ ತಯಾರಿಸುತ್ತಾರಾದರೂ, ಎಲ್ಲರೂ ಎಲ್ಲಾ ಕಾಲದಲ್ಲೂ ಇಷ್ಟಪಡುವಂತಹ ಈ ಚಟ್ನಿಯನ್ನು ದೋಸೆ, ಚಪಾತಿ, ಅನ್ನಕ್ಕೆ ಹಾಕಿ ಸೇವಿಸಬಹುದಾಗಿದೆ.

ಅಪ್ಪೆಮಿಡಿ ಬೆಳ್ಳುಳ್ಳಿ ಚಟ್ನೆಯು ಬಹು ಉಪಯೋಗಿಯಾಗಿದೆ. ತಯಾರಿಸಲೂ ಬಲು ಸುಲಭ. ತುಂಬಾ ಸ್ವಾದಭರಿತ ಹಾಗೂ ಆರೋಗ್ಯಕರವಾದುದು ಕೂಡ. ಇದನ್ನು ತಯಾರಿಸಲು ಬಳಸುವ ಬೆಳ್ಳುಳ್ಳಿ ಗ್ಯಾಸ್ಟ್ರಿಕ್ ಸಮಸ್ಯೆ, ರಕ್ತ ಶುದ್ಧೀಕರಣಕ್ಕೆ ತುಂಬಾ ಉಪಯುಕ್ತವಾದರೆ ಕರಿಮೆಣಸಿನ ಕಾಳು(Pepper) ಶೀತ, ಕೆಮ್ಮಿಗೆ ರಾಮಬಾಣ.  ಹಾಗಾಗಿಯೇ ಈ ಚಟ್ನೆಯನ್ನು ಬಾಣಂತಿಯರ ಚಟ್ನೆಯೆಂದೂ ಹೇಳುತ್ತಾರೆ. 
ಬಾಣಂತಿಯರು ಈ ಚಟ್ನಿಯನ್ನು ಊಟದ ಪ್ರಾರಂಭದಲ್ಲಿ ಒಂದು ಚಮಚ ಚಟ್ನಿಗೆ ಒಂದು ಚಮಚ ತುಪ್ಪವನ್ನು ಹಾಕಿ ಸೇವಿಸಿದರೆ ತುಂಬಾ ಉತ್ತಮ.

-------------------------------------------

ಬೇಕಾಗುವ ಸಾಮಗ್ರಿಗಳು

೧. ಬೆಳ್ಳುಳ್ಳಿ - ೧೦ ಎಸಳು (ಸುಮಾರು ಒಂದು ಗಡ್ಡೆ)
೨. ಅಪ್ಪೆಮಿಡಿ - ಮೂರು (೩)
೩. ಕಡ್ಡಿಮೆಣಸು (ಕೆಂಪು ಮೆಣಸು) - ೨
೪. ತೆಂಗಿನ ಕಾಯಿ - ಅರ್ಧ ಭಾಗ.
೫. ಕರಿಮೆಣಸಿನ ಕಾಳು (Pepper) - ೧ ಚಮಚ.

ವಿ.ಸೂ. :- ೧. ಈ ಚಟ್ನೆಯನ್ನು ಬಾಣಂತಿಯರಿಗಾಗಿಯೇ ತಯಾರಿಸುವಾಗ, ಕೇವಲ ಕರಿಮೆಣಸನ್ನೇ ಬೇಕಿದ್ದರೆ ಸ್ವಲ್ಪ ಜಾಸ್ತಿ                          
                  ಪ್ರಮಾಣದಲ್ಲಿ ಹಾಕಿ. ಕೆಂಪುಮೆಣಸನ್ನು ಬಳಸದಿದ್ದರೆ ಒಳ್ಳೆಯದು.

              ೨. ಉಪ್ಪಿನಲ್ಲಿ ಹಾಕಿದ ಮಿಡಿಯನ್ನೇ ಬಳಸುವುದರಿಂದ ಮೇಲಿನಿಂದ ಉಪ್ಪನ್ನು ಹಾಕದಿದ್ದರೆ ಒಳಿತು.

-------------------------------

ತಯಾರಿಸುವ ವಿಧಾನ 

೧. ಮೊದಲಿಗೆ ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಸಿಪ್ಪೆಯನ್ನು ಸುಲಿದಿಟ್ಟುಕೊಳ್ಳಬೇಕು. ಅಪ್ಪೆಮಿಡಿಗಳನ್ನು ಚೆನ್ನಾಗಿ ತೊಳೆದು ಸಣ್ಣ ಚೂರಾಗಿಸಿಟ್ಟುಕೊಳ್ಳಬೇಕು.

೨. ಬಾಣಲೆಗೆ ೨ ಚಮಚ ತೆಂಗಿನೆಣ್ಣೆಯನ್ನು ಹಾಕಿ ಮೊದಲಿಗೆ ಬೆಳ್ಳುಳ್ಳಿಯನ್ನು ಹುರಿಯಬೇಕು. ಬೆಳ್ಳುಳ್ಳಿ ಎಸಳುಗಳು ಕಂದುಬಣ್ಣಕ್ಕೆ ತಿರುಗತೊಡಗಿದ್ದಾಗ, ಕಡ್ಡಿಮೆಣಸು ಚೂರುಗಳು ಹಾಗೂ ಮಾವಿನಮಿಡಿ ಚೂರುಗಳನ್ನು ಹಾಕಿ, ಮಿಡಿಯ ಚೂರುಗಳು ತುಸು ಬಾಡುವತನಕ ಹುರಿಯಬೇಕು.

೩. ಹುರಿದ ಪದಾರ್ಥಗಳು ಚೆನ್ನಾಗಿ ತಣಿದ ನಂತರ ಕಾಯಿತುರಿ ಹಾಗೂ ಕಾಳುಮೆಣಸನ್ನು ಜೊತೆಗೆ ಹಾಕಿ ನುಣ್ಣನೆ ರುಬ್ಬಬೇಕು.
ಬಾಯಲ್ಲಿ ನೀರೂರಿಸುವ, ಆರೋಗ್ಯಕರ ಚಟ್ನಿ ಈಗ ತಿನ್ನಲು ರ್‍ಎಡಿ.

ಈ ಚಟ್ನೆಯನ್ನು ತಯಾರಿಸಿದ ನಂತರ ಸ್ವಲ್ಪ ನೀರನ್ನು ಹಾಕಿ ಕುದಿಸಿ, ಆರಿಸಿ, ಗಾಳಿಯಾಡದ ಡಬ್ಬಿಯಲ್ಲಿ ಹಾಕಿ, ಫ್ರಿಜ್‌ನಲ್ಲಿಟ್ಟರೆ, ಚಟ್ನೆ ಒಂದುವಾರದವರೆಗೂ ಬಳಕೆಗೆ ಬರುತ್ತದೆ. ಅದರ ಸ್ವಾದವೂ ಕೆಡುವುದಿಲ್ಲ.

[@ದಟ್ಸ್‌ಕನ್ನಡದಲ್ಲಿ ಬರುತ್ತಿದ್ದ ನನ್ನ "ಶಿರಸಿ ಭವನ" ಅಂಕಣದಲ್ಲಿ ಪ್ರಕಟಿತ.]

-ತೇಜಸ್ವಿನಿ ಹೆಗಡೆ

Wednesday, December 22, 2010

ದಿಢೀರ್ ರವಾಮಸಾಲ್‌ದೋಸೆ




ಕೆಲವೊಮ್ಮೆ ಬೆಳಗಿನ ತಿಂಡಿಗೋ ಇಲ್ಲಾ ಸಾಯಂಕಲಕ್ಕೋ ಏನು ಮಾಡಬೇಕೆಂದೇ ತೋರುವುದಿಲ್ಲ. ಸಮಯದ ಅಭಾವ ಇದ್ದರಂತೂ ತುಂಬಾ ಗಡಿಬಿಡಿ ಆಗುವುದು ಸಹಜವೇ. ಏನೋ ಒಂದು ತಿಂಡಿ ಬೇಗನೆ ತಯಾರಿಸಬೇಕು ಎಂದೆನಿಸುತ್ತದೆ. ಜೊತೆಗೆ ಬಾಯಿಗೆ ರುಚಿಕರವಾಗಿಯೂ ಇದ್ದರೆ ಎಷ್ಟು ಚೆನ್ನಾ ಎಂದೂ ಎನಿಸುತ್ತದೆ. ಹಾಗಿದ್ದಲ್ಲಿ ಈ ದೋಸೆ ಒಂದು ಉತ್ತಮ ತಿಂಡಿ ಎನ್ನಬಹುದು. ಧಿಢೀರನೆ ಅತಿಥಿಗಳು ಬಂದಾಗಲೂ ಈ ದೋಸೆಯನ್ನು ಮಾಡಿ ಬಡಿಸಬಹುದು. ತುಂಬಾ ಸ್ವಾದಿಷ್ಟವಾಗಿರುತ್ತದೆ.

ರವೆಯನ್ನು ಇಡ್ಲಿ, ದೋಸೆ ಹಾಗೂ ಹಲ್ವಗಳ ತಯಾರಿಕೆಗಳಲ್ಲಿ ಮುಖ್ಯವಾಗಿ ಬಳಸುತ್ತಾರೆ. ಬಾಣಂತಿಯರಿಗೆ ರವೆ ಗಂಜಿಯನ್ನು ವಿಷೇಶವಾಗಿ ನೀಡುತ್ತಾರೆ. ರವೆ ಗಂಜಿ ತುಂಬಾ ಪೌಷ್ಠಿಕ. ಇದು ಎದೆಹಾಲು ಉತ್ಪತ್ತಿಗೆ ಹಾಗೂ ಹೆರಿಗೆಯ ನಂತರದ ಹೊಟ್ಟೆಯೊಳಗಿನ ಗಾಯ ಮಾಗುವುದಕ್ಕೂ(ಆಪೇರೇಷನ್ ಆಗಿದ್ದರೆ) ತುಂಬಾ ಸಹಕಾರಿಯಾಗಿದೆ. ರವೆಗಂಜಿಯನ್ನಲ್ಲದೇ ರವಾ ಶಿರವನ್ನೂ(ರವಾ ಕೇಸರಿ ಬಾತ್) ಮಾಡಿಕೊಡುತ್ತಾರೆ.

ಸ್ವಲ್ಪ ರವೆಗೆ ೨ ಚಮಚ ತುಪ್ಪವನ್ನು ಹಾಕಿ ಹುರಿದು ಅದಕ್ಕೆ ಬೇಕಿದ್ದರೆ ಸ್ವಲ್ಪ ಏಲಕ್ಕಿ ಪುಡಿ ಹಾಗೂ ರುಚಿಗೆ ಬೇಕಾದಷ್ಟು ಸಕ್ಕರೆಯನ್ನು ಸೇರಿಸಿ, ಒಂದು ಲೋಟ ಹಾಲನ್ನು ಹಾಕಿ ಕದಕಿದರೆ ರವಾಗಂಜಿ ತಯಾರು.

ರವಾಮಸಾಲ್‌ದೋಸೆಯನ್ನು ತಯಾರಿಸುವಾಗ ಸಣ್ಣರವೆಯನ್ನು ಬಳಸಿದರೆ ಉತ್ತಮ. ದೋಸೆ ಹೊಯ್ಯಲು ಸುಲಭವಾಗುವುದಲ್ಲದೇ ಮೃದುವಾಗಿಯೂ ಇರುತ್ತದೆ. ಕೆಳಗಿನಳತೆಯ ಸಾಮಗ್ರಿಗಳಿಂದ ಸುಮಾರು ೬-೮ ದೋಸೆಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

* ಸಣ್ಣರವೆ - ಒಂದು ಲೋಟ(ದೊಡ್ಡ ಗಾತ್ರದ್ದು)
* ಶುಂಠಿ - ಒಂದು ಇಂಚು
* ಹಸಿಮೆಣಸು - ಖಾರಕ್ಕೆ ತಕ್ಕಂತೆ. ತುಂಬಾ ಖಾರವಿದ್ದರೆ ಒಂದೇ ಸಾಕು.
* ಕೊತ್ತಂಬರಿಸೊಪ್ಪು - ಒಂದು ಹಿಡಿ
* ಬೇವಿನ ಸೊಪ್ಪು - ಸುಮಾರು ಅರ್ಧ ಹಿಡಿಯಷ್ಟು
* ಕಾಯಿತುರಿ - ೧-೨ ಚಮಚ
* ಈರುಳ್ಳಿ - ೧ ಗಡ್ಡೆ (ದೊಡ್ಡ ಗಾತ್ರದ್ದಾದರೆ ಅರ್ಧ ಮಾತ್ರ ಸಾಕು)
* ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ

* ಮೊದಲು ಸಣ್ಣರವೆಯನ್ನು ತೊಳೆದು ನೀರನ್ನು ಬಸಿದಿಟ್ಟುಕೊಳ್ಳಬೇಕು. ತುಸು ಹೊತ್ತಿನಲ್ಲಿಯೇ ಅದು ತುಂಬಾ                 ಮೃದುವಾಗುತ್ತದೆ. 
* ಕೊತ್ತಂಬರಿ ಸೊಪ್ಪು, ಬೇವಿನ ಸೊಪ್ಪು, ಹಸಿಮೆಣಸು, ಶುಂಠಿ ಹಾಗೂ ಈರುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಬೇಕು.
* ಹೆಚ್ಚಿಟ್ಟ ಸಾಮಗ್ರಿಗಳನ್ನು ಕಾಯಿತುರಿಯೊಂದಿಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಬೇಕು.
* ರುಬ್ಬಿದ ಮಿಶ್ರಣವನ್ನು ರವೆಯೊಂದಿಗೆ ಸೇರಿಸಿ ಉಪ್ಪನ್ನು ಹಾಕಿ ಒಮ್ಮೆ ಮಿಕ್ಸರ್‌ಗೆ ಹಾಕಿ ರುಬ್ಬಬೇಕು.
* ಬೇಕಿದ್ದರೆ ಸ್ವಲ್ಪ ನೀರನ್ನು ಸೇರಿಸಿ ದೋಸೆಹಿಟ್ಟಿನ ಹದಕ್ಕೆ ತರಬೇಕು.
* ಬಾಣಲೆಯನ್ನು ಕಾಯಲಿಟ್ಟು ದೋಸೆಹಿಟ್ಟನ್ನು ತೆಳ್ಳಗೆ ಹೊಯ್ಯಬೇಕು.
* ಬಾಯಲ್ಲಿ ನೀರೂರಿಸುವ ಈ ದೋಸೆಯನ್ನು ಹಾಗೆಯೇ ತಿನ್ನಬಹುದು. ಜೊತೆಗೆ ಬೇರೆ ಪದಾರ್ಥವಾಗಲೀ, ಚಟ್ನಿಯಾಗಲೀ ಬೇಕೆಂದೆನಿಸುವುದಿಲ್ಲ.

[@ದಟ್ಸ್‌ಕನ್ನಡದಲ್ಲಿ ಬರುತ್ತಿದ್ದ ನನ್ನ "ಶಿರಸಿ ಭವನ" ಅಂಕಣದಲ್ಲಿ ಪ್ರಕಟಿತ.]

-ತೇಜಸ್ವಿನಿ ಹೆಗಡೆ


Wednesday, December 15, 2010

ಚುಮು ಚುಮು ಚಳಿಗೆ ಬಿಸಿ ಬಿಸಿ ಕಷಾಯ...




ಇನ್ನೇನು ಚಳಿಗಾಳಿ, ಶೀತ ಕಾಡತೊಡಗುತ್ತದೆ. ಹೀಗಿರುವಾಗ ಬಿಸಿ ಬಿಸಿ ಕಾಫಿ ಕುಡಿಯುವ ಮನಸಾಗುವುದು ಸಹಜ. ಆದರೆ ಕಾಫಿ, ಟೀ ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ ಎನ್ನುವುದು ಪ್ರಶ್ನೆ. ಗೂಗಲ್ ಮಾಡಿದರೆ ನಿಮಗೆ ಕಾಫಿಯ ಸತತ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ದೊಡ್ಡ ಲಿಸ್ಟೇ ಸಿಗುವುದು! ಹೀಗಿರುವಾಗ ಚಳಿಯನ್ನೋಡಿಸುವ, ರುಚಿಕರವಾಗಿರುವ ಜೊತೆಗೆ ಆರೋಗ್ಯಕರವೂ ಆಗಿರುವ ಪೇಯವೊಂದರ ಅಗತ್ಯತೆ ಚೆನ್ನಾಗಿ ಅರಿವಾಗುತ್ತದೆ. ನಮ್ಮಲ್ಲಿ ಅಂದರೆ ಶಿರಸಿಯ ಕಡೆ ಯಾರೇ ಬರಲಿ.. "ಒಂದು ಕುಡ್ತೆ ಕಷಾಯ"ವನ್ನಾದರೂ ಕೊಟ್ಟೇ ಕಳಿಸುವುದು ವಾಡಿಕೆ. ಊಟದ ಸಮಯವೇ ಆಗಿರಲಿ, ಇಲ್ಲಾ ಹೊದ್ದು ಮಲಗುವ ಸಮಯವೇ ಆಗಿರಲಿ... ಕಷಾಯ ನಮ್ಮ ಹಸಿವನ್ನು ತಣಿಸದು, ನಿದ್ದೆಯನ್ನು ಆರಿಸದು. ಬದಲಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಸುಖಕರವಾದ ನಿದ್ದೆಗೆ ಪ್ರೇರೇಪಿಸುವುದು. ಇಂತಹ ಕಷಾಯವನ್ನು ತಯಾರಿಸಲು ನಿಮಗೆ ತಗಲುವ ಸಮಯ ಕೇವಲ ೨-೩ ನಿಮಿಷ! ಆದರೆ ಮೊದಲು ಕಷಾಯದ ಹುಡಿಯನ್ನು ಮಾಡಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ. ಇದನ್ನು ತಯಾರಿಸಲು ತಗಲುವುದು ಕೇವಲ ೧೫ ನಿಮಿಷ. ಹೀಗೆ ತಯಾರಿಸಿಟ್ಟುಕೊಂಡ ಹುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳುಗಟ್ಟಲೆ ಬರುವುದು. ಈ ಪುಡಿಯನ್ನು ಉಪಯೋಗಿಸಿಯೇ ಕಷಾಯದ ಪೇಯವನ್ನು ತಯಾರಿಸುವುದು.

ಮೊದಲಿಗೆ ಕಷಾಯದ ಹುಡಿಯನ್ನು ಮಾಡುವ ವಿಧಾನ 

ಬೇಕಾಗುವ ಸಾಮಗ್ರಿಗಳು :

೧. ಕೊತ್ತುಂಬರಿ ಬೀಜ - ೧/೨ ಲೋಟ
೨. ಜೀರಿಗೆ - ೧ ಲೋಟ 
೩. ದಾಲ್ಚೀನಿ ಚಕ್ಕೆ -  ಹೆಬ್ಬೆರಳಿನ ಗಾತ್ರದಷ್ಟು
೪. ಲವಂಗ - ೫-೬
೫. ಏಲಕ್ಕಿ - ೫-೬ (ಸಿಪ್ಪೆ ಸಹಿತ)
೬. ಕರಿ ಮೆಣಸಿನ ಕಾಳು - ೬
೭. ಬಡೇ ಸೊಪ್ಪು (ಸೋಂಪು) - ಒಂದು ಮುಷ್ಟಿ.

 (ಮೇಲೆ ಹೇಳಿರುವ ಲೋಟ, ಹೋಟೇಲಿನಲ್ಲಿ ಕಾಫಿ ಕುಡಿಯಲು ಕೊಡುವಷ್ಟು ಸಣ್ಣ ಲೋಟವೂ ಅಲ್ಲ, ಹಳ್ಳಿಯಲ್ಲಿ ಆತಿಥ್ಯಮಾಡುವಾಗ ಕೊಡುವಷ್ಟು ದೊಡ್ಡದೂ ಅಲ್ಲ. ಮಧ್ಯಮ ಗಾತ್ರದ್ದು...:))

ಹುಡಿಯನ್ನು ಮಾಡುವ ವಿಧಾನ :

*ಮೊದಲಿಗೆ ಜೀರಿಗೆ + ಲವಂಗ + ಏಲಕ್ಕಿ + ದಾಲ್ಚೀನಿ + ಕರಿ ಮೆಣಸಿನ ಕಾಳುಗಳು ಎಲ್ಲವನ್ನೂ ಒಂದು ಚೆನ್ನಾಗಿ ಒಣಗಿದ ಬಾಣಲೆಗೆ ಹಾಕಿ ಹಾಗೇ ಚೆನ್ನಾಗಿ ಹುರಿಯಬೇಕು. (* ನೆನಪಿಡಿ ಎಣ್ಣೆಯನ್ನು ಹಾಕಿ ಹುರಿಯುವುದಲ್ಲ.) ಸುಮಾರು ಐದು ನಿಮಿಷದೊಳಗೇ ಕೆಂಪಗೆ ಹುರಿದು ಅದರ ಘಮ ಘಮ ಪರಿಮಳ ನಿಮ್ಮನ್ನಡರುವುದು. 

*ಹಾಗೆ ಹುರಿದ ಪದಾರ್ಥಗಳನ್ನು, ಒಣಗಿದ ಮಿಕ್ಸಿಯಲ್ಲಿ ಹಾಕಿಡಿ. ತದನಂತರ ಅದೇ ಬಾಣಲೆಗೆ ಕುತ್ತೊಂಬರಿ ಬೀಜವನ್ನು ಹಾಕಿ ಮೊದಲಿನಂತೇ ಚೆನ್ನಾಗಿ ಹುರಿಯಿರಿ. ಕೇವಲ ೨ ನಿಮಿಷದೊಳಗೆ ಕೆಂಪಗೆ ಹುರಿದು ಬರುತ್ತದೆ. ಅದನ್ನೂ ಮಿಕ್ಸಿಯಲ್ಲಿ ಮೊದಲೇ ಹಾಕಿಟ್ಟಿದ್ದ ಮಿಶ್ರಣಕ್ಕೆ ಹಾಕಿಕೊಳ್ಳಿ.

*ನಂತರ ಮತ್ತೆ ಅದೇ ಬಾಣಲೆಯಲ್ಲಿ ಸೋಂಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದೂ ಸಹ ಕೂಡಲೇ ಒಂದೆರಡು ನಿಮಿಷಗಳೊಳಗೇ ಹುರಿದುಬರುತ್ತದೆ. 

*ಕೊನೆಯಲ್ಲಿ ಎಲ್ಲಾ ಮಿಶ್ರಣವನ್ನೂ ಒಟ್ಟಿಗೇ  ಸೇರಿಸಿ, ಮಿಕ್ಸಿಯಲ್ಲಿ ನುಣ್ಣಗೆ ಹುಡಿಮಾಡಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟರೆ ಘಮ ಘಮಿಸುವ ಕಷಾಯದ ಹುಡಿ ಉಪಯೋಗಕ್ಕೆ ಸಿದ್ಧ.

ಕಷಾಯ ಪೇಯವನ್ನು ಮಾಡುವ ವಿಧಾನ

ಇದು ಬಹಳ ಸುಲಭ.  ಒಂದು ಕಪ್ ಅಳತೆಯಲ್ಲಿ ಹೇಳುವುದಾದರೆ ... 

ಮೊದಲು ಅರ್ಧ ಲೊಟ ನೀರಿಗೆ ಒಂದು ಚಮಚ ಮೊದಲೇ ಮಾಡಿಟ್ಟಿದ್ದ ಕಷಾಯದ ಹುಡಿಯನ್ನು ಹಾಕಿ ಕುದಿಸಿ. ಕುದಿ ಬರುತ್ತಿದೆ ಎನ್ನುವಾಗಲೇ ಅರ್ಧ ಲೋಟ ಹಾಲು (ಬೇಕಿದ್ದರೆ ಹಾಲು ಹಾಕದೆಯೋ ಇಲ್ಲಾ ಸ್ವಲ್ಪವೇ ಹಾಲನ್ನು ಹಾಕಿಯೋ ಮಾಡಬಹುದು) ಹಾಕಿ ಬಿಸಿ ಮಾಡಿದರೆ ಕಷಾಯ ರೆಡಿ. ಸಿಹಿ ಬೇಕಿದ್ದವರು ಒಂದು ಚಮಚ ಸಕ್ಕರೆ ಹಾಕಿ ಸೇವಿಸಬಹುದು. ಇನ್ನು ಮಕ್ಕಳಿಗೆ ಬರೀ ಹಾಲಿನಲ್ಲೇ ಕಷಾಯವನ್ನು ಮಾಡಿ ಕೊಟ್ಟರೆ ಮತ್ತೂ ಉತ್ತಮ. (ನೀರನ್ನು ತೀರಾ ಕಡಿಮೆ ಹಾಕಿಯೋ ಇಲ್ಲಾ ಹಾಕದೆಯೂ..).

ವಿಶೇಷ ಸೂಚನೆ : - ಬೇಕಿದ್ದಲ್ಲಿ ಕಷಾಯದ ಹುಡಿಯನ್ನು ನೀರಿಗೆ ಹಾಕಿ ಕುದಿಸುವಾಗ ಕಾಲು ಚಮಚ ಜ್ಯೇಷ್ಠ ಮದ್ದಿನ ಹುಡಿ (ಎಲ್ಲಾ ಆಯುರ್ವೇದಿಕ್ ಅಂಗಡಿಗಳಲ್ಲಿ ಲಭ್ಯ)ಹಾಕಿ ಕುದಿಸಿ, ಹಾಲು ಹಾಕಿ ಕುಡಿದರೆ ಮತ್ತೂ ಉತ್ತಮ.

ಈ ಕಷಾಯವನ್ನು ಕುಡಿಯುವುದರಿಂದ ಆಗುವ ಉಪಯೋಗಗಳು ಹಲವು.

೧. ಯಾವುದೇ ರೀತಿಯ ಅಡ್ಡ ಪರಿಣಾಮಗಳುಂಟಾಗದು. ಯಾವ ಹೊತ್ತಿನಲ್ಲೂ ಎಷ್ಟು ಬೇಕಿದ್ದರೂ ಕುಡಿಯಬಹುದು.
೨. ಕಫ, ಗಂಟಲು ನೋವು, ಅಜೀರ್ಣದ ತೊಂದರೆ - ಈ ಎಲ್ಲಾ ಸಮಸ್ಯೆಗಳಿಗೂ ಇದು ಉತ್ತಮ ಪರಿಹಾರವಾಗಿದೆ.
೩. ಪಿತ್ತದ ಸಮಸ್ಯೆ ಇದ್ದವರು ಟೀ, ಕಾಫಿಯನ್ನು ಸೇವಿಸಲೇ ಬಾರದೆನ್ನುತ್ತಾರೆ ವೈದ್ಯರು. ಹಾಗಿರುವಾಗ ಈ ಪೇಯ ಅತ್ಯುತ್ತಮ ಬದಲಿಯಾಗಿದೆ.
೪. ಒಮ್ಮೆ ಈ ಕಷಾಯದ ರುಚಿ ಹತ್ತಿದವರು ಮತ್ತೊಮ್ಮೆ ಯಾವುದೇ ಕೆಫೆಯ ಕಡೆಯೂ ಹೆಜ್ಜೆ ಹಾಕರು.


-ತೇಜಸ್ವಿನಿ ಹೆಗಡೆ.